ಕಮಿಂದು ಮೆಂಡಿಸ್ ಮಿಂಚಿಂಗ್: ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿ
Kamindu Mendis Records: 2022 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ 25 ವರ್ಷದ ಕಮಿಂದು ಮೆಂಡಿಸ್ ಈವರೆಗೆ 8 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 4 ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಕಮಿಂದು ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ಬರೆಯುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾರೆ.
Updated on: Sep 28, 2024 | 9:19 AM

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೀಲಂಕಾ ತಂಡದ ಬ್ಯಾಟರ್ ಕಮಿಂದು ಮೆಂಡಿಸ್ ಹೊಸ ದಾಖಲೆ ಬರೆದಿದ್ದಾರೆ. ಅದು ಸಹ ಸತತವಾಗಿ 8 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ಗಳಿಸುವ ಮೂಲಕ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಿದ ಮೊದಲ 8 ಪಂದ್ಯಗಳಲ್ಲೂ 50+ ಸ್ಕೋರ್ಗಳಿಸಿದ ವಿಶ್ವ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ಇದೀಗ ಕಮಿಂದು ಮೆಂಡಿಸ್ ಪಾಲಾಗಿದೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಪಾಕಿಸ್ತಾನದ ಸೌದ್ ಶಕೀಲ್ ಹೆಸರಿನಲ್ಲಿತ್ತು. ಪಾಕ್ ತಂಡದ ಎಡಗೈ ಬ್ಯಾಟರ್ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50+ ಸ್ಕೋರ್ಗಳಿಸುವ ಮೂಲಕ ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದರು. ಇದೀಗ 8ನೇ ಬಾರಿ ಅರ್ಧಶತಕಕ್ಕಿಂತ ಹೆಚ್ಚಿನ ರನ್ಗಳಿಸುವ ಮೂಲಕ ಕಮಿಂದು ಈ ದಾಖಲೆ ಮುರಿದಿದ್ದಾರೆ.

ಗಾಲೆಯಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ 250 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ ಅಜೇಯ 182 ರನ್ ಬಾರಿಸಿದ್ದಾರೆ. ಈ ಭರ್ಜರಿ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ 8 ಪಂದ್ಯಗಳಲ್ಲೂ 50+ ಸ್ಕೋರ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು.

ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಪಂದ್ಯಗಳ ಮೂಲಕ 1000 ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು 7 ಪಂದ್ಯಗಳ ಮೂಲಕ ಸಾವಿರ ರನ್ ಪೂರೈಸಿದ ಆಸ್ಟ್ರೇಲಿಯಾ ಮಾಜಿ ದಂತಕಥೆ ಡಾನ್ ಬ್ರಾಡ್ಮನ್. ಇದೀಗ 8ನೇ ಪಂದ್ಯದ ಮೂಲಕ 1000 ರನ್ ಪೂರೈಸಿ ಕಮಿಂದು ಮೆಂಡಿಸ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಕಮಿಂದು ಮೆಂಡಿಸ್ ಬಾರಿಸಿದ 182 ರನ್ಗಳ ಅಜೇಯ ಶತಕದ ನೆರವಿನಿಂದ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 602 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ. ಅತ್ತ ಮೊದಲ ಇನಿಂಗ್ಸ್ ಶುರು ಮಾಡಿರುವ ನ್ಯೂಝಿಲೆಂಡ್ ತಂಡವು ದ್ವಿತೀಯ ದಿನದಾಟದ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 22 ರನ್ ಕಲೆಹಾಕಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




