- Kannada News Photo gallery Karnataka News in Kannada: Dharwad's beautified Gul Mohar flowers, Here is a glimpse
ವಾವ್ಹ್..!ಧಾರವಾಡದ ಸೌಂದರ್ಯ ಹೆಚ್ಚಿಸಿದ ಗುಲ್ ಮೊಹರ್ ಹೂವುಗಳು; ಈ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
ಮುಂಗಾರು ಪೂರ್ವ ಮಳೆಯಾಗುವ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಬಹುತೇಕ ಗಿಡ-ಮರಗಳು ಹೂ ಬಿಡುತ್ತವೆ. ಆದರೆ, ಮೇ-ಫ್ಲವರ್ ಎಂದೇ ಹೆಸರಾದ ಗುಲ್ ಮೊಹರ್ ಮರದಲ್ಲಿ ಈ ತಿಂಗಳು ಮೈತುಂಬಾ ಹೂ ತುಂಬಿಕೊಂಡ ಸಂಭ್ರಮ ನೋಡುವುದು ಕಣ್ಣಿಗೆ ಹಬ್ಬ. ಬೇಸಿಗೆಯ ರಜೆಯ ಮಕ್ಕಳ ಆಟಕ್ಕೆ ಸಾಥ್ ನೀಡುವ ಗುಲ್ ಮೊಹರಿನ ಮೊಗ್ಗುಗಳು, ಹೂವಿನ ಕೇಸರದ ಭಾಗಗಳು ದೊಡ್ಡವರಲ್ಲೂ ಬಾಲ್ಯದ ನೆನಪನ್ನು ತರುತ್ತಿವೆ. ಅದರಂತೆ ಧಾರವಾಡದ ಅಂಧವನ್ನು ಹೆಚ್ಚಿಸುವೆ.
Updated on:May 24, 2024 | 3:41 PM

ವಿದ್ಯಾಕಾಶೀ, ಸಸ್ಯಕಾಶಿ ಎಂದು ಕರೆಯಿಸಿಕೊಳ್ಳೋ ಧಾರವಾಡದಲ್ಲಿ ಗುಲ್ ಮೊಹರ್ ಗಿಡಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಕರ್ನಾಟಕ ವಿಶ್ವವಿದ್ಯಾಲಯ ಆವರಣ, ಕೋರ್ಟ್ ವೃತ್ತ, ಕರ್ನಾಟಕ ಕಾಲೇಜಿನಿಂದ ಹಳಿಯಾಳ ನಾಕಾ ಮಾರ್ಗವಾಗಿ ಜರ್ಮನ್ ಆಸ್ಪತ್ರೆ, ಕೆ.ಸಿ. ಪಾರ್ಕ್, ಆಜಾದ ಪಾರ್ಕ್, ಜಿಲ್ಲಾಧಿಕಾರಿ ಕಚೇರಿ ಆವರಣ, ಮಾಳಮಡ್ಡಿ, ಕಲ್ಯಾಣನಗರ ಸೇರಿದಂತೆ ಇಡೀ ಧಾರವಾಡದಲ್ಲಿ ಈಗ ಗುಲ್ ಮೋಹರ್ ಹೂವಿನದ್ದೇ ಆಕರ್ಷಣೆ.

ಮೇ ತಿಂಗಳಲ್ಲಿ ಅರಳುವ ಈ ಹೂಗಳ ಆಡಂಬರ ನೊಡಲು ಎರಡು ಕಣ್ಣುಗಳು ಸಾಲದು. ಕಡು ಕೆಂಪು ಬಣ್ಣದ ಹೂಗಳನ್ನು ಮರವು ಮೈಯೆಲ್ಲಾ ಹೊದ್ದುಕೊಂಡು ಸಂಭ್ರಮಿಸುತ್ತಿವೆ. ಮರದಲ್ಲಿ ನಾನಾ ಚಿತ್ತಾಕರ್ಷಕ ಹೂ ಗೊಂಚಲುಗಳು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂ ಹಾಸಿಗೆಯಂತೆ ಕಂಗೊಳಿಸುತ್ತಿವೆ. ಕೆಲವು ಆಕರ್ಷಣೆ ಜತೆಗೆ ಸುಗಂಧವನ್ನೂ ಬೀರುವುದರಿಂದ ಇನ್ನಷ್ಟು ಸವಿಯಬೇಕೆನಿಸುತ್ತದೆ.

ಲೆಗ್ಯೂಮ್ ಗುಂಪಿಗೆ ಸೇರಿದ ಗುಲ್ ಮೊಹರ್ ಸಸ್ಯವು ಫ್ಯಾಬೇಸಿಯೆ ಕುಟುಂಬದ ಸದಸ್ಯ ಎಂಬ ಮಾಹಿತಿ ಇದೆ. ಹಾಗಾಗಿ ಇದರಿಂದಲೂ ನೆಲಕ್ಕೆ ಸಾರಜನಕದ ಲಭ್ಯತೆಯಿದ್ದು, ಮಣ್ಣಿನ ರಕ್ಷಣೆಗೆ ಇದು ಸಹಕಾರಿಯಾಗಿದೆ.

ಸಸ್ಯ ತಜ್ಞರು ಹೇಳುವಂತೆ ಗುಲ್ ಮೊಹರ್ ಪರ್ಷಿಯನ್ ಮೂಲದ ಹೆಸರು. ಗುಲ್ ಎಂದರೆ ಗುಲಾಬಿ ಹೂ ಎಂದೂ, ಮೊಹರ್ ಎಂದರೆ ಗುರುತು. ಹಾಗಾಗಿ ಗುಲಾಬಿಯ ಗುರುತನ್ನು ಹೊಂದಿರುವ ಎಂಬುದಾಗಿದೆ.

ಈ ಮರದ ಮತ್ತೊಂದು ಸೊಗಸು ಅದರ ಕಾಯಿಗಳು. ಮೊಗ್ಗಾಗಿದ್ದಾಗ ಹಸಿರು ಬಣ್ಣದ ಪುಟ್ಟ-ಪುಟ್ಟ ಕಾಯಿಗಳಂತೆ ಕಂಡರೂ ಅರಳಿದಾಗ ಅದರೊಳಗಿನ ದಟ್ಟ ಕೆಂಪು ಬಣ್ಣದ ದಳಗಳು, ಕೇಸರದ ಭಾಗಗಳು ಹೊರ ಬೀಳುತ್ತವೆ.

ಮೇ ತಿಂಗಳಲ್ಲಿ ಬರೀ ಗುಲ್ ಮೊಹರ್ ಅಲ್ಲದೇ ಫುಟಬಾಲ್ ಲಿಲ್ಲಿ ಎಂಬ ಹೂ ಸಹ ಗಮನ ಸೆಳೆಯುತ್ತಿದೆ. ಜೊತೆಗೆ ಸ್ವದೇಶಿ, ವಿದೇಶಿಯ ಕೆಲವು ಕೆಂಪು, ಹಳದಿ ಬಣ್ಣದ ಹೂ ಬಿಡುಗಳು ಸಹ ಧಾರವಾಡದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೂವು ಬಿಟ್ಟ ನಂತರ ಎರಡರಿಂದ ಮೂರು ತಿಂಗಳ ಕಾಲವೂ ತನ್ನ ಸೊಬಗನ್ನು ಬೀರುತ್ತವೆ. ಒಟ್ಟಾರೆ ಮೇ ತಿಂಗಳಲ್ಲಿ ಬಿಡುವ ಹೂಗಳನ್ನು ಧಾರವಾಡದಲ್ಲಿ ನೋಡುವುದು ಒಂದು ಸೌಭಾಗ್ಯವೇ ಸರಿ.
Published On - 3:34 pm, Fri, 24 May 24

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.
Read More




