ಬಿಜೆಪಿ ಜೆಡಿಎಸ್ ಪಾದಯಾತ್ರೆ: ಹೆಚ್ಡಿ ಕುಮಾರಸ್ವಾಮಿ ಮುನಿಸು ತಣಿಸಿದ್ದೇ ಪ್ರಲ್ಹಾದ್ ಜೋಶಿ!
ಮುಡಾ ಹಗರಣ ಪ್ರತಿಭಟಿಸಿ ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಎದುರಾಗಿದ್ದ ದೊಡ್ಡ ಕಂಟಕವೊಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಸಂಧಾನದಿಂದ ಬಗೆಹರಿದಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಮೈತ್ರಿ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರ ಮುನಿಸನ್ನು ತಣಿಸುವಲ್ಲಿ ಮತ್ತು ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗವಹಿಸುವಂತೆ ಮಾಡುವಲ್ಲಿ ಜೋಶಿ ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಆಗಸ್ಟ್ 3: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಶನಿವಾರ ಬೆಳಗ್ಗೆ ಬೆಂಗಳೂರಿನ ಕೆಂಗೇರಿಯಲ್ಲಿ ಚಾಲನೆ ದೊರೆತಿದೆ. ಆದರೆ, ಈ ಪಾದಯಾತ್ರೆ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಇದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸುವಲ್ಲಿ ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮನವೊಲಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ತಿಳಿದು ಬಂದಿದೆ.
ಕೇವಲ ಎರಡು ದಿನಗಳ ಹಿಂದಷ್ಟೇ ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲ. ಪಾದಯಾತ್ರೆ ಸಂಬಂಧ ಬಿಜೆಪಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಚುನಾವಣೆ ವೇಳೆ ಪರಸ್ಪರ ಹೊಂದಾಣಿಕೆಯಿಂದ ಮುಂದುವರಿಯುವುದು ಬೇರೆ. ರಾಜಕಾರಣ ಬೇರೆ. ಬೆಂಗಳೂರಿನಿಂದ ಮೈಸೂರಿನವರೆಗೆ ನಮ್ಮದೇ ಪ್ರಾಬಲ್ಯವಿದೆ. ಹೀಗಾಗಿ ನಮ್ಮ ನಿರ್ಧಾರ ನಾವು ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಕಡ್ಡಿ ಮುರಿದಂತೆ ಹೇಳಿದ್ದರು.
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವುದು ಬಿಟ್ಟು ಪಾದಯಾತ್ರೆ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.
ಕುಮಾರಸ್ವಾಮಿ ಸಿಟ್ಟಿಗೆ ಕಾರಣವೇನು?
ಅಸಲಿಗೆ ಕುಮಾರಸ್ವಾಮಿ ಸಿಟ್ಟಿಗೆ ಕಾರಣ ಬೇರೆಯೇ ಇತ್ತು. ಪಾದಯಾತ್ರೆ ಸಂಬಂಧ ನಿರ್ಧಾರಗಳನ್ನು ಕೈಗೊಳ್ಳಲು ನಡೆಸಿದ ಬಿಜೆಪಿ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ, ಕೋರ್ ಕಮಿಟಿ ಸದಸ್ಯರಲ್ಲದ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮತ್ತು ರಾಜೀವ್ ಭಾಗವಹಿಸಿದ್ದು ಕುಮಾರಸ್ವಾಮಿ ಸಿಟ್ಟಿಗೆ ಕಾರಣವಾಗಿತ್ತು.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನೇ ನಾಶ ಮಾಡಲು ಹೊರಟ, ಕುಟುಂಬಕ್ಕೆ ವಿಷ ಹಾಕಿದ ಪ್ರೀತಂ ಗೌಡನನ್ನು ನನ್ನ ಜೊತೆ ವೇದಿಕೆಯಲ್ಲಿ ಕುಳ್ಳಿರಿಸಿದ್ದು ಹೇಗೆ? ರಾಜ್ಯ ಬಿಜೆಪಿ ನಾಯಕರಿಗೆ ಆತ ಯಾರು, ಹಾಸನದಲ್ಲಿ ಏನು ಮಾಡಿದ್ದಾನೆ ಎಂಬುದು ಗೊತ್ತಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಅಲ್ಲದೆ, ಪಾದಯಾತ್ರೆಗೆ ಸಂಬಂಧಪಟ್ಟ ಹೊಣೆಗಾರಿಕೆಯನ್ನು ಪ್ರೀತಂ ಗೌಡಗೆ ವಹಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರಲ್ಹಾದ್ ಜೋಶಿ ನೇತೃತ್ವದ ಸಂಧಾನ ಸಕ್ಸಸ್
ಕುಮಾರಸ್ವಾಮಿ ಸಿಟ್ಟು ಮಾಡಿಕೊಂಡ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಕೂಡ ಥಂಡಾ ಹೊಡೆದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೈಕಮಾಂಡ್ ಮೊರೆ ಹೋಗಿದ್ದರು. ನಂತರ ಪ್ರಲ್ಹಾದ್ ಜೋಶಿ, ಜೆಪಿ ನಡ್ಡಾ, ರಾಧಾಮೋಹನ್ ದಾಸ್ ಅಗರ್ವಾಲ್ ಜೊತೆಯಾಗಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದರು. ನಂತರ ಜೋಶಿ ನೇತೃತ್ವದಲ್ಲಿ ನಡೆದ ಸಭೆ ಸಂಧಾನ ಸಭೆ ಯಶಸ್ವಿಯಾಯಿತು. ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗವಹಿಸಲಿದೆ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಘೋಷಣೆ ಮಾಡಿದರು.
ಕುಮಾರಸ್ವಾಮಿ ಹೇಳಿದ್ದೇನು?
ಜೋಶಿ ನೇತೃತ್ವದಲ್ಲಿ ನಡೆದ ಸಭೆ ಸಂಧಾನ ಸಭೆಯ ಬಳಿಕ ಮಾತನಾಡಿದ್ದ ಕುಮಾರಸ್ವಾಮಿ, ಬಿಜೆಪಿ ನಾಯಕರ ಜೊತೆ ಮುಕ್ತ ಮನಸ್ಸಿನಿಂದ ಚರ್ಚಿಸಿದ್ದೇವೆ. ಈಗ ಎಲ್ಲ ಗೊಂದಲಗಳು ಬಗೆಹರಿದಿವೆ. ಪ್ರೀತಂಗೌಡ ನಮಗೆ ಮುಖ್ಯ ಸಮಸ್ಯೆ ಆಗಿರಲಿಲ್ಲ. ಪಾದಯಾತ್ರೆ ನಡೆಯಲಿದೆ, ಜೆಡಿಎಸ್ ಭಾಗಿಯಾಗಲಿದೆ. ಕೆಲವು ಸಣ್ಣಪುಟ್ಟ ವಿಚಾರದಲ್ಲಿ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಹೋಗಬೇಕೆಂದೇ ಕಳೆದ ಒಂದು ವರ್ಷದ ಹಿಂದೆ ಒಂದಾಗಿದ್ದೆವು ಎಂದು ಹೇಳಿದ್ದರು.
ಇದನ್ನೂ ಓದಿ: ಕೊನೆಗೂ ತಣ್ಣಗಾಯ್ತು ಕುಮಾರಸ್ವಾಮಿ ಕೋಪ: ಪಾದಯಾತ್ರೆ ಬಗ್ಗೆ ಅಧಿಕೃತ ನಿಲುವು ಪ್ರಕಟಿಸಿದ ಜೆಡಿಎಸ್
ಪಾದಯಾತ್ರೆಯ ಮೇಲೆ ಕವಿದಿದ್ದ ಕಾರ್ಮೋಡ ಸರಿದಿದೆ. ಜೋಶಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾದ ಕಾರಣ ಮೈತ್ರಿ ಪಾದಯಾತ್ರೆ ಸುಸೂತ್ರವಾಗಿದೆ. ಪಾದಯಾತ್ರೆಗೆ ಚಾಲನೆ ನೀಡುವ ವೇಳೆ ಕುಮಾರಸ್ವಾಮಿ ನಾಲ್ಕಾರು ಬಾರಿ ತಮ್ಮ ಭಾಷಣದಲ್ಲಿ ಜೋಶಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಕೂಡ ಇದುವೇ ಕಾರಣ ಎಂದು ಬಿಜೆಪಿಯ ಆಂತರಿಕ ಮೂಲಗಳು ಹೇಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ