
ಬೆಂಗಳೂರು, ಮಾರ್ಚ್ 10: ವಿಧಾನಸಭಾ ಅಧಿವೇಶನದಲ್ಲಿ (Assembly session) ಇಂದು ಗ್ರೇಟರ್ ಬೆಂಗಳೂರು ವಿಧೇಯಕ ಬಗ್ಗೆ ಬಿಸಿ ಬಿಸಿ ಚರ್ಚೆ ಮಾಡಲಾಯಿತು. ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ವಿಧೇಯಕ ಮಂಡನೆಗೆ ವಿರೋಧ ವ್ಯಕ್ತಡಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನ (BBMP) ವಿಭಾಗಿಸಿ ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವ ಸರ್ಕಾರ, ಜಟಾಪಟಿ ನಡುವೆ ವಿಧೇಯಕಕ್ಕೆ ಅಂಗೀಕಾರ ಪಡೆದಿದೆ. ಈ ವೇಳೆ ಧಿಕ್ಕಾರ ಕೂಗುತ್ತಾ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಆದರೆ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ್ ಮಾತ್ರ ಸಭಾತ್ಯಾಗ ಮಾಡಿಲಿಲ್ಲ.
ಪಾಲಿಕೆ ವಿಭಾಗಿಸಬೇಕು. ಎರಡು ಭಾಗ ಮಾಡಬೇಕು. ಮೂರು ಭಾಗ ಮಾಡಬೇಕು. ವಾರ್ಡ್‌ಗಳನ್ನ ಹೆಚ್ಚಿಸಬೇಕು ಅನ್ನೋ ಕಾಲಾಹರಣದ ನಡುವೆ ಕಳೆದ ಐದು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆಯೇ ನಡೆದಿಲ್ಲ. ಇದರ ನಡುವೆ ಬೆಂಗಳೂರನ್ನ ಹಲವು ಭಾಗ ಮಾಡಿ ಗ್ರೇಟರ್ ಬೆಂಗಳೂರು ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಈ ವಿರೋಧದ ನಡುವೆ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ನ್ನ ವಿಧಾನಸಭೆಯಲ್ಲಿ ಮಂಡಿಸಿದರು.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕ: ಇದು ಬೆಂಗಳೂರಿನ ಪಾಲಿಗೆ ಮರಣ ಶಾಸನ ಎಂದ ಆರ್ ಅಶೋಕ್
ಇನ್ನು ಡಿಕೆ ಶಿವಕುಮಾರ್ ವಿಧೇಯಕ ಮಂಡಿಸುತ್ತಿದ್ದಂತೆ ಸದನದಲ್ಲಿ ಕೋಲಾಹಲ ಎದ್ದಿತ್ತು. ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ಸತೀಶ್ ರೆಡ್ಡಿ, ಮುನಿರತ್ನ, ಮುನಿರಾಜು ಸೇರಿದಂತೆ ಬೆಂಗಳೂರಿನ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ನಾಯಕ ಅಶೋಕ್ ಅಂತೂ ಬೆಂಗಳೂರಿನ ಪಾಲಿಗೆ ಮರಣ ಶಾಸನ ಎಂದಿದ್ದಾರೆ.
ಬಿಜೆಪಿ ನಾಯಕರು ಒಂದ್ಕಡೆ ವಿರೋಧ ಮಾಡಿದರೆ, ಬಿಜೆಪಿ ಶಾಸಕರೇ ಆಗಿರೋ ಎಸ್‌ಟಿ ಸೋಮಶೇಖರ್, ಸರ್ಕಾರದ ಕ್ರಮವನ್ನ ಸ್ವಾಗತಿಸಿದರು. ಡಿಕೆ ಶಿವಕುಮಾರನ್ನ ಹಾಡಿ ಹೊಗಳಿದರು. ಎಲೆಕ್ಟ್ರಾನಿಕ್ ಸಿಟಿ ಬಿಬಿಎಂಪಿಗಿಂತ ಹೆಚ್ಚಾಗಿ ಬೆಳೆದಿದೆ. ಅದನ್ನು ಪಾಲಿಕೆಗೆ ಸೇರಿಸಿ ಗ್ರೇಟರ್ ಬೆಂಗಳೂರು ಮಾಡಿದ್ರೆ ತಪ್ಪೇನು ಅಂತಾ ತಮ್ಮ ಪಕ್ಷದ ನಾಯಕರನ್ನೇ ಪ್ರಶ್ನಿಸಿದರು.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕ ಜಾರಿಗೆ ತಂದು ಶಿವಕುಮಾರ್ ಹೆಸರು ಕೆಡಿಸಿಕೊಳ್ಳುವುದು ಬೇಡ: ಎಸ್ ಎಸ್ ವಿಶ್ವನಾಥ್
ಹೀಗೆ ಪರ ವಿರೋಧದ ನಡುವೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಬಿದ್ದಿದೆ. ಕನಿಷ್ಠ 10 ಲಕ್ಷ ಜನಸಂಖ್ಯೆಗೆ ಒಂದರಂತೆ ಪಾಲಿಕೆ ಇರ್ಬೇಕು ಅಂತಾ ವಿಧೇಯಕದಲ್ಲಿ ಹೇಳಲಾಗಿದ್ದು, ಬಿಬಿಎಂಪಿಯನ್ನ ಎಷ್ಟು ವಿಭಾಗ ಮಾಡ್ತಾರೆ ಅನ್ನೋದೆ ಸದ್ಯದ ಪ್ರಶ್ನೆ.
ಇನ್ನು ಬೆಂಗಳೂರು ಅರಮನೆ ಭೂಕಬಳಿಕೆ ಮತ್ತು ನಿಯಂತ್ರಣ ಬಿಲ್ ಕೂಡ ಅಂಗೀಕಾರವಾಗಿದೆ. ಪರಿಷತ್ನಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ವಿಧೇಯಕ ಮಂಡಿಸಿದ್ದರು. ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ವಿಧೇಯಕ ಮಂಡಿಸಲಾಗಿತ್ತು. ಈ ವೇಳೆ ರಾಜಮನೆತನದ ಜೊತೆ ಮಾತುಕತೆ ನಡೆಸುವಂತೆ ಬಿಜೆಪಿಯಿಂದ ಆಗ್ರಹಿಸಲಾಗಿದೆ. ಯಾವುದೇ ಕಾರಣಕ್ಕೂ ಬಿಲ್ ತರಬಾರದೆಂದು ಬಿಜೆಪಿ, ಜೆಡಿಎಸ್ ಸದಸ್ಯರ ಸಭಾತ್ಯಾಗದ ನಂತರ ವಿಧೇಯಕ ಅಂಗೀಕಾರಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.