ಯಾರಿಗೂ ಸಾಧ್ಯವಾಗದೇ ಇರುವುದನ್ನು ಸಾಧಿಸಿ ತೋರಿಸಿದ ಪಾತುಮ್ ನಿಸ್ಸಂಕಾ
Pathum Nissanka: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಪರ ಆರಂಭಿಕನಾಗಿ ಕಣಕ್ಕಿಳಿದ ಪಾತುಮ್ ನಿಸ್ಸಂಕಾ 52 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 10 ಫೋರ್ಗಳನ್ನು ಒಳಗೊಂಡಂತೆ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ವಿಶೇಷ ದಾಖಲೆಯನ್ನು ಕೂಡ ಪಾತುಮ್ ನಿಸ್ಸಂಕಾ ತಮ್ಮದಾಗಿಸಿಕೊಂಡಿದ್ದಾರೆ.
Updated on: Feb 17, 2026 | 8:56 AM

T20 World Cup 2026: ಟಿ20 ವಿಶ್ವಕಪ್ 2026ರ ಮೊದಲ ಶತಕ ಮೂಡಿಬಂದಿದೆ. ಅದು ಸಹ ಶ್ರೀಲಂಕಾದ ಆರಂಭಿಕ ದಾಂಡಿಗ ಪಾತುಮ್ ನಿಸ್ಸಂಕಾ (Pathum Nissanka) ಬ್ಯಾಟ್ನಿಂದ. ಈ ಸೆಂಚುರಿ ಮೂಡಿಬಂದಿರುವುದು ಆಸ್ಟ್ರೇಲಿಯಾ ವಿರುದ್ಧ ಎಂಬುದೇ ಇಲ್ಲಿ ವಿಶೇಷ.

ಪಲ್ಲೆಕೆಲೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 30ನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್ಗಳಲ್ಲಿ 181 ರನ್ಗಳನ್ನು ಪೇರಿಸಿದರು.

182 ರನ್ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಪಾತುಮ್ ನಿಸ್ಸಂಕಾ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಆಸೀಸ್ ವೇಗಿಗಳನ್ನು ಟಾರ್ಗೆಟ್ ಮಾಡಿದ್ದ ನಿಸ್ಸಂಕಾ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ ಪಾತುಮ್ ಆಸ್ಟ್ರೇಲಿಯಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಲಾರಂಭಿಸಿದರು.

ಪರಿಣಾಮ ಪಾತುಮ್ ನಿಸ್ಸಂಕಾ ಬ್ಯಾಟ್ನಿಂದ 52 ಎಸೆತಗಳಲ್ಲಿ ಶತಕ ಮೂಡಿಬಂತು. ಈ ಶತಕದೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಆಸ್ಟ್ರೇಲಿಯಾ ವಿರುದ್ಧ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ನಿಸ್ಸಂಕಾ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ಪಾಕಿಸ್ತಾನದ ಉಮರ್ ಅಕ್ಮಲ್ ಹೆಸರಿನಲ್ಲಿತ್ತು. 2014 ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಉಮರ್ ಅಕ್ಮಲ್ 94 ರನ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ ಆಸ್ಟ್ರೇಲಿಯಾ ಬೌಲರ್ಗಳ ಬೆಂಡೆತ್ತುವ ಮೂಲಕ ಪಾತುಮ್ ನಿಸ್ಸಂಕಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿದ ನಿಸ್ಸಂಕಾ 5 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 100 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಶ್ರೀಲಂಕಾ ತಂಡವು 18 ಓವರ್ಗಳಲ್ಲಿ 184 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
