- Kannada News Photo gallery Cricket photos Sunrisers Hyderabad Appoints Ishan Kishan as Captain for IPL 2026
IPL 2026: ಅಭಿಷೇಕ್ ಶರ್ಮಾ ಅಲ್ಲ.. SRH ತಂಡಕ್ಕೆ ನೂತನ ನಾಯಕ ನೇಮಕ
Ishan Kishan SRH Captain: ಐಪಿಎಲ್ 2026 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇಶಾನ್ ಕಿಶನ್ ಹೊಸ ನಾಯಕರಾಗಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಗಾಯದಿಂದಾಗಿ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರಿಂದ ಈ ಬದಲಾವಣೆ. ಟಿ20 ವಿಶ್ವಕಪ್‌ನಲ್ಲಿ ಇಶಾನ್ ಉತ್ತಮ ಪ್ರದರ್ಶನ ನೀಡಿದ್ದು, ನಾಯಕತ್ವಕ್ಕೆ ಆಯ್ಕೆಯಾಗಲು ಮುಖ್ಯ ಕಾರಣ. ಅಭಿಷೇಕ್ ಶರ್ಮಾ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಈ ಯುವ ನಾಯಕತ್ವದ ಮೇಲೆ ತಂಡದ ಭವಿಷ್ಯ ನಿಂತಿದೆ.
Updated on:Mar 18, 2026 | 5:47 PM

2026 ರ ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡಕ್ಕೆ ಹೊಸ ನಾಯಕನನ್ನು ನೇಮಿಸಿದೆ. ಕಳೆದ ಆವೃತ್ತಿಯಲ್ಲಿ ಈ ತಂಡದ ನಾಯಕತ್ವ ಹೊತ್ತಿದ್ದ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಈ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ಚುಕ್ಕಾಣಿಯನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ಗೆ ವಹಿಸಲಾಗಿದೆ.

ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಬದಲಾಗುವುದು ಈ ಮೊದಲೇ ಖಚಿತವಾಗಿತ್ತು. ಅದರಂತೆ ತಂಡದ ಯುವ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ ನಾಯಕತ್ವ ಸಿಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಅದೆಲ್ಲವನ್ನು ಸುಳ್ಳು ಮಾಡಿರುವ ಸನ್‌ರೈಸರ್ಸ್ ಆಡಳಿತ ಮಂಡಳಿ ಇಶಾನ್ ಕಿಶನ್ಗೆ ನಾಯಕತ್ವದ ಪಟ್ಟ ಕಟ್ಟಿದೆ.

ಇಶಾನ್ ಕಿಶನ್ಗೆ ತಂಡದ ನಾಯಕತ್ವವಹಿಸುವುದಕ್ಕೂ ಪ್ರಮುಖ ಕಾರಣವಿದೆ. ಅದೆನೆಂದರೆ, ಇತ್ತಿಚಿಗಷ್ಟೆ ಮುಗಿದ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಅತಿ ಹೆಚ್ಚು ರನ್ ಬಾರಿಸಿದ ಭಾರತದ ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಹೀಗಾಗಿ ಅವರಿಗೆ ತಂಡದ ನಾಯಕತ್ವವಹಿಸಲಾಗಿದೆ.

ಐಪಿಎಲ್ನಲ್ಲಿ ಆಡಿದ ಅಪಾರ ಅನುಭವ ಹೊಂದಿರುವ ಇಶಾನ್ ಕಿಶನ್ ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಒಂದೆಡೆ ಕಿಶನ್ಗೆ ತಂಡದ ನಾಯಕತ್ವವಹಿಸಿರುವ ಫ್ರಾಂಚೈಸಿ, ಅಭಿಷೇಕ್ ಶರ್ಮಾಗೆ ಉಪನಾಯಕನ ಜವಾಬ್ದಾರಿ ನೀಡಿದೆ. ಈ ಇಬ್ಬರು ಯುವ ಆಟಗಾರರ ಸಾರಥ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಇಶಾನ್ ಕಿಶನ್ ತಮ್ಮ ನಾಯಕತ್ವದಲ್ಲಿ ಮಾರ್ಚ್ 28 ರಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದಾರೆ. ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಶಾನ್ ಅವರಿಗೆ ನಾಯಕತ್ವದ ಅನುಭವ ಹೆಚ್ಚಿಲ್ಲ. ಆದಾಗ್ಯೂ, ಕೆಲವೇ ತಿಂಗಳುಗಳ ಹಿಂದೆ, ಅವರು ಜಾರ್ಖಂಡ್ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿಗೆ ಕೊಂಡೊಯ್ದಿದ್ದರು.
Published On - 5:35 pm, Wed, 18 March 26
