ಅಬ್ಬರ ಸಿಡಿಲಬ್ಬರ… ಮೊದಲ ಓವರ್ನಲ್ಲೇ ಭರ್ಜರಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
Yashasvi jaiswal Record: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 32 ಎಸೆತಗಳಲ್ಲಿ ಅಜೇಯ 77 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಆರ್ಆರ್ ತಂಡ ನಿಗದಿತ 11 ಓವರ್ಗಳಲ್ಲಿ 150 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್ಗಳಲ್ಲಿ 123 ರನ್ಗಳಿಸಿ 27 ರನ್ಗಳಿಂದ ಸೋಲೊಪ್ಪಿಕೊಂಡಿದೆ.
Updated on: Apr 08, 2026 | 8:59 AM

IPL 2026: ಐಪಿಎಲ್ನ 13ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಯಶಸ್ವಿ ಜೈಸ್ವಾಲ್ (Yashasvi jaiswal) ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಸಹ ಮೊದಲ ಓವರ್ನಲ್ಲೇ 22 ರನ್ ಚಚ್ಚುವ ಮೂಲಕ ಎಂಬುದು ವಿಶೇಷ.

ಅಂದರೆ ಐಪಿಎಲ್ ಇತಿಹಾಸದಲ್ಲಿ ಇನಿಂಗ್ಸ್ನ ಮೊದಲ ಓವರ್ನಲ್ಲಿ ಮೂರು ಬಾರಿ 20+ ಸ್ಕೋರ್ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಚಹರ್ ಎಸೆದ ಮೊದಲ ಓವರ್ನಲ್ಲೇ 22 ರನ್ ಬಾರಿಸುವ ಮೂಲಕ ಈ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 2023 ರಲ್ಲಿ ನಿತೀಶ್ ರಾಣಾ (ಕೊಲ್ಕತ್ತಾ ನೈಟ್ ರೈಡರ್ಸ್) ಎಸೆದ ಮೊದಲ ಓವರ್ನಲ್ಲಿ 6,6,4,4,2,4 ಬಾರಿಸುವ ಮೂಲಕ 26 ರನ್ ಚಚ್ಚಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್ನಲ್ಲಿ ಬ್ಯಾಟರ್ರೊಬ್ಬರು ಕಲೆಹಾಕಿದ ಗರಿಷ್ಠ ಸ್ಕೋರ್ ಎಮಬುದು ವಿಶೇಷ.

ಇದಾದ ಬಳಿಕ ಐಪಿಎಲ್ 2025 ರಲ್ಲಿ ಅರ್ಷದೀಪ್ ಸಿಂಗ್ (ಪಂಜಾಬ್ ಕಿಂಗ್ಸ್) ಎಸೆದ ಮೊದಲ ಓವರ್ನಲ್ಲಿ ಬರೋಬ್ಬರಿ 22 ರನ್ ಚಚ್ಚಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 2 ಬಾರಿ ಮೊದಲ ಓವರ್ನಲ್ಲೇ 20 ಕ್ಕಿಂತ ಅಧಿಕ ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಚಹರ್ ಎಸೆದ ಮೊದಲ ಓವರ್ನಲ್ಲಿ 4, 6, 4, 0, 4, 4 ರನ್ ಬಾರಿಸಿದ್ದಾರೆ. ಈ ಮೂಲಕ 22 ರನ್ ಕಲೆಹಾಕಿ, ಪ್ರಥಮ ಓವರ್ನಲ್ಲಿ ಮೂರು ಬಾರಿ 20+ ರನ್ ಬಾರಿಸಿದ ಐಪಿಎಲ್ನ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ.




