- Kannada News Photo gallery Cricket photos Mumbai Indians become first T20 franchise to play 300 matches
ಟಿ20 ಲೀಗ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಮುಂಬೈ ಇಂಡಿಯನ್ಸ್
IPL 2026 MI vs KKR: ಐಪಿಎಲ್ನ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ಕೇವಲ 19.1 ಓವರ್ಗಳಲ್ಲಿ ಚೇಸ್ ಮಾಡಿದೆ.
Updated on: Mar 30, 2026 | 7:33 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ (Mumbai Indians) ತಂಡ ಭರ್ಜರಿ ದಾಖಲೆ ನಿರ್ಮಿಸಿದೆ. ಅದು ಕೂಡ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಯಾವುದೇ ತಂಡ ನಿರ್ಮಿಸದ ವಿಶ್ವ ದಾಖಲೆ ಎಂಬುದು ವಿಶೇಷ.

ಹೌದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಲೀಗ್ ಕ್ರಿಕೆಟ್ನಲ್ಲಿ 300 ಪಂದ್ಯಗಳನ್ನಾಡಿದ ಸಾಧನೆ ಮಾಡಿದೆ. ಈ ಮೂಲಕ ಲೀಗ್ ಕ್ರಿಕೆಟ್ನಲ್ಲಿ 300 ಪಂದ್ಯಗಳನ್ನಾಡಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 278 ಪಂದ್ಯಗಳನ್ನಾಡಿದ್ದರೆ, ಚಾಂಪಿಯನ್ಸ್ ಲೀಗ್ನಲ್ಲಿ 22 ಮ್ಯಾಚ್ಗಳನ್ನಾಡಿದೆ. ಈ ಮೂಲಕ ಫ್ರಾಂಚೈಸಿ ಲೀಗ್ ಟಿ20 ಟೂರ್ನಿಯಲ್ಲಿ 300 ಮ್ಯಾಚ್ಗಳನ್ನಾಡಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ಇನ್ನು ಈ ಮುನ್ನೂರು ಮ್ಯಾಚ್ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು 163 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 131 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನುಳಿದ 6 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದ್ದವು. ಇದರ ನಡುವೆ 7 ಟ್ರೋಫಿಗಳನ್ನು ಸಹ ಎತ್ತಿ ಹಿಡಿದಿದೆ.

ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಚಾಂಪಿಯನ್ಸ್ ಲೀಗ್ನಲ್ಲಿ 2 ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಐಪಿಎಲ್ನ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಈ ಯಶಸ್ಸಿನೊಂದಿಗೆ ಇದೀಗ 300 ಪಂದ್ಯಗಳನ್ನಾಡಿದ ವಿಶ್ವದ ಏಕೈಕ ತಂಡವೆಂಬ ಹೆಗ್ಗಳಿಕೆಯನ್ನು ಕೂಡ ಮುಂಬೈ ಇಂಡಿಯನ್ಸ್ ತಂಡ ತನ್ನದಾಗಿಸಿಕೊಂಡಿದೆ.
