AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK Shivakumar Oath Taking Live: ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ

ಡಿಕೆ ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮ ಲೈವ್: ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ಕರ್ನಾಟಕದ 25ನೇ ಸಿಎಂ ಆಗಿ ಡಿ.ಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇಂದು (ಜೂನ್ 3) ಸಂಜೆ 4:05ಕ್ಕೆ ಲೋಕಭವನದಲ್ಲಿ ಪದಗ್ರಹಣ ಕಾರ್ಯಕ್ರಮ ನೆರವೇರಲಿದ್ದು, ಶಿವಕುಮಾರ್ ಜೊತೆಗೆ 10 ರಿಂದ 12 ಜನ ಶಾಸಕರು ಸಚಿವ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೋನಿಯಾ, ರಾಹುಲ್ ಸೇರಿದಂತೆ ದೇಶದ ಪ್ರಮುಖ ಗಣ್ಯರು ಹಾಗೂ ಸರ್ವಧರ್ಮದ 55 ಧರ್ಮಗುರುಗಳು ಉಪಸ್ಥಿತರಿದ್ದಾರೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

DK Shivakumar Oath Taking Live: ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ
ಡಿಕೆ ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮ
ಭಾವನಾ ಹೆಗಡೆ
|

Updated on:Jun 03, 2026 | 8:56 AM

Share

LIVE NEWS & UPDATES

  • 03 Jun 2026 08:56 AM (IST)

    ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಇಂದು ರಾಜೀನಾಮೆ ಸಾಧ್ಯತೆ

    ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಸಚಿವ ಸ್ಥಾನ ಸಿಗುವ ಬಗ್ಗೆ ಅಧಿಕೃತ ಮಾಹಿತಿ ಬಂದ ತಕ್ಷಣ, ಅವರು ಮಧ್ಯಾಹ್ನದ ವೇಳೆಗೆ ಡೆಪ್ಯುಟಿ ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಸೇರಲಿರುವ ಹಿನ್ನೆಲೆಯಲ್ಲಿ ಖಾದರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

  • 03 Jun 2026 08:43 AM (IST)

    ಲೋಕಭವನ ಸುತ್ತ 2 ಸಾವಿರ ಪೊಲೀಸರಿಂದ ಬಿಗಿ ಬಂದೋಬಸ್ತ್‌

    ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಲೋಕಭವನ ಹಾಗೂ ವಿಧಾನಸೌಧ ಸುತ್ತಮುತ್ತ ಹೈ-ಅಲರ್ಟ್ ಘೋಷಿಸಲಾಗಿದೆ. ಕಮಿಷನರ್ ಸೀಮಂತ್ ಕುಮಾರ್ ನೇತೃತ್ವದಲ್ಲಿ 3 ಜಂಟಿ ಆಯುಕ್ತರು, 20 ಡಿಸಿಪಿಗಳು, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 2,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಪ್ರತಿ ಸೆಕ್ಟರ್‌ಗೂ ಓರ್ವ ಡಿಸಿಪಿ ಉಸ್ತುವಾರಿ ವಹಿಸಿದ್ದಾರೆ.

  • 03 Jun 2026 08:41 AM (IST)

    ಪ್ರಮಾಣವಚನಕ್ಕೂ ಮುನ್ನ ಕನಕಪುರಕ್ಕೆ ಡಿ.ಕೆ ಶಿವಕುಮಾರ್ ಭೇಟಿ ಸಾಧ್ಯತೆ

    ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ 10 ಗಂಟೆಯ ನಂತರ ತಮ್ಮ ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ವೇಳೆ ಅವರು ತಮ್ಮ ಮನೆ ದೇವರಾದ ಕೆಂಕೇರಮ್ಮ ಮತ್ತು ಕಬ್ಬಾಳಮ್ಮ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಬಳಿಕ ದೊಡ್ಡಆಲಹಳ್ಳಿಗೆ ಪ್ರಯಾಣಿಸಿ, ತಮ್ಮ ತಾಯಿಯ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

  • 03 Jun 2026 08:37 AM (IST)

    ಮಧ್ಯರಾತ್ರಿ 2 ಗಂಟೆಯವರೆಗೂ ಅಜ್ಜಯ್ಯನ ಮಠದಲ್ಲಿದ್ದ ಡಿಕಿಶಿ

    ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯಿಂದ ಆಗಮಿಸಿದ ಬೆನ್ನಲ್ಲೇ, ಅವರು ಪತ್ನಿ ಸಮೇತರಾಗಿ ನಾಗರಬಾವಿಯ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿದ್ದರು. ಮಧ್ಯರಾತ್ರಿ 11:40 ರಿಂದ 2 ಗಂಟೆಯವರೆಗೆ ಮಠದಲ್ಲಿದ್ದ ಅವರು, ಸಿಎಂ ಪದಗ್ರಹಣ ಹಾಗೂ ಸಂಪುಟ ರಚನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ ಆಶೀರ್ವಾದ ಪಡೆದರು.

ಬೆಂಗಳೂರು, ಜೂನ್ 03: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ ಸಿದ್ದರಾಮಯ್ಯ ಮತ್ತು 10 ರಿಂದ 12 ಮಂದಿ ಶಾಸಕರೂ ಸಹ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಸಮಾರಂಭಕ್ಕೆ 10,000ಕ್ಕೂ ಹೆಚ್ಚು ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ 1,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಧರ್ಮಗುರುಗಳೂ ಸಹ ಈ ಕಾರ್ಯಕ್ರಮದಲ್ಲಿದ್ದು, ಸಂಜೆ 4:05ಕ್ಕೆ ಸರಿಯಾಗಿ ಪದಗ್ರಹಣ ನೆರವೇರಲಿದೆ.

ಕರ್ನಾಟಕ ರಾಜಕಾರಣದಲ್ಲಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಸಾಕಷ್ಟು ಜಟಾಪಟಿ ನಡೆದಿತ್ತು. ಇತ್ತೀಚೆಗೆ ಸಿದ್ದರಾಮಯ್ಯನವರ ದೆಹಲಿ ಭೇಟಿ, ಹೈಕಮಾಂಡ್ ಜೊತೆಗಿನ ಚರ್ಚೆಯ ಬಳಿಕ ಈ ಜಟಾಪಟಿಗೆ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟು ರಾಜೀನಾಮೆ ಕೊಡುವುದರ ಜೊತೆಗೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆಂದು ಘೋಷಿಸಿದ್ದರು. ಅಂತೆಯೇ ಇಂದು ಸಿಎಂ ಆಗಿ ಡಿಕೆಶಿ ಕುರ್ಚಿ ಏರಲು ಸಿದ್ಧರಾಗಿದ್ದಾರೆ. ಡಿ ಕೆ ಶಿವಕುಮಾರ್ ಜೊತೆಗೆ 10-12 ಮಂದಿ ಶಾಸಕರ ಪ್ರಮಾಣವಚನದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Published On - Jun 03,2026 8:34 AM

Follow Us