Tv9 Facebook Live | ಕಸ್ತೂರಿ ರಂಗನ್ ವರದಿ ಜಾರಿ ಎಷ್ಟು ಸರಿ? ಏನು ತಪ್ಪು?

ಕಸ್ತೂರಿ ರಂಗನ್ ವರದಿ ಜಾರಿಯಿಂದ ಕೃಷಿ, ಮನೆ ನಿರ್ಮಾಣ, ರಸ್ತೆ ಕಾಮಗಾರಿ ಮುಂತಾದ ಚಟುವಟಿಕೆಗಳಿಗೆ ತೊಡಕುಂಟಾಗುವ ಬಗ್ಗೆ ಹಳ್ಳಿಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಜನರು ತಮ್ಮ ಮೂಲವಸತಿ ಪ್ರದೇಶವನ್ನು ಬಿಡಬೇಕು ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ.

Tv9 Facebook Live | ಕಸ್ತೂರಿ ರಂಗನ್ ವರದಿ ಜಾರಿ ಎಷ್ಟು ಸರಿ? ಏನು ತಪ್ಪು?
ಡಾ.ಮೋಹನ್​ಕುಮಾರ್, ಪ್ರವೀಣ್ ಭಾರ್ಗವ್, ಬಿ.ಆರ್.ದೀಪಕ್
Follow us
TV9 Web
| Updated By: ganapathi bhat

Updated on:Apr 06, 2022 | 11:25 PM

ಬೆಂಗಳೂರು: ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ವರದಿ ಜಾರಿಗೆ ಈ ಹಿಂದೆ ಸುಮಾರು ನಾಲ್ಕು ಬಾರಿ ಅಧಿಸೂಚನೆ ನೀಡಿದ್ದ ಕೇಂದ್ರ, ಈಗ ಡಿ. 31ರ ಅಂತಿಮ ಗಡುವು ನೀಡಿದೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಕೃಷಿ, ಮನೆ ನಿರ್ಮಾಣ, ರಸ್ತೆ ಕಾಮಗಾರಿ ಮುಂತಾದ ಚಟುವಟಿಕೆಗಳಿಗೆ ತೊಡಕುಂಟಾಗುವ ಬಗ್ಗೆ ಹಳ್ಳಿಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಜನರು ತಮ್ಮ ಮೂಲವಸತಿ ಪ್ರದೇಶವನ್ನು ಬಿಡಬೇಕು ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ. ಪರಿಸರವಾದಿಗಳು ಕಸ್ತೂರಿ ರಂಗನ್ ವರದಿ ಜಾರಿಗೊಳ್ಳುವುದರಿಂದ ಜನಜೀವನಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಿದ್ದಾರೆ.

ಈ ವಿಚಾರಗಳ ಸರಿ-ತಪ್ಪು ವಿಮರ್ಶೆಗಳನ್ನು ಕೇಂದ್ರೀಕರಿಸಿ ಸೋಮವಾರ, ಟಿವಿ9 ಫೇಸ್​ಬುಕ್ ಲೈವ್ ಸಂವಾದ ನಡೆಸಿತು. ಪರಿಸರವಾದಿ ಪ್ರವೀಣ್ ಭಾರ್ಗವ್, ರೈತರಾದ ಡಾ. ಮೋಹನ್ ಕುಮಾರ್ ಹಾಗೂ ನ್ಯಾಯವಾದಿ ಬಿ.ಆರ್. ದೀಪಕ್ ಸಂವಾದದಲ್ಲಿ ಭಾಗವಹಿಸಿದ್ದರು. ಆ್ಯಂಕರ್ ಮಾಲ್ತೇಶ್ ಜಾನಗಲ್ ಕಾರ್ಯಕ್ರಮ ನಡೆಸಿಕೊಟ್ಟರು.

ಮೊದಲು ಮಾತನಾಡಿದ ಡಾ. ಮೋಹನ್ ಕುಮಾರ್, ಕಸ್ತೂರಿ ರಂಗನ್ ಬಗೆಗಿನ ಗೊಂದಲಗಳನ್ನು ಪರಿಹರಿಸುವಂತೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆಡಳಿತದ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವರದಿಯ ವಿವರಣೆ ನೀಡಲು ಕೇರಳ ರಾಜ್ಯದ ಮಾದರಿಯನ್ನು ಪರಿಗಣಿಸಬೇಕು ಎಂದು ಕೇಳಿಕೊಂಡರು. ಕೇರಳವು ಕಸ್ತೂರಿ ರಂಗನ್ ವರದಿಯ ಬಗ್ಗೆ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿದೆ. ವರದಿಯ ನಕ್ಷೆ ಇಟ್ಟುಕೊಂಡು ನೈಸರ್ಗಿಕ ಕಾಡು, ಕೃಷಿ ಭೂಮಿ, ರೈತರು ಬೆಳೆಸಿದ ಕಾಡುಗಳ ಬಗ್ಗೆ ಅಧ್ಯಯನ ನಡೆಸಿದೆ ಎಂದು ವಿವರಣೆ ನೀಡಿದರು.

ಶಾಸಕ, ಜನಪ್ರತಿನಿಧಿ, ಅಧಿಕಾರಿಗಳ ಮೂಲಕ ಸಭೆ ನಡೆಸಿ ಗ್ರಾಮದ ಜನರ ಗೊಂದಲ ನಿವಾರಿಸಬೇಕು. ಕೇರಳದಲ್ಲಿ ವರದಿಯನ್ನು ಮಲಯಾಳಂಗೆ ತರ್ಜುಮೆ ಮಾಡಿದಂತೆ, ಇಲ್ಲಿನ ಸರ್ಕಾರ ಕಸ್ತೂರಿ ರಂಗನ್ ವರದಿಯ ಕನ್ನಡ ಪ್ರತಿ ನೀಡಿ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಪಶ್ಚಿಮ ಘಟ್ಟ, ಸೂಕ್ಷ್ಮ ಅರಣ್ಯ ಪ್ರದೇಶ ಉಳಿಸಲು ಈ ವರದಿ ಮಾಡಲಾಗಿದೆ. ಕಾಡು, ಕೃಷಿ, ಜಲಮೂಲ ಇತ್ಯಾದಿಗಳನ್ನು ಡಿಮಾರ್ಕೇಷನ್ ಮಾಡಿ ಯೋಜನೆ ಅಳವಡಿಸಬೇಕು. ಅದರ ಹೊರತಾಗಿ, ಅಷ್ಟೂ ಜಾಗದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಸರಿಯಲ್ಲ. ಹಲವು ಕಡೆಗಳಲ್ಲಿ ಗೋಮಾಳ, ಆಸ್ಪತ್ರೆಗಳಿವೆ. ಅವಕ್ಕೂ ತೊಂದರೆ ಆಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ, ಗ್ರಾಮ ಗ್ರಾಮಗಳಿಗೆ ಸಮಿತಿ ಕಳಿಸಿ, ಗ್ರಾಮದ ಜನರ ಹಾಗೂ ಮುಖಂಡರ ಜೊತೆ ಚರ್ಚೆ ನಡೆಸಬೇಕು. ಮಲೆನಾಡು ಭಾಗಗಳಲ್ಲಿ ತೋಟಗಳು ಹೆಚ್ಚಿವೆ. ವರದಿಯನ್ನು ತಿದ್ದಬಹುದು ಎಂದು ವರದಿಯಲ್ಲೇ ಹೇಳಲಾಗಿದೆ. ಆದ್ದರಿಂದ, ರೈತರಿಗೆ, ಬೆಳೆಗಾರರಿಗೆ, ನಾಗರಿಕರಿಗೆ ಅನುಕೂಲವಾಗುವಂತೆ ವರದಿಯನ್ನು ಪರಿಶೀಲಿಸಬೇಕು ಎಂದು ಡಾ. ಮೋಹನ್ ತಿಳಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಮುಖ್ಯಮಂತ್ರಿ ಹಾಗೂ ಸ್ಪೀಕರರ್​ಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದೂ ಮಾಹಿತಿ ನೀಡಿದರು.

ಬಳಿಕ, ಪರಿಸರವಾದಿ ಪ್ರವೀಣ್ ಭಾರ್ಗವ್ ಮಾತನಾಡಿದರು. ಕಸ್ತೂರಿ ರಂಗನ್ ವರದಿಯ ಬಗ್ಗೆ ತುಂಬಾ ಭ್ರಮೆ, ತಪ್ಪು ಮಾಹಿತಿ, ಪಟ್ಟಭದ್ರ ಹಿತಾಸಕ್ತಿಗಳಿವೆ. ಈ ಅಧಿಸೂಚನೆಯನ್ನು ಯಾರೂ ಸರಿಯಾಗಿ ಓದಿಲ್ಲ. ಯಾವ ರೈತರ ಜಮೀನು ಕೂಡ ಕಬಳಿಸಲು ಸರ್ಕಾರಕ್ಕೆ ಹಕ್ಕಿಲ್ಲ. ರೈತರು ಭಯಪಡಬೇಕಾಗಿಲ್ಲ. ಪ್ಲಾಂಟೇಷನ್, ಕೃಷಿಗೆ ಧಕ್ಕೆ ಆಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಪಶ್ಚಿಮ ಘಟ್ಟದ ಶೇ. 35ರಷ್ಟು ಪ್ರದೇಶ ಮಾತ್ರ ಸೂಕ್ಷ್ಮ ವಲಯವಾಗಿ ಸೂಸಿಸಲಾಗಿದೆ. ಮೀಸಲು ಅರಣ್ಯ, ರಕ್ಷಿತಾರಣ್ಯ, ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನಗಳು ಮತ್ತು ಅವುಗಳ ಆಸುಪಾಸಿನ ಜಾಗಗಳು ಮಾತ್ರ ಈ ವರದಿಯಡಿ ಬರುತ್ತವೆ. ಕೆಂಪು, ಕೇಸರಿ, ಹಸಿರು ವಲಯಗಳಾಗಿ ವಿಂಗಡಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹಸಿರು ವಲಯದಲ್ಲಿ ಎಲ್ಲಾ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಖಾಸಗಿ ಜಮೀನಿನ ಮಾಲಿಕತ್ವದ ಬಗ್ಗೆ ವರದಿಯಲ್ಲಿ ಪ್ರಸ್ತಾವನೆ ಮಾಡಲಾಗಿಲ್ಲ. ಉಷ್ಣ ಸ್ಥಾವರ, ವಿದ್ಯುತ್ ಸ್ಥಾವರ, ಡ್ಯಾಂ, ರಾಷ್ಟ್ರೀಯ ಹೆದ್ದಾರಿಗಳು ಆಗುವುದಿಲ್ಲ ಎಂದು ಯೋಜನೆಯ ಬಗ್ಗೆ ವಿವರಣೆ ನೀಡಿ, ರೈತಬಂಧುಗಳೂ ಇದನ್ನು ತಿಳಿದುಕೊಳ್ಳುವಂತೆ ಮನವಿ ಮಾಡಿದರು. ಸ್ಥಾವರ, ಡ್ಯಾಂ, ರಾಷ್ಟ್ರೀಯ ಹೆದ್ದಾರಿಗಳಲ್ಲೂ ರೈತರು ಭೂಮಿ ಕಳೆದುಕೊಳ್ಳುತ್ತಾರೆ. ಕಸ್ತೂರಿ ರಂಗನ್ ವರದಿ ಅದನ್ನು ವಿರೋಧಿಸುತ್ತದೆ. ಹಾಗಾಗಿ ಒಂದರ್ಥದಲ್ಲಿ ಈ ಯೋಜನೆ ರೈತರಿಗೆ ರಕ್ಷಾಕವಚವೇ ಆಗಿರುತ್ತದೆ ಎಂದು ತಿಳಿಸಿದರು.

ಈ ಎಲ್ಲಾ ಮಾಹಿತಿಗಳು ಪರಿಣಾಮಕಾರಿಯಾಗಿ ಜನರನ್ನು ತಲುಪಿಲ್ಲ. ಹಾಸನದಲ್ಲಿ ಗ್ರಾಮಸ್ಥರನ್ನು ಕೂರಿಸಿಕೊಂಡು ಸಭೆ ಆಗಿಲ್ಲ. ವರದಿ ಇಂಗ್ಲಿಷ್​ನಲ್ಲಿದೆ, ಕನ್ನಡಾನುವಾದ ಆಗಿಲ್ಲ. ಕೇರಳದಲ್ಲಿ ಗ್ರಾಮಮುಖಂಡರನ್ನು ಇಟ್ಟುಕೊಂಡು ಸಭೆ ನಡೆಸಲಾಗಿದೆ. ವರದಿಯ ಮಲಯಾಳಂ ಪ್ರತಿ ಹಂಚಲಾಗಿದೆ. ಇಲ್ಲಿ ಈ ರೀತಿಯ ಯಾವುದೇ ಕೆಲಸಗಳು ಆಗದಿರುವುದರಿಂದ ಜನರಿಗೆ ಇನ್ನೂ ಆತಂಕ, ಗೊಂದಲಗಳಿವೆ ಎಂದು ಡಾ. ಮೋಹನ್ ತಿಳಿಸಿದರು.

ಸರ್ಕಾರ ಜನರಿಗೆ ಮನವರಿಕೆ ಮಾಡುವ ಕಾರ್ಯಕ್ಕೆ ಒತ್ತು ಕೊಡಬೇಕು. ಅದು ಸರಿ. ಆದರೆ, ಜನರು ತಪ್ಪು ಮಾಹಿತಿಗಳನ್ನು ನಂಬಬಾರದು. ಎಲ್ಲಾ ತರಹದ ಕೃಷಿ ಚಟುವಟಿಕೆಗಳು ಈವರೆಗೆ ನಡೆದಂತೆ ನಡೆಯುತ್ತದೆ. ಕಸ್ತೂರಿ ರಂಗನ್ ವರದಿಯಲ್ಲಿ ಸಾವಯುವ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದಿದ್ದಾರೆ ಹೊರತು, ರಾಸಾಯನಿಕ ಗೊಬ್ಬರ ಬಳಸಬಾರದು ಎಂದಿಲ್ಲ ಎಂದು ಪರಿಸರವಾದಿ ಪ್ರವೀಣ್ ಭಾರ್ಗವ್ ಮಾತನಾಡಿದರು.

1.50 ಲಕ್ಷ ಚದರಡಿಗಿಂತ ಹೆಚ್ಚು ಜಾಗ ಬಳಕೆಯಾಗುವ ಕಾಮಗಾರಿಗಳಿಗೆ ವರದಿಯಲ್ಲಿ ನಿಬಂಧನೆಗಳಿವೆ. ಸಣ್ಣ ಮನೆ, ಕೆಲಸಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಸಣ್ಣ ರಸ್ತೆ, ವಿದ್ಯುತ್ ವ್ಯವಸ್ಥೆಗೆ ಕೂಡ ಕಡಿವಾಣ ಹಾಕಲಾಗುವುದಿಲ್ಲ. ಜೆಸಿಬಿಯಂತಹ ಯಂತ್ರೋಪಕರಣಗಳ ಬಳಕೆಗೆ ಅಡಚಣೆ ಇದೆ ಎಂಬ ಮಾಹಿತಿ ಇದೆ. ಇವುಗಳ ಬಳಕೆಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಪ್ರವೀಣ್ ಭಾರ್ಗವ್ ತಿಳಿಸಿದರು.

ಬಫರ್ ಝೋನ್ ಒಳಗಡೆ ಕೃಷಿ ತೋಟ ಬಂದರೆ, ಕೃಷಿ ಮಾಡುವುದು ಹೇಗೆ? ನಿಬಂಧನೆಗಳು ಬಂದರೆ ಕಾರ್ಯಚಟುವಟಿಕೆಗೆ ತೊಂದರೆ ಉಂಟಾಗಬಹುದು. ಇದರಿಂದ ರೈತರು ತಾವಾಗೇ ತಮ್ಮ ಕೃಷಿ ಪ್ರದೇಶ ಬಿಡುವ ಪರಿಸ್ಥಿತಿ ಬರಬಹುದು ಎಂದು ಮೋಹನ್ ಅಭಿಪ್ರಾಯಪಟ್ಟರು.

ಕೊನೆಯಲ್ಲಿ ನ್ಯಾಯವಾದಿ ಬಿ.ಆರ್. ದೀಪಕ್ ಮಾತನಾಡಿ, ಮಾಧವ್ ಗಾಡ್ಗೀಳ್, ಕಸ್ತೂರಿ ರಂಗನ್ ಎರಡು ವರದಿ ತಂಡದಲ್ಲೂ ಇರುವ ಸದಸ್ಯರು ಜೀವಶಾಸ್ತ್ರ ವಿಭಾಗದವರು, ಆರ್ಥಿಕ ತಜ್ಞರು ಇತ್ಯಾದಿ ಆಗಿದ್ದಾರೆ. ಕೃಷಿ ವಿಭಾಗವನ್ನು ಪ್ರತಿನಿಧಿಸುವ ಯಾವುದೇ ಸದಸ್ಯ ಈ ವರದಿಗಳ ತಂಡದಲ್ಲಿ ಇದ್ದಂತಿಲ್ಲ ಎಂದು ಹೇಳಿದರು.

ಬುಡಕಟ್ಟು ಜನಾಂಗದ ಹಕ್ಕು ರಕ್ಷಣೆಯ 2005ರ ಕಾನೂನು ಉಲ್ಲೇಖಿಸಿ ಬಿ.ಆರ್. ದೀಪಕ್ ಮಾತನಾಡಿದರು. ಕಸ್ತೂರಿ ರಂಗನ್ ಅಥವಾ ಮಾಧವ ಗಾಡ್ಗೀಳ್ ಯೋಜನೆಯಿಂದ ಕೇವಲ ರೈತರಿಗೆ ತೊಂದರೆ ಅಲ್ಲ. ಬುಡಕಟ್ಟು ಜನರಿಗೂ ಈ ಯೋಜನೆ ಹೊಡೆತ ಕೊಡಲಿದೆ ಎಂದು ಅಭಿಪ್ರಾಯಪಟ್ಟರು. ಬುಡಕಟ್ಟು ಜನರ ಮೂಲಭೂತ ಹಕ್ಕುಗಳಿಗೆ ಈ ಯೋಜನೆಯಿಂದ ತೊಡಕುಂಟಾಗಬಹುದು ಎಂದರು. ಆದರೆ, ಪಶ್ಚಿಮ ಘಟ್ಟದ ಯಾವುದೇ ಮೂಲೆಯಿಂದ ಬುಡಕಟ್ಟು ಜನಾಂಗದ ಜನರನ್ನು ಒಕ್ಕಲು ಎಬ್ಬಿಸುವಂತಿಲ್ಲ. ಜೇನುಕುರುಬರಂಥ ಬುಡಕಟ್ಟು ಸಮುದಾಯಗಳಿಗೆ ನೇರವಾಗಿ ರಾಷ್ಟ್ರಪತಿಯಿಂದ, ಸಂವಿಧಾನದಿಂದ ರಕ್ಷಣೆ ಇದೆ ಎಂದು ಮಾಹಿತಿ ನೀಡಿದರು.

ಅರಣ್ಯ ಪ್ರದೇಶಗಳನ್ನು, ಜೈವಿಕ ಸಂಪತ್ತನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹಾಗಾಗಿ, ಇಲ್ಲಿ ಸರ್ಕಾರ ಮಾಲೀಕನಂತೆ ವರ್ತಿಸಲು ಆಗುವುದಿಲ್ಲ. ಅದು ಕೇವಲ ಪಾಲಕನ ಸ್ಥಾನದಲ್ಲಿ ಇರುತ್ತದೆ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ನಿರ್ಲಕ್ಷಿಸಿ ದೊಡ್ಡ ಅಪಾಯವನ್ನೇ ಆಹ್ವಾನಿಸಿತಾ ಕರ್ನಾಟಕ.. ಒಳಸುಳಿ ಏನು?

Published On - 9:28 pm, Mon, 21 December 20