Kajari Teej 2022: ಪತಿಯ ದೀರ್ಘಾಯುಷ್ಯಕ್ಕಾಗಿ ವಿವಾಹಿತ ಮಹಿಳೆಯರು ಆಚರಿಸುವ ವಿಶೇಷ ಹಬ್ಬ ‘ಕಜರಿ ತೀಜ್’ ವಿಶೇಷತೆ, ಆಚರಣೆ ಹೇಗೆ? ಇಲ್ಲಿದೆ ಮಾಹಿತಿ
ಪತಿಯ ದೀರ್ಘಾಯುಷ್ಯಕ್ಕಾಗಿ ಪತ್ನಿಯು ದಿನವಿಡೀ ನಿರ್ಜಲ ಉಪವಾಸವನ್ನು ಆಚರಿಸುವ ಹಬ್ಬವೇ ಕಜರಿ ತೀಜ್. ಈ ದಿನದಂದು ವಿವಾಹಿತ ಮಹಿಳೆಯರು ಕೆಂಪು ಬಣ್ಣದ ಬಟ್ಟೆ ಮತ್ತು ಹಸಿರು ಬಳೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಪತಿಯ ದೀರ್ಘಾಯುಷ್ಯಕ್ಕಾಗಿ ಪತ್ನಿಯು ದಿನವಿಡೀ ನಿರ್ಜಲ ಉಪವಾಸವನ್ನು ಆಚರಿಸುವ ಮತ್ತು ಸಂಜೆ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವ ಮೂಲಕ ಉಪವಾಸವನ್ನು ಮುರಿಯುವ ವಿಶೇಷ ಹಬ್ಬವೇ ಕಜರಿ ತೀಜ್. ಹಿಂದೂ ಕ್ಯಾಲೆಂಡರ್ ಪ್ರಕಾರ ಕಜರಿ ತೀಜ್ ಅನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 14 ರಂದು ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನವು ವಿವಾಹಿತ ಮಹಿಳೆಯರಿಗೆ ವಿಶೇಷವಾಗಿದೆ. ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸಮಾಡಿ ಶಿವಪಾರ್ವತಿ ಪೂಜೆ ಮಾಡುವ ಈ ಆಚರಣೆಯನ್ನು ಅವಿವಾಹಿತ ಹುಡುಗಿಯರು ಕೂಡ ಆಚರಿಸಬಹುದು. ಈ ಆಚರಣೆಯನ್ನು ಮಾಡುವುದರಿಂದ ಶಿವ ಮತ್ತು ಮಾತೆ ಪಾರ್ವತಿಯು ಸಂತೋಷಪಡುತ್ತಾರೆ ಮತ್ತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ.
ಇತಿಹಾಸ
ದಂತಕಥೆಯ ಪ್ರಕಾರ, ಮಾತೆ ಪಾರ್ವತಿಯು ಶಿವನನ್ನು ಮದುವೆಯಾಗಲು ಬಯಸಿದ್ದಳು. ತನ್ನ ಈ ಆಸೆಯನ್ನು ನನಸಾಗಿಸಲು ಬದ್ಧಳಾಗಿದ್ದಳು. ಹತಾಶೆ ಮತ್ತು ಭಕ್ತಿಯನ್ನು ನೋಡಿದ ಶಿವನು ಪಾರ್ವತಿಯನ್ನು ತನ್ನ ದೈವಿಕ ಸ್ತ್ರೀ ಶಕ್ತಿಯಾಗಿ ತನ್ನ ಸಮರ್ಪಣೆಯನ್ನು ಸಾಬೀತುಪಡಿಸಲು ಕೇಳಿಕೊಂಡನು. ಭಗವಾನ್ ಮಹಾದೇವನ ಮೇಲಿನ ಅಪಾರ ಮತ್ತು ಶುದ್ಧ ಪ್ರೀತಿಯನ್ನು ಸಾಬೀತುಪಡಿಸಲು ಪಾರ್ವತಿ ದೇವಿಯು 108 ವರ್ಷಗಳ ಕಾಲ ತಪಸ್ಸು ಮಾಡಿದಳು, ನಂತರ ಶಿವನು ಅವಳನ್ನು ತನ್ನ ನಿಷ್ಠಾವಂತ ಹೆಂಡತಿಯಾಗಿ ಸ್ವೀಕರಿಸಿದನು ಎಂದು ಹೇಳಲಾಗುತ್ತದೆ. ಶವಿ ಪಾರ್ವತಿಯ ವಿವಾಹವು ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ನಡೆಯಿತು ಎಂದು ನಂಬಲಾಗಿದೆ. ಕಾಲಾನಂತರ ಈ ದಿನವನ್ನು ಕಜರಿ ತೀಜ್ ಎಂದು ಆಚರಿಸುತ್ತಾ ಬರಲಾಯಿತು. ಈ ದಿನ ಶಿವ ಮತ್ತು ಪಾರ್ವತಿಯನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಹಬ್ಬದ ಮಹತ್ವ
ಕಜರಿ ತೀಜ್ ರಾಜಸ್ಥಾನದ ಪ್ರಮುಖ ಹಬ್ಬವಾಗಿದ್ದು, ಮಹಾರಾಷ್ಟ್ರ, ಉತ್ತರಪ್ರದೇಶದಲ್ಲೂ ಆಚರಣೆಯಲ್ಲಿದೆ. ಕಜರಿ ತೀಜ್ ದಿನದಂದು ವಿಶೇಷವಾಗಿ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ನಿರ್ಜಲ ಉಪವಾಸವನ್ನು ಆಚರಿಸಬೇಕು. ಈ ದಿನದಂದು ಉಪವಾಸ ಮತ್ತು ಆಚರಣೆಗಳೊಂದಿಗೆ ಶಿವನನ್ನು ಆರಾಧಿಸುವುದರಿಂದ ಪತಿಗೆ ದೀರ್ಘಾಯುಷ್ಯದ ಜೊತೆಗೆ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಈ ದಿನ ಮಹಿಳೆಯರು ಉಪವಾಸವನ್ನು ಆಚರಿಸುತ್ತಾರೆ. ಈ ಉಪವಾಸವು ಕರ್ವಾ ಚೌತ್ ಅನ್ನು ಹೋಲುತ್ತದೆ, ಆದರೆ ಈ ಉಪವಾಸವನ್ನು ಹಣ್ಣುಗಳ ಸೇವನೆ ಅಥವಾ ಹಾಲಿನೊಂದಿಗೆ ಮುರಿಯಲಾಗುತ್ತದೆ. ಮಹಿಳೆಯರು ಇಡೀ ದಿನ ಜಾನಪದ ಹಾಡುಗಳನ್ನು ಹಾಡುತ್ತಾರೆ, ಸಾಂಪ್ರದಾಯಿಕ ರಾಜಸ್ಥಾನಿ ಸಂಗೀತಕ್ಕೆ ನೃತ್ಯ ಮಾಡುತ್ತಾರೆ ಮತ್ತು ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಈ ಹಬ್ಬವು ಚಂದ್ರ ಮತ್ತು ಬೇವಿನ ಮರದ ಆರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದು ರಾಜಸ್ಥಾನಿಗಳಿಗೆ ಪ್ರಕೃತಿ ಮತ್ತು ಆಕಾಶಕಾಯಗಳ ಮೇಲಿನ ಭಕ್ತಿಯನ್ನು ತೋರಿಸುತ್ತದೆ.
ಈ ದಿನದಂದು ಮಹಿಳೆಯರು ತಮ್ಮ ಧರಿಸುವ ಉಡುಪುಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅಂದು ಕೆಂಪು ಉಡುಪುಗಳನ್ನು ಧರಿಸುತ್ತಾರೆ, ವಿಶೇಷವಾಗಿ ಮದುವೆಯ ಬಟ್ಟೆ ಅಥವಾ ಒಧ್ನಿ, ಭಾರವಾದ ಆಭರಣಗಳು, ಸಿಂಧೂರ, ಗೋರಂಟಿ ಅಥವಾ ಮೆಹೆಂದಿ, ಮೇಕ್ಅಪ್ ಮಾಡುತ್ತಾರೆ.
ವಿಸ್ತೃತವಾದ ಪೂಜೆಯ ನಂತರ, ಪಾರ್ವತಿ ದೇವಿ ಮತ್ತು ಭಗವಾನ್ ಶಿವನ ಕಥೆಗಳನ್ನು ಆಲಿಸಿ ಬೇವಿನ ಮರ ಮತ್ತು ಚಂದ್ರನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ, ಮಹಿಳೆಯರು ಹಾಲಿನಿಂದ ತಮ್ಮ ಉಪವಾಸವನ್ನು ಮುಕ್ತಾಯಗೊಳಿಸುತ್ತಾರೆ. ಈ ಆಚರಣೆಯು ವೈವಾಹಿಕ ಜೀವನಕ್ಕೆ ಬಹಳಷ್ಟು ಸಂತೋಷವನ್ನು ತರುತ್ತದೆ.
ವೃತ ಯಾವಾಗ ಆಚರಿಸಬೇಕು?
ಭಾದ್ರಪದ ಮಾಸದ ಕೃಷ್ಣ ಪಕ್ಷದ ತಿಥಿ ತೃತೀಯಾ ತಿಥಿ ಆಗಸ್ಟ್ 13 ರಂದು ಮಧ್ಯಾಹ್ನ 12:53 ರಿಂದ ಪ್ರಾರಂಭವಾಗುತ್ತದೆ, ಅದು ಮರುದಿನ ಆಗಸ್ಟ್ 14 ರಂದು ರಾತ್ರಿ 10.35ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದಯ ತಿಥಿಯ ಪ್ರಕಾರ ಆಗಸ್ಟ್ 14 ರಂದು ಕಜರಿ ತೀಜ್ ವ್ರತವನ್ನು ಆಚರಿಸಲಾಗುತ್ತದೆ.
ಕೆಂಪು ಬಟ್ಟೆ, ಹಸಿರು ಬಳೆ ಮಂಗಳಕರ
ಹಬ್ಬದ ದಿನದಂದು ಮಹಿಳೆಯರು ಕೆಂಪು ಬಣ್ಣದ ಬಟ್ಟೆ ಮತ್ತು ಹಸಿರು ಬಳೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮಹಿಳೆಯರು ತಮ್ಮ ಹೆತ್ತವರು ಕಳುಹಿಸಿದ ಬಟ್ಟೆ, ಮೇಕಪ್ ಧರಿಸಬೇಕು. ಈ ದಿನ ಪಾರ್ವತಿ ಮಾತೆಯ ಕಥೆಯನ್ನು ಕೇಳುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
Published On - 10:27 am, Fri, 12 August 22