ಆನ್​​ಲೈನ್​ ಪಾಠ ಗಣಿತವನ್ನು ಇನ್ನಷ್ಟು ಕಬ್ಬಿಣದ ಕಡಲೆಯಾಗಿಸಿದೆಯೇ? ಗಣಿತ ಶಿಕ್ಷಕ ವಿಜಯ್ ಸಂದರ್ಶನ

National Mathematics Day 2020 ಮತ್ತು ಕೊರೊನಾ ಕಾಟದ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲೇ ಗಣಿತ ಕಲಿಯಲಿಚ್ಛಿಸುವ ವಿದ್ಯಾರ್ಥಿಗಳಿದ್ದಾರಾ? ಮುಂದಿನ 3 ರಿಂದ 5 ವರ್ಷಗಳ ನಂತರ ಗಣಿತ ಬೋಧನೆ ಹೇಗಿರಬಹುದು? ಎಂಬ ಟಿವಿ9 ಕನ್ನಡ ಡಿಜಿಟಲ್​ ಪ್ರಶ್ನೆಗೆ ಗಣಿತ ಶಿಕ್ಷಕರಾಗಿರುವ ವಿಜಯ್ ಅವ​ರು ನೇರವಾಗಿ ಉತ್ತರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಓದಿ ನೋಡಿ..

ಆನ್​​ಲೈನ್​ ಪಾಠ ಗಣಿತವನ್ನು ಇನ್ನಷ್ಟು ಕಬ್ಬಿಣದ ಕಡಲೆಯಾಗಿಸಿದೆಯೇ? ಗಣಿತ ಶಿಕ್ಷಕ ವಿಜಯ್ ಸಂದರ್ಶನ
ಗಣಿತ ಶಿಕ್ಷಕರಾದ ವಿಜಯ್ ಅವ​ರ ಸಂದರ್ಶನ ಟಿವಿ9 ಕನ್ನಡ ಡಿಜಿಟಲ್​ನಲ್ಲಿ..
Follow us
guruganesh bhat
|

Updated on:Dec 22, 2020 | 4:23 PM

ರಾಷ್ಟ್ರೀಯ ಗಣಿತ ದಿನದ National Mathematics Day 2020 ಪ್ರಯುಕ್ತ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಅಪೋಲೊ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಗಣಿತ ಶಿಕ್ಷಕರಾಗಿರುವ ವಿಜಯ್ ಅವ​ರನ್ನು ಟಿವಿ9 ಕನ್ನಡ ಡಿಜಿಟಲ್ ಸಂದರ್ಶಿಸಿದೆ. ವಿದ್ಯಾರ್ಥಿಗಳಲ್ಲಿ ಗಣಿತವೆಂದರೆ ಕಬ್ಬಿಣದ ಕಡಲೆ ಎಂಬ ಅಸಾಮಾನ್ಯ ಭಾವವಿದೆ. ಇಂತಿರುವಾಗ, ಕಳೆದ ಐದಾರು ತಿಂಗಳಿಂದ ವರ್ಚುವಲ್ ಕ್ಲಾಸ್​ನಲ್ಲಿ ಗಣಿತ ಕಲಿಯುತ್ತಿರುವ ವಿದ್ಯಾರ್ಥಿಗಳ ಮನೋಭಾವದ ಕುರಿತು ವಿಜಯ್ ಅವರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರ: ಗಣಿತ ಮಿಕ್ಕೆಲ್ಲ ವಿಷಯಗಳಿಗಿಂತ ಸ್ವಲ್ಪ ಕಷ್ಟ ಎಂಬ ಸಾಮಾನ್ಯ ಅಭಿಪ್ರಾಯ ವಿದ್ಯಾರ್ಥಿಗಳ ಮನದಲ್ಲಿದೆ. ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿರುವಾಗ, ಆನ್​ಲೈನಲ್ಲಿ ಗಣಿತ ಬೋಧನೆ ಎಷ್ಟು ಪರಿಣಾಮಕಾರಿ?

ಉ: ಈ ಮೊದಲು ಆನ್​ಲೈನ್ ಕ್ಲಾಸ್​ಗಳ ಕುರಿತು ಶಿಕ್ಷಕರಾದ ನಮಗೂ ಸಂಪೂರ್ಣ ಪರಿಕಲ್ಪನೆ ಇರಲಿಲ್ಲ. ಒಮ್ಮೊಮ್ಮೆ ವಿಡಿಯೊ, ಪಿಪಿಟಿಗಳನ್ನು ಆಧರಿಸಿ ಪಾಠ ಮಾಡುತ್ತಿದ್ದೆವು‌. ಆದರೆ ಸಂಪೂರ್ಣ ಆನ್​ ಲೈನ್ ಶಿಕ್ಷಣದ ಮೇಲೆ ಅವಲಂಬಿತವಾಗಿರಲಿಲ್ಲ, ಆ ಕಲ್ಪನೆಯೂ ಇರಲಿಲ್ಲ. ಗಣಿತದಲ್ಲಿ 10 ಪುಟದ ಪಾಠವನ್ನು ಆನ್​ಲೈನ್ ಮೂಲಕ ಮೂರೇ ಮೂರು ಪುಟದಲ್ಲಿ ಕಲಿಸಬಹುದು. ಮಕ್ಕಳಿಗೆ ನೇರ ಅನುಭವವಾಗದ ಕಾರಣ ಮಕ್ಕಳ ಗಮನವೂ ಬೇರೆಡೆ ಹರಿಯುತ್ತೆ. ಗಣಿತದಲ್ಲಿ 10 ರಲ್ಲಿ 3 ಉತ್ತರಗಳಷ್ಟೇ ಮಕ್ಕಳು ಸರಿಯಾಗಿ‌ ನೀಡಬಲ್ಲರು. ಹೆಚ್ಚು ಸಮಯ ತೆಗೆದುಕೊಂಡು ಹೇಳಿದ್ದನ್ನೇ ಹೇಳಿ, ಮತ್ತೆ ಮತ್ತೆ ಕಲಿಸಿ ಪ್ರತಿಶತಃ 100 ಸಾಧನೆಯಾಗಬಹುದು ಎಂದು ಹೇಳಬಹುದಷ್ಟೆ..

ಪ್ರ: ಗಣಿತವನ್ನ ಆನ್​ಲೈನ್​ನಲ್ಲಿ ಕಲಿಸಲು ಯಾವ ಸಾಧನಗಳನ್ನು ಬಳಸುತ್ತೀರಿ..?

ಉ: ಮೊದಲಾದರೆ ಚಾಕ್ ಪೀಸ್- ಬೋರ್ಡ್, ಪೆನ್ ಗಳಿತ್ತು. ಮಕ್ಕಳ ಬಳಿ ನೇರ ಸಂವಹನ ಮಾಡಬಹುದಿತ್ತು. ಆದರೆ ಈಗ ಹೀಗಲ್ಲ..ಸ್ಮಾರ್ಟ್ ಫೋನ್, ಟ್ಯಾಬ್​ಗಳ‌ ಮುಂದೆ ಲೆಕ್ಕ ಹೇಳಬೇಕಾಗಿದೆ. Pen Tab ಎಂಬ ಸಾಧನವಿದೆ, ನಾಲ್ಕರಿಂದ ಎಂಟು ಸಾವಿರದೊಳಗೆ ಸಿಗುತ್ತೆ. ಅದರಲ್ಲಿ ನಾವು ಏನು ಬರೀತೆವೋ ಅದು ಮಕ್ಕಳಿಗೆ ಕಾಣಿಸುತ್ತೆ..ಇನ್ನೊಂದು ಸಾಧನ iPad, ನಾನು iPad ಅನ್ನು ಬಳಸುತ್ತೇನೆ. ಇದರಲ್ಲಿ ಬೋರ್ಡ್​​ನ ಫೀಲ್ ಬರುತ್ತೆ. ಚಿತ್ರ, ಸಂಖ್ಯೆ, ಲೆಕ್ಕ ಏನು ಬೇಕಾದರೂ ಬರೆಯಬಹುದು..

ಪ್ರ: ಸಾಂಪ್ರದಾಯಿಕ ತರಗತಿಯಲ್ಲಿ ಗಣಿತ ಬೋಧನೆಗೂ, ಆನ್​ಲೈನ್​ನಲ್ಲಿ ಗಣಿತ ಬೋಧನೆಗೂ ಏನೆಲ್ಲಾ ವ್ಯತ್ಯಾಸಗಳಿವೆ?

ಉ: ನೋಡಿ.. ಗಣಿತ ಎಂದರೆ ಇತರ ವಿಷಯಗಳಂತಲ್ಲ.  ಮಗುವಿನ ಸಾಮರ್ಥ್ಯದ ಮೇಲೆ ನಾವು ಕಲಿಸುವ ರೀತಿ ಅವಲಂಬಿತವಾಗಿರುತ್ತೆ. ಕ್ಲಾಸಲ್ಲಾದರೆ ಒಂದು ಚಿತ್ರವನ್ನು ಬೋರ್ಡ್ ನಲ್ಲಿ ಬರೆದರೂ ಮನಸಲ್ಲಿ ಕಲ್ಪನೆ ಮಾಡಿಕೊಳ್ಳಲು ಹೇಳುತ್ತೇವೆ. ‌ಆದರೆ, ಆನ್​ಲೈನ್​ನಲ್ಲಿ ಗೂಗಲ್‌ ಮೂಲಕ ಯಾವುದೇ Abstract ಚಿತ್ರವನ್ನು ಸಹ ಮಗುವಿಗೆ ಕಾಣಿಸಬಹುದು.. ಗ್ರಾಫ್ ಆದರೆ ಗೂಗಲ್ ಜೀಬ್ರಾ ಇದೆ. ಮ್ಯಾಥ್ ಲ್ಯಾಬ್ ಸಾಫ್ಟ್​ವೇರ್ ಮೂಲಕ ಯಾವುದೇ ಚಿತ್ರವನ್ನು 3 ಆಯಾಮದಲ್ಲಿ, 360 ಡಿಗ್ರಿಯಲ್ಲಿ ಕಾಣಿಸಬಹುದು.. ಒಂದು ಆಯತದ ಚಿತ್ರ ಎಂದಿಟ್ಟುಕೊಂಡರೆ, ಮಗು ಆಯತವನ್ನು ಮುಟ್ಟಿ ನೋಡಿದ ಅನುಭವ ಪಡೆಯಬಹುದು.. ಆನ್​ಲೈನ್ ಗಣಿತ ಕಲಿಸಲು ಇಷ್ಟೆಲ್ಲ ಅವಕಾಶಗಳೂ ಇವೆ.

ಪ್ರ: ಅಂದರೆ, ಆನ್​ಲೈನ್​ನಲ್ಲಿ ಗಣಿತ ಕಲಿಸುವುದೇ ಹೆಚ್ಚು ಪರಿಣಾಮಕಾರಿಯೇ..?

ಉ: ಅಲ್ಲ, ಖಂಡಿತಾ ಅಲ್ಲ.. ಸಾಂಪ್ರದಾಯಿಕ ಅಂದರೆ ಶಾಲೆಗಳಲ್ಲಿ ಗಣಿತ ಕಲಿಯುವುದು ತುಂಬಾ ಪರಿಣಾಮಕಾರಿ. ಶಾಲೆಯಲ್ಲಿ ನಮ್ಮ ಮತ್ತು ವಿದ್ಯಾರ್ಥಿಗಳ ನಡುವೆ.. ನೇರ ಸಂವಹನ ಸಾಧ್ಯವಾಗುತ್ತೆ.. ಆದರೆ, ಆನ್​ಲೈನ್​ನಲ್ಲಿ ಇದು ಸಾಧ್ಯವಿಲ್ಲ. ಏನೇನೋ ತಾಂತ್ರಿಕ ತೊಂದರೆಗಳು, ಮಕ್ಕಳಿಗೆ ಇಷ್ಟವಿರಲ್ಲ.. ಹೀಗೆ ಬೇರೆ ಬೇರೆ ತೊಂದರೆಗಳೂ ಇದ್ದೇ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಜೊತೆ ವೈಯಕ್ತಿಕ ಸಂಪರ್ಕ ಸಾಧ್ಯವಾಗುವುದಿಲ್ಲ. ಗಣಿತವನ್ನು ಸುಲಲಿತಗೊಳಿಸಲು ಈ ಸಂಪರ್ಕ ಬೇಕು.. ಅದು ಆನ್​ಲೈನ್​ ಬೋಧನೆಯಲ್ಲಿ ಸಾಧ್ಯವಿಲ್ಲ.

ಪ್ರ: ಆನ್​ಲೈನ್ ಗಣಿತ ಕ್ಲಾಸ್​ಗಳ ಕುರಿತು ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿದೆ? ಉ: ಮಕ್ಕಳು ನಮಗಿಂತ ಬುದ್ಧಿವಂತರು.. ಕೊಟ್ಟ ಹೋಂ ವರ್ಕ್​ಗಳನ್ನು ಸ್ಕ್ಯಾನ್ ಮಾಡಿ ಕಳಿಸಲು ಹೇಳಿರುತ್ತೇವೆ. ಟೈಮ್​​ಪಾಸ್​ ಥರ ತೆಗೆದುಕೊಳ್ಳುವ ಮಕ್ಕಳೂ ಇದ್ದಾರೆ. ಕೆಲವರಿಗೆ ಆನ್​ಲೈನ್ ಗಣಿತ ಕ್ಲಾಸ್​ಗಳೆಂದರೆ ಫನ್ ಆ್ಯಕ್ಟಿವಿಟಿ ಇದ್ದಂತೆ.. ಗಂಭೀರವಾಗಿ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ. ಮೊದಮೊದಲು ಕಷ್ಟವಾದರೂ ನಂತರ ಆನ್​ಲೈನ್ ತರಗತಿಗೆ ಹೊಂದಿಕೊಂಡರು. ಆದರೆ ಈಗೀಗ ಗಣಿತವನ್ನು ಆನ್​ಲೈನ್​ನಲ್ಲಿ ಕಲಿಯಲು ಬೋರ್​ ಬರುತ್ತಿದೆ ಎನ್ನುತ್ತಿದ್ದಾರೆ. ಆದರೆ, ಆನ್​ಲೈನ್ ಕ್ಲಾಸ್​ಗಳಿಂದ ಸಾಂಪ್ರದಾಯಿಕ ಆಫ್​ಲೈನ್ ತರಗತಿಗಳ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಿದೆ.

ಪ್ರ: ಆನ್​ಲೈನ್​ ತರಗತಿಗಳಿಂದ ಗಣಿತವನ್ನು ಎಲ್ಲಾ ಬುದ್ಧಿಮತ್ತೆಯ ವಿದ್ಯಾರ್ಥಿಗಳೂ ಅರ್ಥಮಾಡಿಕೊಳ್ಳುತ್ತಿದ್ದಾರಾ? ಉ: ಈ ವಿಷಯದಲ್ಲಿ ಬಹಳ ಗಂಭೀರ ಸಮಸ್ಯೆಯಿದೆ. ನಿಧಾನ ಕಲಿಕೆಯ ಸಾಮರ್ಥ್ಯದ ಮಕ್ಕಳಿಗೆ ಆನ್​ಲೈನ್​ನಲ್ಲಿ ಗಣಿತ ಕಲಿಯುವುದು ಇನ್ನೂ ಕಷ್ಟವಾಗುತ್ತೆ. ಅದರಲ್ಲೂ, ಅಭ್ಯಾಸ ಇಲ್ಲದಿರುವದರಿಂದ ಪರಿಸ್ಥಿತಿ ಬಿಗಡಾಯಿಸುತ್ತೆ. ಮಧ್ಯಮ ಸಾಮರ್ಥ್ಯದ ಮಕ್ಕಳು ಹಂತ ಹಂತವಾಗಿಯಾದರೂ ಕಲಿಯುತ್ತಾರೆ. ಆದರೆ, ನಿಧಾನ ಕಲಿಕೆಯ ಮಕ್ಕಳಿಗೆ ಕಷ್ಟ. ಈಗಿರುವ ನಿಯಮಾವಳಿಗಳ ಪ್ರಕಾರ ನಿಧಾನ ಕಲಿಕೆಯ ಮಕ್ಕಳಿಗೆಂದು ಎಕ್ಸ್​ಟ್ರಾ ಕ್ಲಾಸ್ ಮಾಡಲೂ ಆಗದು.

ಪ್ರ: ಬಹುತೇಕ ಶಾಲೆಗಳು ಆನ್​​ಲೈನ್​ ಕ್ಲಾಸ್​ ಆರಂಭಿಸಿವೆ. ಜೊತೆಗೆ, ಯೂಟ್ಯೂಬ್​ನಲ್ಲೂ ಉಚಿತವಾಗಿ ಗಣಿತ ಕಲಿಸುವ ವಿಡಿಯೋಗಳು ಸಿಗುತ್ತಿವೆ. ಹಣ ಕೊಟ್ಟು ವ್ಯಾವಹಾರಿಕ ಕಂಪನಿಗಳಿಗೆ ಚಂದಾದಾರರಾಗುವವರೂ ಇದ್ದಾರೆ. ಇಷ್ಟೆಲ್ಲ ಆಯ್ಕೆಗಳಿರುವಾಗ ಮಕ್ಕಳು ಯಾವುದನ್ನು ಇಷ್ಟಪಡುತ್ತಿದ್ದಾರೆ? ಉ: ನೋಡಿ.. ಉಚಿತವಾಗಿ ಎಷ್ಟೇ ಉತ್ತಮ ಕ್ಲಾಸ್​ಗಳು ಸಿಗಲಿ.. ಅಥವಾ ‘ಕ್ವಾಲಿಟಿ’ಯ ಹೆಸರಲ್ಲಿ ಹಣ ತೆತ್ತು ಚಂದಾದಾರರಾಗಿ. ಮಕ್ಕಳಿಗೆ ಅವರ ಸರ್/ಟೀಚರ್ ಪಾಠ ಹೇಳಿದರೇನೆ ಒಂದು ಖುಷಿ.. ಉದಾಹರಣೆಗೆ ಮಹತ್ವದ ನಿರ್ಧಾರ ಕೈಗೊಳ್ಳುವಾಗ ನಿಮ್ಮ ಪರಿಚಿತರ ಸಲಹೆಯನ್ನೇ ನೀವು ಪರಿಗಣಿಸುವುದಿಲ್ಲವೇ.. ಹಾಗೇ ಇದು. ಮಕ್ಕಳಿಗೆ ಅವರ ಶಾಲೆಯ ಶಿಕ್ಷಕರ ಪಾಠವೇ ಅಚ್ಚುಮೆಚ್ಚು.

ಜೊತೆಗೆ, ಶಿಕ್ಷಕರಿಗೂ ಮಕ್ಕಳ ಸಾಮರ್ಥ್ಯದ ಅರಿವಿರುವುದರಿಂದ , ಪ್ರತಿ ವಿದ್ಯಾರ್ಥಿಗೂ ಹೇಗೆ ಪಾಠ ಮಾಡಬೇಕೆಂಬ ಅರಿವಿರುತ್ತೆ. ಮೊದಲೇ ನಿರ್ಮಾಣವಾದ ಒಂದು ಸಂವಹನ ವ್ಯವಸ್ಥೆಯಿರುತ್ತೆ. ಈ ವಿದ್ಯಾರ್ಥಿಗೆ ಹೀಗೆ ಹೇಳಿದರೆ ಚೆನ್ನಾಗಿ ಮನದಟ್ಟಾಗುತ್ತೆ ಎಂಬುದು ಗೊತ್ತಿರುತ್ತೆ. ಬೇರೆ ಬೇರೆ ಕಂಪನಿಗಳ ಟೀಚಿಂಗ್ ಕ್ಲಾಸ್​ಗಳಲ್ಲಿ ಎಲ್ಲರಿಗೂ ಒಂದೇ ಥರದ ಪಾಠ ಸಿಗುತ್ತೆ. ಆದರೆ ನಮ್ಮಲ್ಲಿ ಹಾಗಲ್ಲ.. 5 ಸೆಂ.ಮೀ. ಸರ್ಕಲ್ಲಿನ ಬದಲಿಗೆ 2.5 ಸೆಂ.ಮೀ. ಸರ್ಕಲ್ಲಿನ ಉದಾಹರಣೆಯನ್ನೂ ನಾವು ಹೇಳುತ್ತೇವೆ.

ಪ್ರ: ಆನ್​ಲೈನ್​ನಲ್ಲೇ ಗಣಿತ ಕಲಿಯಲಿಚ್ಛಿಸುವ ವಿದ್ಯಾರ್ಥಿಗಳಿದ್ದಾರಾ? ಮುಂದಿನ 3 ರಿಂದ 5 ವರ್ಷಗಳ ನಂತರ ಗಣಿತ ಬೋಧನೆ ಹೇಗಿರಬಹುದು? ಉ: 100ರಲ್ಲಿ ಎರಡು ವಿದ್ಯಾರ್ಥಿಗಳು ಈ ನಿರ್ಧಾರ ತಳೆಯಬಹುದಷ್ಟೇ.. ಆದರೆ, ಶಾಲೆಯ ತರಗತಿಯ ಜೊತೆಜೊತೆಗೆ ಆನ್​ಲೈನ್ ಮೂಲಕವೂ ಗಣಿತ ಪಾಠ ನಡೆಸಬಹುದು. ಸತತ 5 ವರ್ಷ ಒಬ್ಬನೇ ಶಿಕ್ಷಕ ವಿದ್ಯಾರ್ಥಿಯೋರ್ವನಿಗೆ ಆನ್​ಲೈನ್​ನಲ್ಲಿ ಗಣಿತ ಪಾಠ ಮಾಡಿದರೆ ಮಾತ್ರ ಈ ಕುರಿತು ಯೋಚಿಸಬಹುದು.. ಮಕ್ಕಳ ಮಾನಸಿಕ ಬೆಳವಣಿಗೆಯ ಮಟ್ಟ, ಬುದ್ಧಿಮತ್ತೆ ಮತ್ತು ಕಲಿಕೆಯ ಸಾಮರ್ಥ್ಯ ಅರಿತಿದ್ದರೆ ಮಾತ್ರ ಗಣಿತವನ್ನು ಆನ್​ಲೈನ್​​ನಲ್ಲಿ ಕಲಿಸಬಹುದು..

Published On - 4:15 pm, Tue, 22 December 20