ಐಟಿ ಮಂದಿಯ ವೃತ್ತಿಜೀವನದ ಕಥೆ ತೆರೆದಿಡುವ ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ನವೆಂಬರ್ 24ಕ್ಕೆ ಬಿಡುಗಡೆ
New Kannada Movie: ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿರುವ ಯುವಕರು ಸದಾ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಅದೇ ವಿಚಾರವನ್ನು ಕೇಂದ್ರವಾಗಿ ಇಟ್ಟುಕೊಂಡು ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ಸಿದ್ಧವಾಗಿದೆ. ನವೆಂಬರ್ 24ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಆರ್ಯನ್ ಹರ್ಷ, ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
Updated on: Nov 06, 2023 | 9:37 PM

ಬೆಂಗಳೂರಿನ ಬ್ಯುಸಿ ಏರಿಯಾಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಕೂಡ ಇದೆ. ಈ ಏರಿಯಾದ ಹೆಸರನ್ನು ಕೇಳದವರೇ ಇಲ್ಲ ಎನ್ನಬಹುದು. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಎಲೆಕ್ಟ್ರಾನಿಕ್ ಸಿಟಿ ಸಖತ್ ಪರಿಚಿತವಾಗಿರುತ್ತದೆ.

ರಾಜ್ಯ ರಾಜಧಾನಿಯ ಈ ಪ್ರಸಿದ್ಧ ಏರಿಯಾದಲ್ಲಿ ಹಲವಾರು ಐಟಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ವಿಶೇಷ ಏನೆಂದರೆ, ಈಗ ‘ಎಲೆಕ್ಟ್ರಾನಿಕ್ ಸಿಟಿ’ ಎಂಬ ಶೀರ್ಷಿಕೆಯಲ್ಲಿ ಹೊಸ ಸಿನಿಮಾವೊಂದು ನಿರ್ಮಾಣವಾಗಿದೆ.

ನವೆಂಬರ್ 24 ರಂದು ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ತೆರೆಗೆ ಬರುತ್ತಿದೆ. ಮೂಲತಃ ಐಟಿ ಉದ್ಯೋಗಿ ಆಗಿರುವ ಆರ್. ಚಿಕ್ಕಣ್ಣ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿ ನಿರ್ದೇಶನ ಕೂಡ ಮಾಡಿದ್ದಾರೆ. ಈವರೆಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಅವರಿಗೆ ಇದೆ.

ಈಗಿನ ಬಹುತೇಕ ಎಲ್ಲ ಯುವಕ-ಯುವತಿಯರು ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸದಾ ಒತ್ತಡದಲ್ಲಿರುತ್ತಾರೆ. ಅಂತಹ ಉದ್ಯೋಗಿಯ ವರ್ಕ್ ಲೈಫ್ ಹೇಗಿರುತ್ತೆ ಎನ್ನುವ ಅಂಶವನ್ನೇ ಇಟ್ಟುಕೊಂಡು ಈ ಸಿನಿಮಾ ತಯಾರಾಗಿದೆ.

ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆ ಕೂಡ ಇದೆ. ‘ಎಲೆಕ್ಟ್ರಾನಿಕ್ ಸಿಟಿ’ ಈಗಾಗಲೇ ಹಲವು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಪ್ರದರ್ಶನ ಕಂಡಿದೆ. ಒಂದಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದು, ಈಗ ಬಿಡುಗಡೆ ಆಗುತ್ತಿದೆ.

ಆರ್ಯನ್ ಹರ್ಷ ಅವರು ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಮುಂತಾದ ಕಲಾವಿದರು ಈ ಚಿತ್ರದಲ್ಲಿದ್ದಾರೆ.

ಈ ಸಿನಿಮಾಗೆ ವಿನು ಮನಸು ಸಂಗೀತ ನೀಡಿದ್ದಾರೆ. ಚಂದ್ರಶೇಖರ್ ಶ್ರೀವಾಸ್ತವ್ ಅವರು ಹಾಡುಗಳನ್ನು ಬರೆದಿದ್ದಾರೆ. ರಾಜ ಶಿವಶಂಕರ್ ಅವರ ಛಾಯಾಗ್ರಹಣ, ಸೌಂದರ್ ರಾಜ್ ಅವರ ಸಂಕಲನ, ಹಂಪಿ ಸುಂದರ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.



















