- Kannada News Photo gallery Cricket photos Vaibhav suryavanshi wont feature in the next u19 world cups
ಮುಂದಿನ ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿಗೆ ಇಲ್ಲ ಅವಕಾಶ..!
Vaibhav Suryavanshi: ವೈಭವ್ ಸೂರ್ಯವಂಶಿಗೆ ಈಗ 14 ವರ್ಷ. 2028 ರಲ್ಲಿ ಅವರಿಗೆ 16 ವರ್ಷ ಆಗಿರಲಿದೆ. ಹಾಗೆಯೇ 2030 ರಲ್ಲಿ 18 ವರ್ಷ ತುಂಬಲಿದೆ. ಇದಾಗ್ಯೂ ಮುಂದಿನ ಎರಡು ಅಂಡರ್-19 ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲು ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಬಿಸಿಸಿಐ ನಿಯಮ.
Updated on: Feb 09, 2026 | 7:35 AM

2026ರ ಅಂಡರ್-19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಯುವ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ (Vaibhav Suryavanshi). ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಈ ಪಂದ್ಯದಲ್ಲಿ ಕೇವಲ 80 ಎಸೆತಗಳನ್ನು ಎದುರಿಸಿದ ವೈಭವ್ 15 ಭರ್ಜರಿ ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 175 ರನ್ ಚಚ್ಚಿದ್ದರು. ಈ ಸ್ಫೋಟಕ ಶತಕದ ನೆರವಿನಿಂದಾಗಿ ಟೀಮ್ ಇಂಡಿಯಾ 50 ಓವರ್ಗಳಲ್ಲಿ 411 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 311 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 100 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನ ರೂವಾರಿ 14 ವರ್ಷದ ವೈಭವ್ ಸೂರ್ಯವಂಶಿ ಪಂದ್ಯ ಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದಾಗ್ಯೂ ಮುಂದಿನ ಅಂಡರ್-19 ವಿಶ್ವಕಪ್‌ನಲ್ಲಿ ವೈಭವ್ಗೆ ಚಾನ್ಸ್ ಸಿಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಬಿಸಿಸಿಐ ನಿಯಮ.

ಬಿಸಿಸಿಐ ನಿಯಮದ ಪ್ರಕಾರ, ಒಬ್ಬ ಭಾರತೀಯ ಆಟಗಾರ ತನ್ನ ಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ ಅಂಡರ್-19 ವಿಶ್ವಕಪ್‌ನಲ್ಲಿ ಭಾಗವಹಿಸಬಹುದು. ಅದರಂತೆ 14 ವರ್ಷದ ವೈಭವ್ ಸೂರ್ಯವಂಶಿ ಈಗಾಗಲೇ ಕಿರಿಯರ ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ 2028 ಮತ್ತು 2030 ರಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಆಡಲು ವೈಭವ್ಗೆ ಅವಕಾಶ ನೀಡಲಾಗುವುದಿಲ್ಲ.

ಕಿರಿಯ ಮಟ್ಟದ ಕ್ರಿಕೆಟ್‌ನಲ್ಲಿ ವಯಸ್ಸಿನ ವಂಚನೆಯನ್ನು ತಡೆಯುವುದು ಮತ್ತು ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವ ಸಲುವಾಗಿಯೇ ಬಿಸಿಸಿಐ ಈ ನಿಯಮವನ್ನು ರೂಪಿಸಿದೆ. ಈ ನಿಯಮದಿಂದಾಗಿ 2028 ರಲ್ಲಿ 16 ವರ್ಷದವನಾಗಿದ್ದರೂ ವೈಭವ್ ಸೂರ್ಯವಂಶಿಗೆ ಅಂಡರ್-19 ವಿಶ್ವಕಪ್‌ನಲ್ಲಿ ಚಾನ್ಸ್ ಸಿಗುವುದಿಲ್ಲ.
