CT Ravi: ಕರ್ನಾಟಕ ಬಿಜೆಪಿ ಅಧ್ಯಕ್ಷ ಹುದ್ದೆ ಬಗ್ಗೆ ಸಿಟಿ ರವಿ ಅಚ್ಚರಿ ಹೇಳಿಕೆ
ಕರ್ನಾಟಕ ಬಿಜೆಪಿ ಅಧ್ಯಕ್ಷ ಹುದ್ದೆ ಬಗ್ಗೆ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು, (ಜುಲೈ 30): ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ(Karnataka BJP President Post) ಹೊಸಬರನ್ನು ನೇಮಕ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಸಿಟಿ ರವಿ(CT Ravi) ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲ ಹೈಕಮಾಂಡ್ ಚಿಂತನೆ ನಡೆಸಿದೆ. ಸಿಟಿ ರವಿಯವರೇ ರಾಜ್ಯ ಬಿಜೆಪಿ ಅಧ್ಯಕ್ಷ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಸಹ ಸುಳಿವು ನೀಡಿದ್ದರು. ಇದಲ್ಲದೆ ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿಗೆ ಹೈಕಮಾಂಡ್ ಕೊಕ್ ಕೊಟ್ಟಿದೆ. ಹೀಗಾಗಿ ಸಿಟಿ ರವಿಗೆ ರಾಜ್ಯಾಧ್ಯಕ್ಷ ಹುದ್ದೆ ಬಹುತೇಕ ಫಿಕ್ಸ್ ಎನ್ನಲಾಗಿದೆ. ಆದ್ರೆ, ಇದರ ಮಧ್ಯೆ ಸ್ವತಃ ಸಿಟಿ ರವಿ ಈ ಬಗ್ಗೆ ಪ್ರತಿಕ್ರಿಯಿಸಿ ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜುಲೈ 30) ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ರಾಜ್ಯಾಧ್ಯಕ್ಷ ಎನ್ನುವುದು ಜವಾಬ್ದಾರಿಯುತವಾದ ಸ್ಥಾನ. ಹುದ್ದೆಯನ್ನು ಕೇಳಿ ಪಡೆಯುವಂತದ್ದಲ್ಲ, ಈ ಬಗ್ಗೆ ಪಕ್ಷ ನಿರ್ಧರಿಸುತ್ತೆ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹುದ್ದೆಯಿಂದ ಕೊಕ್ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಪಕ್ಷದ ಯಾವುದೇ ಹುದ್ದೆ, ಅಧಿಕಾರ ಶಾಶ್ವತ ಅಲ್ಲ. 35 ವರ್ಷ ಹಿಂದೆ ಬೂತ್ ಅಧ್ಯಕ್ಷನಾಗಿ ಕೆಲಸ ಆರಂಭಿಸಿದ್ದೆ. ಈವರೆಗೂ ಪಕ್ಷ ನೀಡಿದ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ರಾಜಕೀಯ ವೃತ್ತಿಯಲ್ಲಿ ಹಲವು ಕೆಲಸ ಮಾಡಿದ್ದೇನೆ. 2 ವರ್ಷ 10 ತಿಂಗಳು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ನಾನೀಗ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮುಂದೆ ಪಕ್ಷದ ಕಾರ್ಯಕರ್ತನಾಗಿ ನನ್ನ ಕೆಲಸ ಮುಂದುವರಿಸುತ್ತೇನೆ ಎಂದರು.
ಸಿಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್ ಆಗಿದ್ದು, ಹೈಕಮಾಂಡ್ನಿಂದ ಅಧಿಕೃತ ಘೋಷಣೆ ಅಷ್ಟೇ ಬಾಕಿ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ, ಇದೀಗ ಸಿಟಿ ರವಿ ಹೇಳಿಕೆ ಅಚ್ಚರಿ ಮೂಡಿಸಿದೆ. ಹೈಕಮಾಂಡ್ ಘೋಷಣೆ ಮಾಡುವುದಕ್ಕೂ ಮೊದಲೇ ತಾವೇ ಹೇಳಿಕೊಳ್ಳಬಾರದು ಎಂದು ರೀತಿ ಹೇಳಿಕೆ ನೀಡಿರುವ ಸಾಧ್ಯತೆಗಳಿವೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Sun, 30 July 23