ಯಾರಾದರೂ ನಿಮ್ಮನ್ನು ಪದೇ ಪದೇ ಅವಮಾನಿಸುತ್ತಿದ್ದರೆ ಏನು ಮಾಡಬೇಕು? ಭಗವದ್ಗೀತೆಯ ಈ ಶ್ಲೋಕ ತಿಳಿಸುತ್ತದೆ ಸರಿಯಾದ ಮಾರ್ಗ!
ಕೆಲಸದ ಸ್ಥಳದಲ್ಲಿ ಅಥವಾ ವೈಯಕ್ತಿಕ ಸಂಬಂಧಗಳಲ್ಲಿ ಪದೇ ಪದೇ ಅವಮಾನ ಎದುರಾದಾಗ ಏನು ಮಾಡಬೇಕು? ಶ್ರೀಮದ್ಭಗವದ್ಗೀತೆ ಇದಕ್ಕೆ ಪರಿಹಾರ ನೀಡುತ್ತದೆ. ಶ್ರೀಕೃಷ್ಣನು ಕೋಪದ ದುಷ್ಪರಿಣಾಮಗಳನ್ನು ವಿವರಿಸುತ್ತಾ, ಕ್ರೋಧವು ಬುದ್ಧಿಯನ್ನು ನಾಶಪಡಿಸುತ್ತದೆ ಎನ್ನುತ್ತಾನೆ. ಅಂತಹ ಸಂದರ್ಭಗಳಲ್ಲಿ ತಕ್ಷಣ ಕೋಪಗೊಳ್ಳದೆ, ಶಾಂತವಾಗಿ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಈ ಬೋಧನೆ ನೆರವಾಗುತ್ತದೆ.

ಜೀವನದಲ್ಲಿ ಹಲವು ಬಾರಿ ಸರಿಯಾದ ಮತ್ತು ತಪ್ಪಿನ ನಡುವಿನ ವ್ಯತ್ಯಾಸವನ್ನು ಗುರುತಿಸಲು ನಮಗೆ ಕಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಲಸದ ಸ್ಥಳದಲ್ಲಿ (Workplace) ಅಥವಾ ವೈಯಕ್ತಿಕ ಸಂಬಂಧಗಳಲ್ಲಿ ಯಾರಾದರೂ ಪದೇ ಪದೇ ನಮ್ಮನ್ನು ಅವಮಾನಿಸುವಂತಹ ಪರಿಸ್ಥಿತಿಗಳು ಎದುರಾದಾಗ, ನಾವು ಏನು ಮಾಡಬೇಕು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂದು ತೋಚದಂತಾಗುತ್ತದೆ. ಅಂತಹ ಸಂದರ್ಭಗಳಲ್ಲಿ ತಕ್ಷಣವೇ ತೀವ್ರವಾಗಿ ಕೋಪಗೊಳ್ಳುವುದು ಸ್ವಾಭಾವಿಕ. ಆದರೆ, ಅಂತಹ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸರಿಯಾದ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಶ್ರೀಮದ್ಭಗವದ್ಗೀತೆ ಸುಂದರವಾಗಿ ಬೋಧಿಸುತ್ತದೆ.
ಭಗವದ್ಗೀತೆಯ ಶ್ಲೋಕ ಮತ್ತು ಕೋಪದ ದುಷ್ಪರಿಣಾಮಗಳು:
ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯದ 63 ನೇ ಶ್ಲೋಕದಲ್ಲಿ ಶ್ರೀಕೃಷ್ಣನು ಕೋಪವು ಮನುಷ್ಯನ ಆಲೋಚನಾ ಶಕ್ತಿಯನ್ನು ಹೇಗೆ ಸಂಪೂರ್ಣವಾಗಿ ಪ್ರಭಾವಿಸುತ್ತದೆ ಎಂಬುದನ್ನು ವಿವರಿಸಿದ್ದಾನೆ. ಯಾರಾದರೂ ನಿಮ್ಮನ್ನು ಅವಮಾನಿಸಿದಾಗ ಕೋಪ ಬರುವುದು ಸಹಜವಾದರೂ, ಆ ಪರಿಸ್ಥಿತಿಯ ಮೇಲೆ ಹತೋಟಿ ಸಾಧಿಸುವುದು ಅತ್ಯಂತ ಮುಖ್ಯ.
ಗೀತೆಯಲ್ಲಿ ಬರುವ ಆ ಪ್ರಸಿದ್ಧ ಶ್ಲೋಕ ಹೀಗಿದೆ:
ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮೃತಿವಿಭ್ರಮಃ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ॥
ಈ ಶ್ಲೋಕದ ಪ್ರಕಾರ, ಕೋಪದಿಂದ ನಮ್ಮ ವಿವೇಚನಾ ಶಕ್ತಿಯಲ್ಲಿ ಗೊಂದಲ ಉಂಟಾಗುತ್ತದೆ. ಈ ಗೊಂದಲದಿಂದ ಸ್ಮರಣಶಕ್ತಿ ಬಾಧಿತವಾಗಿ, ಅಂತಿಮವಾಗಿ ಬುದ್ಧಿಯ ನಾಶವಾಗುತ್ತದೆ ಮತ್ತು ಬುದ್ಧಿನಾಶದಿಂದ ಮನುಷ್ಯನ ಪತನವೇ ಸಂಭವಿಸುತ್ತದೆ.
ಶ್ರೀಕೃಷ್ಣನ ಬೋಧನೆಯಿಂದ ಕಲಿಯಬೇಕಾದ ಪಾಠ:
ಈ ಶ್ಲೋಕದ ಮೂಲಕ ಶ್ರೀಕೃಷ್ಣನು ನೀಡುುವ ಸಂದೇಶವೆಂದರೆ, ಕೋಪದಾವೇಶದಲ್ಲಿ ಮನುಷ್ಯನಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅಂತರವೇ ತಿಳಿಯುವುದಿಲ್ಲ. ಆದ್ದರಿಂದ, ಯಾರಾದರೂ ನಮ್ಮನ್ನು ಅವಮಾನಿಸಿದಾಗ ತಕ್ಷಣವೇ ಭಾವನೆಗಳಿಗೆ ಒಳಗಾಗಿ ಪ್ರತಿಕ್ರಿಯೆ ನೀಡುವುದಕ್ಕಿಂತ, ಶಾಂತ ಮನಸ್ಸಿನಿಂದ ಪರಿಸ್ಥಿತಿಯನ್ನು ವಿಶ್ಲೇಷಿಸುವುದು ಅತಿಮುಖ್ಯ. ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ನಮಗೇ ಹಾನಿಕಾರಕವಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು.
ಇದನ್ನೂ ಓದಿ: ನವರಾತ್ರಿಯ 9 ದಿನಗಳ ಮಹತ್ವವೇನು? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ತಿಳಿಯಿರಿ
ಪದೇ ಪದೇ ಅವಮಾನ ಎದುರಾದಾಗ ಏನು ಮಾಡಬೇಕು?
ಯಾರಾದರೂ ನಿಮಗೆ ಪದೇ ಪದೇ ಅವಮಾನ ಮಾಡುತ್ತಿದ್ದರೆ, ತಕ್ಷಣವೇ ಪ್ರತಿಕ್ರಿಯಿಸಿ ತಿರುಗೇಟು ನೀಡುವ ಬದಲು ಆ ಬಗ್ಗೆ ಶಾಂತವಾಗಿ ಚಿಂತಿಸಬೇಕು. ಮೊದಲು ನಿಮ್ಮನ್ನು ನೀವು ಶಾಂತಗೊಳಿಸಿಕೊಂಡು, ಆ ಸಂದರ್ಭದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ನೀಡುವುದು ಸೂಕ್ತ ಎಂಬುದನ್ನು ವಿವೇಚನೆಯಿಂದ ನಿರ್ಧರಿಸಿ. ಶಾಂತವಾಗಿರುವುದರ ಅರ್ಥ ಪ್ರತಿಯೊಂದು ಅವಮಾನವನ್ನೂ ಮೌನವಾಗಿ ಸಹಿಸಿಕೊಳ್ಳಬೇಕು ಎಂದಲ್ಲ. ಯಾರಾದರೂ ಉದ್ದೇಶಪೂರ್ವಕವಾಗಿ ಪದೇ ಪದೇ ನಿಮ್ಮೊಂದಿಗೆ ತಪ್ಪಾಗಿ ವರ್ತಿಸುತ್ತಿದ್ದರೆ, ಅವರ ಆ ವರ್ತನೆ ನಿಮಗೆ ಸ್ವೀಕಾರಾರ್ಹವಲ್ಲ ಎಂಬುದನ್ನು ಸ್ಪಷ್ಟ ಶಬ್ದಗಳಲ್ಲಿ ತಿಳಿಸಬೇಕು.
ಒಮ್ಮೆ ಎಚ್ಚರಿಕೆ ನೀಡಿದ ಅಥವಾ ಸ್ಪಷ್ಟಪಡಿಸಿದ ನಂತರವೂ ಆ ವ್ಯಕ್ತಿ ತನ್ನ ತಂಟೆಯನ್ನು ಬಿಡದೆ ಪದೇ ಪದೇ ಅವಮಾನಿಸಿದರೆ, ಅಂತಹವರಿಂದ ಸೂಕ್ತ ಅಂತರ ಕಾಯ್ದುಕೊಳ್ಳುವುದು ಅಥವಾ ಅವರೊಂದಿಗೆ ಸಂವಹನವನ್ನು ಸೀಮಿತಗೊಳಿಸುವುದು ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




