ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಜಗದೀಶ್ ಶೆಟ್ಟರ್​: ಕ್ಷೇತ್ರ ಯಾವುದು ಗೊತ್ತಾ?

ಕೇವಲ 9 ತಿಂಗಳುಗಳ ಹಿಂದಷ್ಟೇ ಕಾಂಗ್ರೆಸ್ಸಿಗೆ ಬಂದು, ಈಗ ಪುನಃ ಬಿಜೆಪಿಗೆ ವಾಪಸ್ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ರಾಜಕೀಯ ನಡೆ ಏನು ಎನ್ನುವುದೇ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಶೆಟ್ಟರ್​ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್​​ ಆಫರ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ​ಎನ್ನುವ ಸುದ್ದಿ ಹರಿದಾಡುತ್ತಿವೆ. ಇದರ ಮಧ್ಯೆ ಇದೀಗ ಜಗದೀಶ್ ಶೆಟ್ಟರ್​ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಜಗದೀಶ್ ಶೆಟ್ಟರ್​: ಕ್ಷೇತ್ರ ಯಾವುದು ಗೊತ್ತಾ?
Image Credit source: ANI
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 10, 2024 | 4:33 PM

ಹುಬ್ಬಳ್ಳಿ, (ಫೆಬ್ರವರಿ 10): ಕಾಂಗ್ರೆಸ್‌ ತೊರೆದು ವಾಪಸ್ ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish Shettar) ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ (Loksabha Election 2024) ಸ್ಪರ್ಧಿಸುವ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ವರಿಷ್ಠರು ಸ್ಪರ್ಧೆ ಮಾಡಿ‌ ಅಂದ್ರೆ ಮಾಡೋಕೆ ಸಿದ್ದ. ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡೋಕೆ ಸಿದ್ಧ ಎಂದು ಹೇಳಿದ್ದಾರೆ. ಈ ಮೂಲಕ ಶೆಟ್ಟರ್​ ಈ ಬಾರಿಯ ಲೋಕಸಭಾ ಚುನಾವಣಾ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ. ಅಲ್ಲದೇ ಜಗದೀಶ್ ಶೆಟ್ಟರ್ ಅವರಿಗೆ​ ಲೋಕಸಭೆ ಟಿಕೆಟ್​​ ಆಫರ್​ ನೀಡಿ ಬಿಜೆಪಿಗೆ ಕರೆತರಲಾಗಿದೆ ಎನ್ನುವ ಸುದ್ದಿಗೆ ಈಗ ರೆಕ್ಕೆಪುಕ್ಕಗಳು ಬಂದಂತಾಗಿವೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು(ಫೆಬ್ರವರಿ 10) ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್​, ವರಿಷ್ಠರು ಹೇಳಿದ್ರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ. ಧಾರವಾಡ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧ. ವರಿಷ್ಠರು ಹೇಳಿದ್ರೆ ಸ್ಪರ್ಧಿಸುತ್ತೇನೆ, ಇಲ್ಲ ಪಕ್ಷದ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಧಾರವಾಡ ಸೇರಿದಂತೆ ಎಂದು ಹೇಳಿರುವುದು ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಇಂದು ಮೈಸೂರಿಗೆ ಅಮಿತ್ ಶಾ, ಮಂಡ್ಯ, ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ತೀರ್ಮಾನ?

ಯಾಕಂದ್ರೆ, ಪ್ರಲ್ಹಾದ್ ಜೋಶಿ ಪ್ರತಿನಿಧಿಸುವುದು ಧಾರವಾಡ ಕ್ಷೇತ್ರ ಅದು. ಅವರು ಮತ್ತೊಮ್ಮೆ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ. ಇದರ ಮಧ್ಯೆ ಜಗದೀಶ್ ಶೆಟ್ಟರ್ ಅವರ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಒಂದು ವೇಳೆ ಈ ಬಾರಿ  ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್​ ಶೆಟ್ಟರ್​ ಸಿಕ್ಕರೆ ಹಾಲಿ ಸಂಸದ, ಕೇಂದ್ರ ಸಚಿವರಾರಿಗುವ ಪ್ರಭಾವಿ ಪ್ರಲ್ಹಾದ್ ಜೋಶಿ ಅವರ ಕತೆ ಏನು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಈ ಮೂರು ಕ್ಷೇತ್ರಗಳ ಮೇಲೆ ಶೆಟ್ಟರ್​

ಧಾರವಾಡ, ಗದಗ-ಹಾವೇರಿ ಹಾಗೂ ಬೆಳಗಾವಿ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳು ಹೆಚ್ಚಿವೆ. ಜೊತೆಗೆ ಬಿಜೆಪಿಯ ಭದ್ರಕೋಟೆಗಳು ಸಹ ಹೌದು. ಹಾಗಾಗಿ ಜಗದೀಶ್ ಶೆಟ್ಟರ್​ ಈ ಮೂರೂ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಈ ಮೂರು ಕ್ಷೇತ್ರಗಳ ಪೈಕಿ ಹೈಕಮಾಂಡ್​ ಹೇಳಿದ ಒಂದು ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ ಎಂದು ತಿಳಿದಬಂದಿದೆ.

ಶೆಟ್ಟರ್​ಗೆ ಧಾರವಾಡ ಟಿಕೆಟ್​?

ಧಾರವಾಡವು ಜಗದೀಶ್ ಶೆಟ್ಟರ್ ಕುಟುಂಬದ ರಾಜಕೀಯ ಕರ್ಮಭೂಮಿಯಾಗಿದ್ದು, ಅಲ್ಲಿಂದಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಶೆಟ್ಟರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುದ್ದಿಗಳು ಸಹ ಹರಿದಾಡುತ್ತಿವೆ. ಒಂದು ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಶೆಟ್ಟರ್​ಗೆ ನೀಡಿದರೆ ಈಗಾಗಲೇ ಅಲ್ಲಿ ಸಂಸದರಾಗಿರುವ ಪ್ರಹ್ಲಾದ್ ಜೋಶಿಯವರಿಗೆ ಬೇರೊಂದು ಉನ್ನತ ಸ್ಥಾನವನ್ನು ಕಲ್ಪಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ, ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ನಲ್ಲಿ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ಮೂಲಗಳ ಪ್ರಕಾರ, ಲೋಕಸಭೆ ಟಿಕೆಟ್ ಪಕ್ಕಾ ಮಾಡಿಕೊಂಡೇ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಆಗಿದ್ದಾರೆ. ಎಂದು ಹೇಳಲಾಗುತ್ತಿದೆ. ಧಾರವಾಡ, ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಒಂದರ ಟಿಕೆಟ್​ ನೀಡುವಂತೆ ಶೆಟ್ಟರ್​ ಬಿಜೆಪಿ ಹೈಕಮಾಂಡ್​ಗೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಹೈಕಮಾಂಡ್​ ಸಹ ಒಪ್ಪಿಕೊಂಡಿದೆ ಎಂದು ತಿಳಿದಬಂದಿದೆ. ಆದ್ರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಪ್ರಲ್ಹಾದ್ ಜೋಶಿಯವರು ಹಾಲಿ ಸಂಸದರಾಗಿದ್ದು, ಮುಂಬರುವ ಚುನಾವಣೆಯಲ್ಲಿ ಅವರು ಅಲ್ಲಿಂದಲೇ ಅಖಾಡಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಹಾಗಾಗಿ, ಶೆಟ್ಟರ್ ಅವರಿಗೆ ಹೈಕಮಾಂಡ್, ಬೆಳಗಾವಿ ಅಥವಾ ಹಾವೇರಿ ಲೋಕಸಭಾ ಕ್ಷೇತ್ರಗಳ ಆಯ್ಕೆಯನ್ನು ಮುಂದಿಟ್ಟಿದೆ ಎನ್ನಲಾಗಿದೆ.

ಜೋಶಿಗೆ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ?

ಪ್ರಲ್ಹಾದ್ ಜೋಶಿ ಮತ್ತು ಶೆಟ್ಟರ್ ನಡುವಿನ ಸಂಬಂಧ ಅಷ್ಟಕಷ್ಟೇ. ಹುಬ್ಬಳ್ಳಿ ಧಾರವಾಡದಲ್ಲಿ ಇಬ್ಬರ ಪ್ರತ್ಯೇಕ ಬಣಗಳು ಹುಟ್ಟಿಕೊಂಡಿವೆ. ಹೀಗಾಗಿ ವಿಧಾನಸಭಾ ಚುನಾವಣೆಯ ಟಿಕೆಟ್​​ ಶೆಟ್ಟರ್ ಕೈತಪ್ಪಲು ಜೋಶಿಯವರ ಪಾತ್ರವೂ ಇದೆ ಎನ್ನುವ ಮಾತು ಕೇಳಿಬಂದಿದೆ. ಹಾಗಾಗಿ, ಜೋಶಿಯವರು ಹೇಗಿದ್ದರೂ ರಾಷ್ಟ್ರರಾಜಕಾರಣದಲ್ಲಿ ಪಳಗಿರುವುದರಿಂದ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿಸಿ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೆಟ್ಟರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಹೇಗೆ ಎಂಬ ಲೆಕ್ಕಾಚಾರಗಳು ಸಹ ಹೈಕಮಾಂಡ್ ಮಟ್ಟದಲ್ಲಿ ನಡೆದಿವೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ