Adhika Jyeshtha Masa 2026: 3 ವರ್ಷಕ್ಕೊಮ್ಮೆ ಬರುವ ‘ಅಧಿಕ ಜ್ಯೇಷ್ಠ ಮಾಸ’ ರಹಸ್ಯವೇನು? ಈ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು?
'ಅಧಿಕ ಜ್ಯೇಷ್ಠ ಮಾಸ' ಹಿಂದೂ ಪಂಚಾಂಗದಲ್ಲಿ ವಿಶೇಷ ಮಹತ್ವ ಹೊಂದಿದೆ. ಮೂರು ವರ್ಷಗಳಿಗೊಮ್ಮೆ ಬರುವ ಈ ತಿಂಗಳು ವಿಷ್ಣುವಿಗೆ ಪ್ರಿಯವಾದ 'ಪುರುಷೋತ್ತಮ ಮಾಸ' ಎಂದೂ ಖ್ಯಾತವಾಗಿದೆ. ಈ ಅವಧಿಯು ಪಾಪ ಪರಿಹಾರ, ದಾನ ಧರ್ಮ, ವಿಷ್ಣು ಆರಾಧನೆಗೆ ಉತ್ತಮ. ಆದರೆ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಇದರ ನಿಖರ ದಿನಾಂಕ ಮತ್ತು ಆಚರಣೆಗಳ ಮಾಹಿತಿ ಇಲ್ಲಿದೆ.

ಹಿಂದೂ ಪಂಚಾಂಗದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ‘ಅಧಿಕ ಮಾಸ’ಕ್ಕೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಈ ಬಾರಿ 2026ರಲ್ಲಿ ಜ್ಯೇಷ್ಠ ತಿಂಗಳಿನಲ್ಲಿ ಈ ಹೆಚ್ಚುವರಿ ಮಾಸ ಬಂದಿರುವುದರಿಂದ, ಇದನ್ನು ‘ಅಧಿಕ ಜ್ಯೇಷ್ಠ ಮಾಸ’ ಎಂದು ಕರೆಯಲಾಗುತ್ತದೆ. ಭಗವಾನ್ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಪ್ರಕೃತಿ ನಮಗೆ ಕರುಣಿಸಿರುವ ಈ ಪವಿತ್ರ ಮಾಸದ ಹಿನ್ನೆಲೆ, ಮಹತ್ವ ಮತ್ತು ಈ ವರ್ಷದ ನಿಖರ ದಿನಾಂಕಗಳ ವಿವರ ಇಲ್ಲಿದೆ.
ಅಧಿಕ ಮಾಸ ಎಂದರೇನು? ಇದು ಹೇಗೆ ಸಂಭವಿಸುತ್ತದೆ?
ಸಂಪ್ರದಾಯದಲ್ಲಿ ಸೌರಮಾನ (ಸೂರ್ಯನ ಚಲನೆ) ಮತ್ತು ಚಾಂದ್ರಮಾನ (ಚಂದ್ರನ ಚಲನೆ) ಎಂಬ ಎರಡು ಪ್ರಮುಖ ಕ್ಯಾಲೆಂಡರ್‌ಗಳಿವೆ. ಚಾಂದ್ರಮಾನ ವರ್ಷದಲ್ಲಿ 354 ದಿನಗಳಿದ್ದರೆ, ಸೌರಮಾನ ವರ್ಷದಲ್ಲಿ 365 ದಿನಗಳಿರುತ್ತವೆ. ಇವೆರಡರ ನಡುವೆ ಪ್ರತಿ ವರ್ಷ ಸುಮಾರು 11 ದಿನಗಳ ವ್ಯತ್ಯಾಸ ಉಂಟಾಗುತ್ತದೆ.
ಈ ವ್ಯತ್ಯಾಸವು ಮೂರು ವರ್ಷಗಳಲ್ಲಿ ಅಂದಾಜು ಒಂದು ತಿಂಗಳಾಗುತ್ತದೆ (33 ದಿನಗಳು). ಈ ಕಾಲಗಣನೆಯನ್ನು ಸರಿದೂಗಿಸಲು ಪಂಚಾಂಗದಲ್ಲಿ ಪ್ರತಿ 32 ತಿಂಗಳು, 16 ದಿನಗಳಿಗೊಮ್ಮೆ ಒಂದು ಹೆಚ್ಚುವರಿ ತಿಂಗಳನ್ನು ಸೇರಿಸಲಾಗುತ್ತದೆ. ಇದನ್ನೇ ‘ಅಧಿಕ ಮಾಸ’ ಎನ್ನಲಾಗುತ್ತದೆ.
‘ಪುರುಷೋತ್ತಮ ಮಾಸ’ ಎಂಬ ಹೆಸರು ಬಂದಿದ್ದು ಹೇಗೆ?
ಪುರಾಣಗಳ ಪ್ರಕಾರ, ಪ್ರತಿಯೊಂದು ತಿಂಗಳಿಗೂ ಒಬ್ಬೊಬ್ಬ ದೇವತೆಗಳು ಅಧಿಪತಿಯಾಗಿರುತ್ತಾರೆ. ಆದರೆ ಅಧಿಕ ಮಾಸಕ್ಕೆ ಯಾವುದೇ ಅಧಿಪತಿ ಇರಲಿಲ್ಲ. ಇದರಿಂದ ನೊಂದ ಈ ಮಾಸವು ತನ್ನನ್ನು ಎಲ್ಲರೂ ‘ಮಲ ಮಾಸ’ (ಶುದ್ಧವಲ್ಲದ ತಿಂಗಳು) ಎಂದು ಕರೆಯುತ್ತಾರೆಂದು ವಿಷ್ಣುವಿನ ಬಳಿ ಮೊರೆ ಇಟ್ಟಿತು. ಆಗ ಭಗವಾನ್ ವಿಷ್ಣುವು ತಾನೇ ಈ ತಿಂಗಳ ಅಧಿಪತಿಯಾಗುವುದಾಗಿ ಅನುಗ್ರಹಿಸಿ, ತನ್ನದೇ ಆದ ‘ಪುರುಷೋತ್ತಮ’ ಎಂಬ ಶ್ರೇಷ್ಠ ಹೆಸರನ್ನು ಈ ಮಾಸಕ್ಕೆ ನೀಡಿದನು. ಅಂದಿನಿಂದ ಇದು ‘ಪುರುಷೋತ್ತಮ ಮಾಸ’ ಎಂದೇ ಪ್ರಸಿದ್ಧಿಯಾಯಿತು.
2026ರ ಅಧಿಕ ಜ್ಯೇಷ್ಠ ಮಾಸದ ನಿಖರ ದಿನಾಂಕಗಳು:
- 2026ರ ಸಾಲಿನಲ್ಲಿ ಒಟ್ಟು ಎರಡು ಜ್ಯೇಷ್ಠ ಮಾಸಗಳು ಬರುತ್ತಿದ್ದು, ಜ್ಯೇಷ್ಠದ ಅವಧಿಯು ಒಟ್ಟು 60 ದಿನಗಳಿರುತ್ತದೆ.
- ಅಧಿಕ ಜ್ಯೇಷ್ಠ ಮಾಸ (ಹೆಚ್ಚುವರಿ ತಿಂಗಳು): 2026ರ ಮೇ 17 (ಭಾನುವಾರ) ರಿಂದ ಜೂನ್ 15 (ಸೋಮವಾರ).
- ನಿಜ ಜ್ಯೇಷ್ಠ ಮಾಸ (ಸಾಮಾನ್ಯ ತಿಂಗಳು): 2026ರ ಜೂನ್ 16 ರಿಂದ ಜುಲೈ 13.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಈ ಅವಧಿಯಲ್ಲಿ ಏನು ಮಾಡಬೇಕು?
ಅಧಿಕ ಮಾಸವು ಭಗವದ್ಚಿಂತನೆ ಮತ್ತು ಪಾಪ ಪರಿಹಾರಕ್ಕೆ ಮೀಸಲಾದ ಸಮಯ. ಈ ತಿಂಗಳಲ್ಲಿ ಮಾಡುವ ಸತ್ಕರ್ಮಗಳಿಗೆ ಅಕ್ಷಯ ಪುಣ್ಯ ಲಭಿಸುತ್ತದೆ. ಬ್ರಾಹ್ಮಣರಿಗೆ ಅಥವಾ ಬಡವರಿಗೆ ಅನ್ನದಾನ, ದೀಪ ದಾನ ಮತ್ತು 33 ರಸಗೊಲ್ಲೆ ಅಥವಾ ಅಪೂಪಗಳನ್ನು (ಅನಪತ್ಯ/ಬಾಗಿನ) ದಾನ ಮಾಡುವುದು ವಿಶೇಷ. ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರದ ಜಪ, ವಿಷ್ಣು ಸಹಸ್ರನಾಮ ಪಠಣ ಹಾಗೂ ಶ್ರೀಮದ್ಭಾಗವತ ಪುರಾಣದ ಶ್ರವಣ ಅತ್ಯಂತ ಮಂಗಳಕರ. ಈ 30 ದಿನಗಳ ಕಾಲ ಸಾಧ್ಯವಾದರೆ ಉಪವಾಸ ವ್ರತ ಮಾಡುವುದು ಅಥವಾ ದಿನಕ್ಕೆ ಒಂದು ಹೊತ್ತು ಮಾತ್ರ ಸಾತ್ವಿಕ ಆಹಾರ ಸೇವಿಸಿ ಬ್ರಹ್ಮಚರ್ಯ ಪಾಲಿಸುವುದು ಶ್ರೇಷ್ಠ.
ಏನು ಮಾಡಬಾರದು?
ಅಧಿಕ ಮಾಸದಲ್ಲಿ ಲೌಕಿಕ ಸುಖಕ್ಕೆ ಸಂಬಂಧಿಸಿದ ಕರ್ಮಗಳು ಹಾಗೂ ಹೊಸ ಆರಂಭಗಳನ್ನು ನಿಷೇಧಿಸಲಾಗಿದೆ. ಹಾಗಾಗಿ ಈ ಕೆಳಗಿನ ಕಾರ್ಯಗಳಿಗೆ ಮುಹೂರ್ತ ಇರುವುದಿಲ್ಲ:
- ವಿವಾಹ (ಮದುವೆ) ಮಹೋತ್ಸವಗಳು
- ಉಪನಯನ (ಮುಂಜಿ)
- ಗೃಹಪ್ರವೇಶ ಮತ್ತು ಭೂಮಿ ಪೂಜೆ
- ಹೊಸ ವ್ಯಾಪಾರ, ಉದ್ಯೋಗ ಅಥವಾ ಉದ್ಯಮದ ಆರಂಭ
- ನಾಮಕರಣ ಮುಂತಾದ ಶುಭ ಸಮಾರಂಭಗಳು
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

