ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಥೆಗಾರ ಡಾ. ಆನಂದ ಋಗ್ವೇದಿ

‘ಭೂಮಿಯ ಆಳ ಪದರದಲ್ಲಿ ಬಹು ವರ್ಷ ಹುದುಗಿಯೂ ಮೇಲೆ ಬಂದು ತನ್ನ ಅಲ್ಪಾಯುಷ್ಯದಲ್ಲಿ ತನ್ನ ದನಿಯನ್ನು ದಾಖಲಿಸುವ ಸಿಕಾಡ ಜಿ. ಕೆ. ರವೀಂದ್ರಕುಮಾರ ಕನ್ನಡಕ್ಕೆ ಕೊಟ್ಟ ವಿಶಿಷ್ಟ ರೂಪಕ. ಬದುಕಿನ ಎಲ್ಲಾ ಆಯಾಮಗಳು, ಸ್ಥಿತಿ ಗತಿಗಳ ಮೌಲಿಕತೆಯನ್ನು ಕವಿ ತರ್ಕದಿಂದ ಆರಂಭಿಸಿ ತಾತ್ವೀಕರಿಸುವ ಈ ಕಾವ್ಯ ವಿಧಾನ ಕನ್ನಡಕ್ಕೆ ಹೊಸದು.’ ಎನ್ನುತ್ತಾರೆ ಕಥೆಗಾರ ಡಾ. ಆನಂದ ಋಗ್ವೇದಿ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಥೆಗಾರ ಡಾ. ಆನಂದ ಋಗ್ವೇದಿ
ಕಥೆಗಾರ ಡಾ. ಆನಂದ ಋಗ್ವೇದಿ
Follow us
ಶ್ರೀದೇವಿ ಕಳಸದ
|

Updated on:Dec 30, 2020 | 11:31 AM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಲೇಖಕರು, ಕವಿಗಳು, ಕಲಾವಿದರು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ ಡಾ. ಆನಂದ ಋಗ್ವೇದಿ ಅವರ ಆಯ್ಕೆಗಳು ಇಲ್ಲಿವೆ.

ಕೃ: ಇದಕ್ಕೊಂದು ಪದವ ತೊಡಿಸು (ಕವಿತೆಗಳ ಸಮಗ್ರ ಸಂಕಲನ) ಲೇ: ಜಿ ಕೆ ರವೀಂದ್ರ ಕುಮಾರ್ ಪ್ರ: ಪರಸ್ಪರ ಪ್ರಕಾಶನ

ನಮ್ಮ ಸಂದರ್ಭದ ಪ್ರತಿಭಾವಂತ ಮತ್ತು ಮಹತ್ವದ ಕವಿಯಾಗಿದ್ದ ದಿ. ಜಿ ಕೆ ರವೀಂದ್ರ ಕುಮಾರ ಬರೆದ ಕವನ ಸಂಕಲನಗಳಾದ: ಸಿಕಾಡ, ಪ್ಯಾಜಿಯಾ, ಕದವಿಲ್ಲದ ಊರಲ್ಲಿ, ಒಂದು ನೂಲಿನ ಜಾಡು, ಮತ್ತು ‘ಮರವನಪ್ಪಿದ ಬಳ್ಳಿ’ ಯ ಒಟ್ಟು ಎರಡು ನೂರಾ ಮೂವತ್ತೊಂದು ಕವಿತೆಗಳ ಸಮಗ್ರ ಸಂಕಲನ.

ಸ್ವತಃ ಕವಿಗಳೇ ತಮ್ಮ ಸಂಕಲನದ ಕವಿತೆಗಳನ್ನು ಅವುಗಳ ಭಾವ, ಭಾಷೆ ಮತ್ತು ವಿನ್ಯಾಸಗಳಿಗೆ ಅನುಗುಣವಾಗಿ ವಿಂಗಡಿಸಿದ್ದಾರೆ. ಕವಿಯ ಸಮಯ, ಚರಿತ ಸಮಯ, ಗೀತ ಸಮಯ, ನೀಳ್ಗವಿತಾ ಸಮಯ, ಸರಪಳಿ ಸಮಯ, ಅಂತಃಪುರ ಸಮಯ, ಸಂಗೀತ ಸಮಯ, ಮಹಾಯಾನದ ಸಮಯ ಎಂಬುದಾಗಿ ವಿಭಾಗಿಸಿರುವುದು ಕಾವ್ಯಾಭ್ಯಾಸಿಗಳಿಗೆ ಉಪಯುಕ್ತವಾದುದು.

ಸಮಗ್ರ ಕವಿತೆಗಳನ್ನು ಸಂಕಲನಗಳ ಅನುಕ್ರಮಣಿಕೆಯಲ್ಲಿ ಜೋಡಿಸುವ ರೂಢಿಗತ ಕ್ರಮಕ್ಕಿಂತ ಭಿನ್ನವಾದ ಈ ವಿಂಗಡಣೆ ಕವಿಯ ಬೆಳವಣಿಗೆಯ ಕ್ರಮಕ್ಕಿಂತ ಭಿನ್ನವಾದ ಗಮನಿಸುವಿಕೆಯ ಪರಿಕ್ರಮವನ್ನು ಪ್ರೇರೇಪಿಸುವಂತಿದೆ. ಭೂಮಿಯ ಆಳ ಪದರದಲ್ಲಿ ಬಹು ವರ್ಷ ಹುದುಗಿಯೂ ಮೇಲೆ ಬಂದು ತನ್ನ ಅಲ್ಪಾಯುಷ್ಯದಲ್ಲಿ ತನ್ನ ದನಿಯನ್ನು ದಾಖಲಿಸುವ ಸಿಕಾಡ ರವೀಂದ್ರ ಕುಮಾರ ಕನ್ನಡಕ್ಕೆ ಕೊಟ್ಟ ವಿಶಿಷ್ಟ ರೂಪಕ. ಬದುಕಿನ ಎಲ್ಲಾ ಆಯಾಮಗಳು, ಸ್ಥಿತಿ ಗತಿಗಳ ಮೌಲಿಕತೆಯನ್ನು ಕವಿ ತರ್ಕದಿಂದ ಆರಂಭಿಸಿ ತಾತ್ವೀಕರಿಸುವ ಈ ಕಾವ್ಯ ವಿಧಾನ ಕನ್ನಡಕ್ಕೆ ಹೊಸದು.

ಕೃ: ವಿಹಂಗಮ (ಸುಬ್ರಾಯ ಚೊಕ್ಕಾಡಿ ಈ ಹೊತ್ತು) ಸಂ : ಮಾಲಿನಿ ಗುರು ಪ್ರಸನ್ನ, ಹರೀಶ್ ಕೇರ, ಸಿಂಧು ರಾವ್. ಟಿ. ಪ್ರ: ರೂಪ ಪ್ರಕಾಶನ

ಭಾವಗೀತೆಯ ಲಾಲಿತ್ಯ ಮತ್ತು ಮಾಧುರ್ಯದ ಧ್ವನಿಯಿಂದಾಗಿ ಜನಪ್ರಿಯಗೊಂಡು, ಅದರಿಂದಲೆ ಪರಿಚಯವಾದ ಕವಿಗಳ ಇನ್ನಿತರ ಕವಿತೆ, ಸಾಹಿತ್ಯ, ವ್ಯಕ್ತಿತ್ವಗಳು ಅನಾವರಣಗೊಳ್ಳದೇ ಮರೆಗೆ ಸಂದುದೇ ಹೆಚ್ಚು. ಹಾಗೆ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಮೌಲಿಕವಾದ ಕೊಡುಗೆಯನ್ನೇ ನೀಡಿಯೂ ಹೆಚ್ಚು ಚರ್ಚಿತರಾಗದೇ ಉಳಿದ ಕವಿ ಸುಬ್ರಾಯ ಚೊಕ್ಕಾಡಿಯವರನ್ನು ಅವರ ಎಂಭತ್ತನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಕಾಲದ ಪರಿಪ್ರೇಕ್ಷದಲ್ಲಿ ‘ಈ ಹೊತ್ತು’ ಅವರನ್ನು ಪರಿಚಯಿಸುವ, ಆ ಪ್ರತಿಭಾ ಸಂಪನ್ನರ  ಸಾಹಿತ್ಯಿಕ ಕೊಡುಗೆಯನ್ನು ಅನಾವರಣಗೊಳಿಸುವ ಈ ಕೃತಿ ಅಭಿನಂದನಾ ಗ್ರಂಥಗಳಲ್ಲಿಯೇ ಬಹು ವಿಶಿಷ್ಟವಾದುದು.

ಕವಿಯ ಒಡನಾಟ, ಕವಿಯ ವ್ಯಕ್ತಿತ್ವದ ಸಮೀಪ ದರ್ಶನ, ಕವಿಯ ಕಾವ್ಯ ದೃಷ್ಟಿ, ಕವಿಯ ಲೋಕ ದೃಷ್ಟಿ, ಕವಿ ಬರೆದ ಸಮಗ್ರ ಸಾಹಿತ್ಯದ ಸಮಾಲೋಕನ, ಜೊತೆಗೇ ಕವಿಯ ಕಾವ್ಯಾನುಸಂಧಾನದ ಬಗೆಗಿನ ಸಂವಾದ ಮತ್ತು ನಿರಚನ ಈ ಪುಸ್ತಕದ ವಿಶೇಷ ಭಾಗ. ಸಂಪಾದಕ ತ್ರಯರ ಸಾಹಿತ್ಯಿಕ ಮನಸ್ಥಿತಿ, ಅವರೆಲ್ಲರ ನಿಷ್ಠುರ ಸಾಹಿತ್ಯ ಪ್ರೇಮ ಮತ್ತು ಕವಿಯೆಡೆಗಿನ ಅತೀವ ಅಕ್ಕರೆಯೇ ಇಲ್ಲಿ ಪುಸ್ತಕವಾಗಿ ಒಡಮೂಡಿದೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಕಥೆಗಾರ ಶ್ರೀಧರ ಬಳಗಾರ; ’ಕನ್ನಡ ಸಾಹಿತ್ಯ ಸಂಗಾತಿ‘ ಮತ್ತು ‘ಕೆಂಪು ಮುಡಿಯ ಹೆಣ್ಣು’

Published On - 5:35 pm, Tue, 29 December 20