ಬಿಜೆಪಿಗರು ನನ್ನನ್ನೂ ಬಂಧಿಸಿ ಎನ್ನುತ್ತಿರುವುದು ತಾವು ಮಾಡಿದ ಅಕ್ರಮಗಳ ಪ್ರಾಯಶ್ಚಿತ್ತಕ್ಕಾಗಿಯೇ?: ಕಾಂಗ್ರೆಸ್ ಪ್ರಶ್ನೆ

ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ನಾಯಕರು ನನ್ನನ್ನೂ ಬಂಧಿಸಿ ಅಭಿಯಾನ ನಡೆಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಬಿಜೆಪಿಗರು ನನ್ನನ್ನೂ ಬಂಧಿಸಿ ಎನ್ನುತ್ತಿರುವುದು ತಾವು ಮಾಡಿದ ಅಕ್ರಮಗಳ ಪ್ರಾಯಶ್ಚಿತ್ತಕ್ಕಾಗಿಯೇ?: ಕಾಂಗ್ರೆಸ್ ಪ್ರಶ್ನೆ
ನಾನು ಕರಸೇವಕ-1992, ನನ್ನನ್ನೂ ಬಂಧಿಸಿ ಎಂಬ ಬಿಜೆಪಿ ಅಭಿಯಾನದ ವಿರುದ್ಧ ಸರಣಿ ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಪೋಸ್ಟರ್​ ಹಂಚಿಕೊಂಡ ಕಾಂಗ್ರೆಸ್
Follow us
| Updated By: Rakesh Nayak Manchi

Updated on: Jan 05, 2024 | 10:46 AM

ಬೆಂಗಳೂರು, ಜ.5: ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಧನ ಖಂಡಿಸಿ ಬಿಜೆಪಿ (BJP) ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ನಾಯಕರು “ನಾನು ಕರಸೇವಕ-1992, ನನ್ನನ್ನೂ ಬಂಧಿಸಿ” ಅಭಿಯಾನ ನಡೆಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ (Congress) ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ. ಬಿಜೆಪಿಗರೆಲ್ಲರೂ ನನ್ನನ್ನೂ ಬಂಧಿಸಿ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೆ, ಕಾಂಗ್ರೆಸ್ ಹಂಚಿಕೊಂಡ ವಿಜಯೇಂದ್ರ ಅವರ ಎಡಿಟೆಡ್ ಪೋಸ್ಟರ್​ನಲ್ಲಿ, ನಾನು RTGS ಮೂಲಕ ಲಂಚ ಪಡೆದಿದ್ದೇನೆ, 40,000 ಕೋಟಿಯ ಅಕ್ರಮದಲ್ಲಿ ಪಾಲುದಾರ, ನನ್ನನ್ನು ಬಂಧಿಸಿ ಎಂದು ಬರೆಯಲಾಗಿದೆ.

ರಾಜ್ಯ ಬಿಜೆಪಿ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು. ಸಿಟಿ ರವಿ ಅವರೇ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ? ಎಂದು ಟ್ವೀಟ್ ಮಾಡಿದೆ. ಅಲ್ಲದೆ, ಕಾಂಗ್ರೆಸ್ ಹಂಚಿಕೊಂಡ ಸಿಟಿ ರವಿ ಅವರ ಎಡಿಟೆಡ್ ಪೋಸ್ಟರ್​ನಲ್ಲಿ, ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ, ನನ್ನನ್ನೂ ಬಂಧಿಸಿ ಎಂದು ಎಡಿಟೆಡ್ ಪೋಸ್ಟರ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದೆ.

ಇದನ್ನೂ ಓದಿ: ರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದ ಕಾಂಗ್ರೆಸ್‌, ರಾಮ ಮಂದಿರ ಉದ್ಘಾಟನೆಗೆ ಏಕೆ ಆಹ್ವಾನ ಬಯಸುತ್ತಿದೆ? ಆರ್‌. ಅಶೋಕ ಕಿಡಿ

ನನ್ನನ್ನೂ ಬಂಧಿಸಿ ಎನ್ನುತ್ತಿರುವ ಸುನಿಲ್ ಕುಮಾರ್ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿ ಸುನಿಲ್ ಕುಮಾರ್ ವಿರುದ್ಧ ಪೋಸ್ಟರ್ ಹಂಚಿಕೊಂಡಿದೆ.

ಕೆಎಸ್ ಈಶ್ವರಪ್ಪ ಅವರು ಹಿಡಿಯಬೇಕಾದ ಪೋಸ್ಟರ್ ಇದು! ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ! ಎಂದು ಕಾಂಗ್ರೆಸ್ ಬರೆದುಕೊಂಡಿದೆ. ಅಲ್ಲದೆ, ಈಶ್ವರಪ್ಪ ವಿರುದ್ಧ ಹಂಚಿಕೊಂಡ ಪೋಸ್ಟರ್​ನಲ್ಲಿ, ನಾನು 40 ಪರ್ಸೆಂಟ್ ಕಮಿಷನ್ ನುಂಗಿ ಸಂತೋಷ್ ಪಾಟೀಲ್ ಸಾವಿಗೆ ಕಾರಣನಾಗಿದ್ದೇನೆ. ನನ್ನನ್ನು ಬಂಧಿಸಿ ಎಂದು ಬರೆಯಲಾಗಿದೆ.

ಇತ್ತೀಚೆಗೆ ಸಂಸತ್ ಅಧಿವೇಶನ ನಡೆಯುತ್ತಿದ್ದಾಗ ಸ್ಮೋಕ್ ಬಾಂಬ್ ದಾಳಿ ನಡೆಸಿದ ಘಟನೆ ನಡೆದಿತ್ತು. ಇದನ್ನೇ ಮುಂದಿಟ್ಟುಕೊಂಡು ಸಂಸದ ಪ್ರತಾಪ್ ಸಿಂಹ ವಿರುದ್ಧ ಟ್ವೀಟ್ ಮಾಡಿದ ಕಾಂಗ್ರೆಸ್, ಪ್ರತಾಪ್ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ! ಎಂದು ಸವಾಲು ಹಾಕಿದ್ದಾರೆ. ಸಂಸದರ ವಿರುದ್ಧ ಹಂಚಿಕೊಂಡ ಪೋಸ್ಟರ್​ನಲ್ಲಿ, ನಾನು ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟು ಸಹಕರಿಸಿದ್ದೇನೆ, ನನ್ನನ್ನೂ ಬಂಧಿಸಿ ಎಂದು ಬರೆಯಲಾಗಿದೆ.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ