- Kannada News Photo gallery Cricket photos Vaibhav Sooryavanshi Creates New Record In IPL With Just 227 Balls
ಕೇವಲ 227 ಎಸೆತಗಳು… ವೈಭವ್ ಆರ್ಭಟಕ್ಕೆ ಐಪಿಎಲ್ ದಾಖಲೆ ಉಡೀಸ್
Vaibhav Sooryavanshi Records: ಐಪಿಎಲ್ನ 32ನೇ ಪಂದ್ಯದ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪೃಥ್ವಿ ಶಾ ಅವರ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ದಾಖಲೆಗಳೊಂದಿಗೆ ಐಪಿಎಲ್‌ನಲ್ಲಿ ಅತಿ ವೇಗವಾಗಿ ಹಾಗೂ ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
Updated on: Apr 23, 2026 | 7:13 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಕೇವಲ 227 ಎಸೆತಗಳಲ್ಲಿ ಎಂಬುದು ವಿಶೇಷ. ಈ 227 ಎಸೆತಗಳ ಮೂಲಕ ವೈಭವ್ ಮುರಿದಿರುವುದು ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು..!

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 8 ರನ್ ಮಾತ್ರ ಕಲೆಹಾಕಿದ್ದರು. ಈ ಎಂಟು ರನ್ಗಳೊಂದಿಗೆ ವೈಭವ್ ಐಪಿಎಲ್‌ನಲ್ಲಿ 500 ರನ್ಗಳನ್ನು ಪೂರೈಸಿದ್ದಾರೆ.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 500 ರನ್ ಗಳಿಸಿದ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ನ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ 260 ಎಸೆತಗಳ ಮೂಲಕ 500 ರನ್ ಪೂರೈಸಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಕನಿಷ್ಠ ಎಸೆತಗಳ ಮೂಲಕ ಐನೂರು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 14 ಇನಿಂಗ್ಸ್ ಆಡಿರುವ ವೈಭವ್ ಕೇವಲ 227 ಎಸೆತಗಳಲ್ಲಿ 500+ ರನ್ ಕಲೆಹಾಕಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 500 ರನ್ ಪೂರೈಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಐಪಿಎಲ್ ಇತಿಹಾಸದಲ್ಲಿ 500 ರನ್ ಕಲೆಹಾಕಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಪೃಥ್ವಿ ಶಾ (19 ವರ್ಷ) ಹೆಸರಿನಲ್ಲಿತ್ತು. ಇದೀಗ 15ನೇ ವಯಸ್ಸಿನಲ್ಲಿ ಐನೂರು ರನ್ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ.




