- Kannada News Photo gallery Mangaluru: Navaguliga Daivaradhane; Unique 9 Guliga Deity Worship in Coastal Karnataka
ಮಂಗಳೂರು: ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ಎಂದಾದರೂ ಕಂಡೀರಾ? ಇಲ್ಲಿವೆ ಫೋಟೋಸ್
ಕರಾವಳಿಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆಯಲ್ಲಿ ನವ ಗುಳಿಗ ದೈವಾರಾಧನೆ ನಡೆಯಿತು. ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕ್ಷೇತ್ರಪಾಲಕರಾದ ಒಂಬತ್ತು ಗುಳಿಗ ದೈವಗಳಿಗೆ ಏಕಕಾಲದಲ್ಲಿ ನರ್ತನ ಸೇವೆ ಸಲ್ಲಿಸಲಾಯಿತು. ಇದು ತುಳುನಾಡಿನಲ್ಲಿ ಬಹಳ ಅಪರೂಪದ ಘಟನೆಯಾಗಿದ್ದು, ಭಕ್ತರಿಗೆ ರೋಮಾಂಚನಕಾರಿ ಅನುಭವ ನೀಡಿತು. ಫೋಟೋಸ್ ಇಲ್ಲಿವೆ ನೋಡಿ.
Updated on: Feb 06, 2026 | 6:33 PM

ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ದೈವಾರಾಧನೆ. ಸಾಮಾನ್ಯವಾಗಿ ಇಲ್ಲಿ ಏಕಕಾಲದಲ್ಲಿ ಒಂದೆರಡು ಗುಳಿಗ ದೈವಗಳಿಗೆ ನರ್ತನ ಸೇವೆ ನಡೆಯುತ್ತೆ. ಆದರೆ ಇಲ್ಲೊಂದು ಸನ್ನಿಧಾನದಲ್ಲಿ ಏಕಕಾಲದಲ್ಲಿ ಒಂಬತ್ತು ದೈವಗಳಿಗೆ ನರ್ತನ ಸೇವೆ ನಡೆದಿದೆ. ಒಂಬತ್ತು ಗುಳಿಗ ದೈವಗಳ ರೋಷಾವೇಷ ಭಕ್ತರಿಗೆ ರೋಮಾಂಚಕ ಅನುಭವ ನೀಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಪುಟ್ಟ ಊರಿನಲ್ಲಿ ನವ ಗುಳಿಗನಿಗೆ ನರ್ತನ ಸೇವೆ ನಡೆಯಿತು. ಇಲ್ಲಿನ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯ ಕ್ಷೇತ್ರಪಾಲಕರಾಗಿ ಒಂಬತ್ತು ಗುಳಿಗ ದೈವಗಳು ನೆಲೆಯಾಗಿರುವ ಕಾರಣ ಇಲ್ಲಿ ವಾರ್ಷಿಕ ಉತ್ಸವದ ವೇಳೆ ನವ ಗುಳಿಗನಿಗೆ ನರ್ತನ ಸೇವೆ ಸಲ್ಲಿಸಲಾಗುತ್ತದೆ.

ಕರಾವಳಿ ಭಾಗದಲ್ಲಿ ಆರಾಧಿಸಲ್ಪಡುವ, ಶಿವಗಣಕ್ಕೆ ಸೇರಿದವನೆಂದು ನಂಬುವ ಗುಳಿಗ ಅತ್ಯಂತ ಕೋಪಿಷ್ಟ. ಕ್ಷೇತ್ರ ರಕ್ಷಕನಾಗಿ ಪಂಜುರ್ಲಿ ದೈವದ ಜೊತೆಗೂಡಿ ಆರಾಧನೆ ಪಡೆಯುವ ಈ ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ಹೀಗೇ ನರ್ತನ ಸೇವೆ ಮಾಡುವುದಿದೆ. ಆದರೆ ಕರಾವಳಿಯ ಒಂದು ಕಡೆ ಮಾತ್ರ ಏಕೈಕ ನವ ಗುಳಿಗ ಸೇವೆ ನಡೆಯುತ್ತದೆ.

ಸಾಮಾನ್ಯವಾಗಿ ದೇವಿ ನೆಲೆಸಿರುವ ಕ್ಷೇತ್ರಗಳಲ್ಲಿ ಕ್ಷೇತ್ರಪಾಲಕನಾಗಿ ಗುಳಿಗ ಇದ್ದೆ ಇರುತ್ತಾನೆ. ಇಂತಹ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಗುಳಿಗನಿಗೆ ನರ್ತನ ಸೇವೆಯನ್ನು ಸಲ್ಲಿಸಲಾಗುತ್ತದೆ. ಇನ್ನು ತುಳುನಾಡಿನ ಹೆಚ್ಚಿನ ಜನರ ಮನೆಯಲ್ಲೂ ಈ ಗುಳಿಗನ ಆರಾಧನೆ ನಡೆಯುತ್ತದೆ. ಆದರೆ ಆರು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು.

ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ. ತುಳುನಾಡಿನಲ್ಲಿ ಇದು ಬಹಳ ಅಪರೂಪವಾಗಿದ್ದು, ಇದನ್ನು ವೀಕ್ಷಿಸುವುದಕ್ಕೆ ದೂರದ ಊರುಗಳಿಂದಲೂ ಜನ ಬಂದಿದ್ದರು. ಗುಳಿಗ ದೈವದ ರೋಷಾವೇಶ ಕಂಡು ಭಕ್ತರು ರೋಮಾಂಚನಗೊಂಡರು.

ಈ ಕ್ಷೇತ್ರದಲ್ಲಿ ಪ್ರಾರ್ಥಿಸಿ ಹೋದವರಿಗೆ ಎದುರಾಗುವ ಎಲ್ಲಾ ಸಂಕಷ್ಟಗಳು ನಿವಾರಣೆ ಆಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಹೀಗಾಗಿ ಜಿಲ್ಲೆ ಮಾತ್ರವಲ್ಲದೇ ಹೊರಜಿಲ್ಲೆಯಿಂದಲೂ ಸಾಕಷ್ಟು ಭಕ್ತರು ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡು ದೈವಿಕ ಕ್ಷಣಗಳಿಗೆ ಸಾಕ್ಷಿಯಾದರು.