- Kannada News Photo gallery Cricket photos RCB IPL 2026: Hazlewood Doubtful for First Two Games; Big Blow for Challengers?
IPL 2026: ಹೇಜಲ್‌ವುಡ್ ಎಷ್ಟು ಪಂದ್ಯಗಳಿಗೆ ಅಲಭ್ಯ? ಅವರನ್ನು ಬದಲಿಸುವವರ್ಯಾರು?
RCB IPL 2026: ಐಪಿಎಲ್ 2026ರ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಆಘಾತ ಎದುರಾಗಿದೆ. ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಮೊದಲ ಎರಡು ಪಂದ್ಯಗಳಲ್ಲಿ ಆಡುವುದು ಅನುಮಾನ. ಕಳೆದ ಆವೃತ್ತಿಯಲ್ಲಿ ತಂಡದ ಪ್ರಮುಖ ಅಸ್ತ್ರವಾಗಿದ್ದ ಹೇಜಲ್‌ವುಡ್ ಅನುಪಸ್ಥಿತಿ ಆರ್‌ಸಿಬಿಗೆ ದೊಡ್ಡ ಸವಾಲಾಗಲಿದೆ. ನ್ಯೂಜಿಲೆಂಡ್‌ನ ಜಾಕೋಬ್ ಡಫಿ ಅವರ ಬದಲಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದ್ದು, ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬುವ ನಿರೀಕ್ಷೆ ಇದೆ.
Updated on: Mar 17, 2026 | 9:37 PM

2026 ರ ಐಪಿಎಲ್ಗೆ ಎರಡು ವಾರಕ್ಕೂ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಈ ಲೀಗ್ನಲ್ಲಿ ಆಡುವ ವಿದೇಶಿ ಆಟಗಾರರು ತಮ್ಮ ತಮ್ಮ ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಆರ್ಸಿಬಿ ಜೀವಾಳ ವಿರಾಟ್ ಕೊಹ್ಲಿ ಕೂಡ ಇಂದು ಮಡದಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಲೀಗ್ನ ಮೊದಲ ಪಂದ್ಯ ಆರ್ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.

ಆದರೆ ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಪಾಳಯಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಈ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ. ಅಂದರೆ ಆರ್ಸಿಬಿ ತಮ್ಮ ಮೊದಲ ಎರಡು ಪಂದ್ಯಗಳನ್ನು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಸಿಎಸ್ಕೆ ವಿರುದ್ಧ ಆಡಲಿದೆ. ಈ ಪಂದ್ಯಗಳಲ್ಲಿ ಹೇಜಲ್‌ವುಡ್ ಆಡುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಗಾಯದಿಂದಾಗಿ ಬಹಳ ದಿನಗಳಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಹೇಜಲ್‌ವುಡ್ ಟಿ20 ವಿಶ್ವಕಪ್‌ನಲ್ಲಿಯೂ ಆಡಿರಲಿಲ್ಲ. ಆದಾಗ್ಯೂ ಐಪಿಎಲ್ಗೂ ಮುನ್ನ ಹೇಜಲ್‌ವುಡ್ ಚೇತರಿಸಿಕೊಂಡಿದ್ದು ಫಿಟ್ನೆಸ್ ಸರ್ಟಿಫಿಕೆಟ್ ಕೂಡ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ ಹೇಜಲ್‌ವುಡ್ ಮೊದಲ ಎರಡು ಪಂದ್ಯಗಳಲ್ಲಿ ಆಡಲಾಗುವುದಿಲ್ಲ ಎನ್ನಲಾಗುತ್ತಿದೆ.

ಈ ಸುದ್ದಿ ನಿಜವಾದರೆ, ಅದು ಆರ್‌ಸಿಬಿಗೆ ದೊಡ್ಡ ಹೊಡೆತವಾಗುತ್ತದೆ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹೇಜಲ್‌ವುಡ್ 22 ವಿಕೆಟ್‌ಗಳನ್ನು ಕಬಳಿಸಿದ್ದರು. ಹೀಗಾಗಿ ಅವರ ಅನುಪಸ್ಥಿತಿ ತಂಡವನ್ನು ಕೂಡುವುದು ಸತ್ಯ. ಆದಾಗ್ಯೂ ಅವರ ಬದಲಿಯಾಗಿ ತಂಡದಲ್ಲಿ ಬೌಲರ್ಗಳಿದ್ದು, ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದನ್ನು ನೋಡುವುದಾದರೆ..

ಹೇಜಲ್‌ವುಡ್ ಸ್ಥಾನವನ್ನು ತುಂಬುವುದು ಕಷ್ಟವಾದರೂ, ನ್ಯೂಜಿಲೆಂಡ್‌ನ ವೇಗದ ಬೌಲರ್ ಜಾಕೋಬ್ ಡಫಿ ತಂಡಕ್ಕೆ ನೆರವಾಗಬಲ್ಲರು. ನ್ಯೂಜಿಲೆಂಡ್‌ನ ಈ ಬಲಗೈ ವೇಗದ ಬೌಲರ್ ಟಿ20 ಕ್ರಿಕೆಟ್‌ನಲ್ಲಿ ನಂ. 1 ಬೌಲರ್ ಆಗಿದ್ದು, ಆಡಿರುವ 48 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 62 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಪ್ರತಿ ಓವರ್‌ಗೆ ಕೇವಲ 8 ರನ್‌ಗಳ ಎಕಾನಮಿ ದರವನ್ನು ಹೊಂದಿದ್ದಾರೆ.

ಇದು ಡಫಿಗೆ ಚೊಚ್ಚಲ ಐಪಿಎಲ್ ಆವೃತ್ತಿಯಾಗಿದೆ. ಆದಾಗ್ಯೂ ಜಾಕೋಬ್ ಡಫಿಯವರ ದೊಡ್ಡ ಶಕ್ತಿ ಎಂದರೆ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಮಿತವ್ಯಯದಿಂದ ಬೌಲಿಂಗ್ ಮಾಡುವ ಸಾಮರ್ಥ್ಯ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯ. ಅವರು ತಮ್ಮ ಎತ್ತರವನ್ನು ಬಳಸಿಕೊಂಡು ಬೌನ್ಸರ್ ಎಸೆಯುವುದರಲ್ಲಿ ನಿಸ್ಸೀಮರು ಹಾಗೆಯೇ ಬ್ಯಾಟ್ಸ್‌ಮನ್‌ಗಳನ್ನು ಮೋಸಗೊಳಿಸುವ ನಿಧಾನಗತಿಯ ಎಸೆತವನ್ನು ಸಹ ಹೊಂದಿದ್ದಾರೆ. ಆದಾಗ್ಯೂ ಢಪಿ ಆರ್‌ಸಿಬಿಯ ನಿರೀಕ್ಷೆಗಳನ್ನು ಪೂರೈಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
