- Kannada News Photo gallery Cricket photos RCB have lost their 1st, 50th and 100th IPL match at Chinnaswamy stadium
IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB
IPL 2026 RCB vs DC: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 26ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ ಕಲೆಹಾಕಿದ್ದು 175 ರನ್ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.5 ಓವರ್ಗಳಲ್ಲಿ 179 ರನ್ಗಳಿಸಿ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಆರ್ಸಿಬಿ ಅವಮಾನಕರ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ.
Updated on: Apr 19, 2026 | 7:34 AM

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಆರು ತಂಡಗಳು ಒಂದೇ ಮೈದಾನದಲ್ಲಿ 100 ಪಂದ್ಯಗಳನ್ನಾಡಿದೆ. ಈ ನೂರು ಪಂದ್ಯಗಳ ಸಾಧನೆ ಮಾಡಿದ ಮೊದಲ ತಂಡ ಎಂದರೆ ಇಂಗ್ಲೆಂಡ್ನ ಸರ್ರೆ ಟೀಮ್. ಇದಾದ ಬಳಿಕ ಹ್ಯಾಂಪ್ಶೇರ್ ಸೇರಿದಂತೆ ಹಲವು ತಂಡಗಳು ಕೌಂಟಿ ಕ್ರಿಕೆಟ್ನಲ್ಲಿ ಒಂದೇ ಮೈದಾನದಲ್ಲಿ 100 ಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB).

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 100 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದೆ. ಆದರೆ ಈ ವಿಶೇಷ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಆರ್ಸಿಬಿ ಹೆಸರಿಗೆ ಹೀನಾಯ ದಾಖಲೆಯೊಂದು ಸೇರ್ಪಡೆಯಾಗಿದೆ.

ಅಂದರೆ ಒಂದೇ ಮೈದಾನದಲ್ಲಿ 100 ಪಂದ್ಯಗಳನ್ನಾಡಿದ ತಂಡಗಳ ಪೈಕಿ ಮೂರು ಸ್ಮರಣೀಯ ಮ್ಯಾಚ್ಗಳಲ್ಲಿ ಸೋಲನುಭವಿಸಿದ ಅಪಕೀರ್ತಿ ಆರ್ಸಿಬಿ ಪಾಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಮತ್ತು 50ನೇ ಹಾಗೂ 100ನೇ ಪಂದ್ಯದಲ್ಲಿ ಸೋಲುವ ಮೂಲಕ ಈ ಹೀನಾಯ ದಾಖಲೆ ಬರೆದಿದೆ.

2008 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಚೊಚ್ಚಲ ಪಂದ್ಯದಲ್ಲಿ ಆರ್ಸಿಬಿ ತಂಡವು ಕೆಕೆಆರ್ ವಿರುದ್ಧ 140 ರನ್ಗಳ ಹೀನಾಯ ಸೋಲನುಭವಿಸಿತ್ತು. ಈ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ್ದ ಆರ್ಸಿಬಿ 2015 ರಲ್ಲಿಇದೇ ಮೈದಾನದಲ್ಲಿ ತನ್ನ 50ನೇ ಪಂದ್ಯವಾಡಿತ್ತು. ಆದರೆ ಈ ಸ್ಮರಣೀಯ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್ಗಳಿಂದ ಪರಾಜಯಗೊಂಡಿತು.

ಇದೀಗ ಮತ್ತೊಂದು ಮೈಲುಗಲ್ಲಿನ ಪಂದ್ಯದಲ್ಲೂ ಸೋಲನುಭವಿಸಿದೆ. ಬೆಂಗಳೂರಿನಲ್ಲಿ ಕಣಕ್ಕಿಳಿದ 100ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ ಮೊದಲ ಮತ್ತು 50ನೇ ಹಾಗೂ 100ನೇ ಪಂದ್ಯಗಳನ್ನು ಸೋತ ವಿಶ್ವದ ಮೊದಲ ತಂಡವೆಂಬ ಅಪಕೀರ್ತಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿದೆ.




