1924ರ ಕಾಂಗ್ರೆಸ್ಗೂ ಇಂದಿನ ಕಾಂಗ್ರೆಸ್ ಪಕ್ಷಕ್ಕೂ ಎಲ್ಲಿಯ ಸಂಬಂಧ: ಪ್ರಲ್ಹಾದ್ ಜೋಶಿ ಕಿಡಿ
ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಮತ್ತು ಮಹಾತ್ಮ ಗಾಂಧಿಯವರ ಕಾಂಗ್ರೆಸ್ ವಿಸರ್ಜನೆಗೆ ಬಗ್ಗೆ ಉಲ್ಲೇಖಿಸುವ ಮೂಲಕ ಕಿಡಿಕಾರಿದ್ದಾರೆ.
ಬೆಂಗಳೂರು, ಜನವರಿ 20: ಮಹಾತ್ಮ ಗಾಂಧೀಜಿಯವರು 1924ನೇ ಸಾಲಿನ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿರುವ ಶತಮಾನೋತ್ಸವದ ನೆನಪಿಗಾಗಿ ನಾಳೆ ಕಾಂಗ್ರೆಸ್ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದೆ. ಈ ಕುರಿತಾಗಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1924ರ ಕಾಂಗ್ರೆಸ್ಗೂ ಇಂದಿನ ಕಾಂಗ್ರೆಸ್ ಪಕ್ಷಕ್ಕೂ ಎಲ್ಲಿಯ ಸಂಬಂಧ ಎಂದು ವಾಗ್ದಾಳಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಲ್ಹಾದ್ ಜೋಶಿ, ನಾಳೆ ಕಾಂಗ್ರೆಸ್ (ಐ) ಪಕ್ಷವು ಬೆಳಗಾವಿಯಲ್ಲಿ ಸಮಾವೇಶ ನಡೆಸಲಿದೆ. ಈ ಸಮಾವೇಶ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ನೆನಪಿಗಾಗಿ. 1924ರ ಕಾಂಗ್ರೆಸ್ಗೂ ಇವತ್ತಿನ ಕಾಂಗ್ರೆಸ್ (ಐ) ಪಕ್ಷಕ್ಕೂ ಎಲ್ಲಿಯ ಸಂಬಂಧ. ಸ್ವತಃ ರಾಷ್ಟ್ರಪಿತ ಮಹಾತ್ಮಗಾಂಧಿ ಸ್ವಾತಂತ್ರ್ಯನಂತರ ಕಾಂಗ್ರೆಸ್ ವಿಸರ್ಜಿಸಲು ಕರೆ ಕೊಟ್ಟಿದ್ದರು. ಇಂದಿನ ನಕಲಿ ಗಾಂಧಿಗಳು ಸೇರಿ ನಕಲಿ ಕಾಂಗ್ರೆಸ್ ಪಕ್ಷದ ಸಮಾವೇಶವನ್ನು ಸರ್ಕಾರದ ದುಡ್ಡಿನಲ್ಲಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜ. 21ರಂದು ಬೆಳಗಾವಿಯಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ!
ಈ ಸಮಾವೇಶ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಹೆಸರಿನಲ್ಲಿ ನಡೆಯುತ್ತಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ ಅವರನ್ನು ಅವರ ಜೀವಿತಾವಧಿಯಲ್ಲಿ ಕಾಂಗ್ರೆಸ್ ಯಾವ ರೀತಿ ಅಪಮಾನಿಸಿತು ಎಂಬುವದು ಎಲ್ಲರಿಗೂ ಗೊತ್ತಿರುವ ವಿಷಯ. ಡಾ ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನವನ್ನು ರಾಷ್ಟ್ರ ಎಂದಿಗೂ ಮರೆಯುವದಿಲ್ಲಾ. ಡಾ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಒಂದಲ್ಲ ಎರಡು ಬಾರಿ. ಪಂಡಿತ್ ನೆಹರೂ ಅವರ ವಿರುದ್ಧ ಪ್ರಚಾರ ಮಾಡಿ, ಅವರ ಸೋಲನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡರು. ಡಾ ಅಂಬೇಡ್ಕರ್ ಅವರಿಗೆ ಭಾರತ ರತ್ನ ಗೌರವ ನೀಡದೆ ನಿರಾಕರಿಸಿದರು. ನೆಹರು ಮತ್ತು ಇಂದಿರಾ ಗಾಂಧಿ ತಮಗೆ ತಾವೆ ಭಾರತರತ್ನ ತೆಗೆದುಕೊಂಡರು ಮತ್ತು ರಾಜೀವ ಗಾಂಧಿ ಅವರಿಗೆ ಕಾಂಗ್ರೆಸ ಪಕ್ಷ ಭಾರತ ರತ್ನ ನೀಡಿತು ಎಂದಿದ್ದಾರೆ.
ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ಭಾರತೀಯ ಜನತಾ ಪಕ್ಷದ ಬೆಂಬಲದ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಪ್ರಧಾನಿ ವಿ.ಪಿ. ಸಿಂಗ್ ಅವರ ಸರ್ಕಾರ ಭಾರತ ರತ್ನ ನೀಡಿತು. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಹೆಮ್ಮೆಯ ಸ್ಥಾನವನ್ನು ನಿರಾಕರಿಸಿದರು. ಸಂವಿಧಾನ ಶಿಲ್ಪಿಯ ಶವಸಂಸ್ಕಾರಕ್ಕೂ ಜಾಗ ನೀಡಲಿಲ್ಲ. ಅವರ ವಾಸ ಮಾಡುತ್ತಿದ್ದ ಮನೆಯನ್ನು ಸ್ಮಾರಕ ಮಾಡಲು ಅವಕಾಶ ನೀಡಲಿಲ್ಲ. ಮುಂಬೈಯಲ್ಲಿಯೂ ಅವರ ಸ್ಮಾರಕ ಮಾಡಲಿಲ್ಲ. ನೆಹರು ಅವರು ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಮಂತ್ರಿಮಡಲಕ್ಕೆ ರಾಜಿನಾಮೆ ನೀಡಿದಾಗ ” ಅವರ ರಾಜಿನಾಮೆಯಿಂದ ಏನೂ ಆಗುವದಿಲ್ಲ” ಎಂದು ನೆಹರೂ ಹೇಳಿಕೆ ನೀಡಿದರು ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಕಡಿಮೆಯಾಗದ ಒಳಮುನಿಸು, ಬೆಳಗಾವಿಯಲ್ಲೇ ಇದ್ದರೂ ಡಿಕೆಶಿ ಭೇಟಿಯಾಗದ ಸತೀಶ್
ದಶಕ-ದಶಕಗಳಿಂದ ಸತತವಾಗಿ ಡಾ.ಬಾಬಾಸಾಹೇಬ ಅವರಿಗೆ ಗೌರವ ನೀಡದೆ ಅನ್ಯಾಯ ಮಾಡಿದ ಈ ಕಾಂಗ್ರೆಸ್ (ಐ) ಈ ಸಮಾವೇಶದಲ್ಲಾದರೂ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಕ್ಷಮೆ ಕೇಳುವ ಉದಾರತೆಯನ್ನು ತೋರಿಸುತ್ತದೆಯೇ? ತಮ್ಮ ತಪ್ಪಿಗಾಗಿ ಪ್ರಾಯಶ್ಚಿತ ವ್ಯಕ್ತಪಡಿಸುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.