Sign In

By signing in or creating an account, you agree with Associated Broadcasting Company's Terms & Conditions and Privacy Policy.

Bheemana Amavasya: ಭೀಮನ ಅಮಾವಾಸ್ಯೆಯ ಹಿಂದಿದೆ ರೋಚಕ ಇತಿಹಾಸ; ಇದನ್ನು ಕೊಡೆ ಅಮಾವಾಸ್ಯೆ ಎಂದು ಕರೆಯುವುದೇಕೆ?

Bheemana Amavasya History | ಉತ್ತರ ಭಾರತದಲ್ಲಿ ಇದೇ ಮಾದರಿಯಲ್ಲಿ ಕರ್ವಾ ಚೌತ್ ಹಬ್ಬವನ್ನು ಆಚರಣೆ ಮಾಡುತ್ತಾರೆ. ಹಾಗಾದರೆ, ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುವ ಭೀಮನ ಅಮಾವಾಸ್ಯೆಯ ಹಿನ್ನೆಲೆಯೇನು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

Bheemana Amavasya: ಭೀಮನ ಅಮಾವಾಸ್ಯೆಯ ಹಿಂದಿದೆ ರೋಚಕ ಇತಿಹಾಸ; ಇದನ್ನು ಕೊಡೆ ಅಮಾವಾಸ್ಯೆ ಎಂದು ಕರೆಯುವುದೇಕೆ?
ಭೀಮನ ಅಮಾವಾಸ್ಯೆ ಪೂಜೆ
Follow us
TV9 Web
| Updated By: Skanda

Updated on: Aug 08, 2021 | 6:30 AM

ಇನ್ನೇನು ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಇಂದು ಭೀಮನ ಅಮಾವಾಸ್ಯೆ. ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಭಾಗದಲ್ಲಿ ಆಷಾಡ ಅಮಾವಾಸ್ಯೆ ಅಥವಾ ಭೀಮನ ಅಮಾವಾಸ್ಯೆ ವ್ರತವನ್ನು ಬಹಳ ಅದ್ದೂರಿಯಾಗಿಯೇ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಇದೇ ಮಾದರಿಯಲ್ಲಿ ಕರ್ವಾ ಚೌತ್ ಹಬ್ಬವನ್ನು ಆಚರಣೆ ಮಾಡುತ್ತಾರೆ. ಹಾಗಾದರೆ, ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುವ ಭೀಮನ ಅಮಾವಾಸ್ಯೆಯ ಹಿನ್ನೆಲೆಯೇನು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಈ ಹಬ್ಬದ ಆಚರಣೆಯ ಬಗ್ಗೆ ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ಬಹಳ ವರ್ಷಗಳ ಹಿಂದೆ ರಾಜನೊಬ್ಬ ತನ್ನ ಮಗನಿಗೆ ವಿಜೃಂಭಣೆಯಿಂದ ಮದುವೆ ಮಾಡಬೇಕೆಂದು ನಿರ್ಧರಿಸಿದ್ದ. ಆದರೆ, ಆ ರಾಜನ ಮಗ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರಿಂದ ಆ ರಾಜ ಸಾವನ್ನಪ್ಪಿದ ಮಗನಿಗೇ ಮದುವೆ ಮಾಡಲು ನಿರ್ಧರಿಸಿದ. ಯಾವ ಯುವತಿ ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾಳೋ ಆಕೆಗೆ ಅಪಾರ ಹಣ, ಸಂಪತ್ತನ್ನು ಕೊಡುವುದಾಗಿ ಘೋಷಣೆ ಮಾಡಿದ.

ಆತನ ಘೋಷಣೆ ಕೇಳಿ ಒಬ್ಬ ಬಡ ಬ್ರಾಹ್ಮಣ ಆ ರಾಜನ ಮಗನ ಶವದ ಜೊತೆಗೆ ತನ್ನ ಮಗಳ ಮದುವೆ ಮಾಡಲು ಮುಂದೆ ಬಂದ. ಇದರಿಂದ ಖುಷಿಯಾದ ರಾಜ ಬಹಳ ವೈಭವದಿಂದಲೇ ಮದುವೆ ಮಾಡಿದ. ಆ ಮದುವೆಯಾದ ದಿನ ಅಮಾವಾಸ್ಯೆಯಾಗಿತ್ತು. ವೈಭವದಿಂದ ಮದುವೆ ನಡೆದ ನಂತರ ಮಗನ ಶವವನ್ನು ಸುಡಲು ರಾಜ ಭಾಗೀರಥಿ ನದಿಯ ತೀರಕ್ಕೆ ಶವವನ್ನು ತೆಗೆದುಕೊಂಡು ಹೋದ. ಆಗ ಜೋರಾಗಿ ಕುಂಭದ್ರೋಣ ಮಳೆ ಸುರಿಯಲಾರಂಭಿಸಿತು. ಇದರಿಂದ ಅಂತ್ಯಕ್ರಿಯೆಗೆ ಸೇರಿದ್ದ ಜನರು ಓಡಿಹೋದರು.

ಅದು ಭೀಮನ ಅಮಾವಾಸ್ಯೆಯ ದಿನ ಎಂದು ಆ ಮದುಮಗಳಿಗೆ ನೆನಪಾಯಿತು. ಆ ದಿನ ತನ್ನ ತಾಯಿ ಪ್ರತಿವರ್ಷ ಗಂಡನ ಪೂಜೆ ಮಾಡುವುದು ನೆನಪಾಗಿ ತಾನು ಕೂಡ ತನ್ನ ಗಂಡನ ಶವದೊಂದಿಗೆ ವ್ರತ ಮಾಡಬೇಕೆಂದು ನಿರ್ಧರಿಸಿದಳು. ಮಳೆ ನಿಂತ ಕೂಡಲೆ ನದಿಯಲ್ಲಿ ಸ್ನಾನ ಮಾಡಿ ಎರಡು ಮಣ್ಣಿನ ಹಣತೆಯನ್ನು ಮಾಡಿ, ಮರದ ಬೇರನ್ನೇ ಬತ್ತಿಯಾಗಿ ಮಾಡಿಕೊಂಡು ದೀಪ ಹಚ್ಚಿ ಪೂಜೆ ಮಾಡಿದಳು. ಆಕೆಯ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ಶಿವ-ಪಾರ್ವತಿ ಏನು ವರ ಬೇಕೆಂದು ಆ ಯುವತಿಯನ್ನು ಕೇಳಿದರು. ಆಗ ನನ್ನ ಗಂಡನನ್ನು ಬದುಕಿಸಿಕೊಡಿ ಎಂದು ಆ ಯುವತಿ ಬೇಡಿಕೊಂಡಳು. ಅದರಂತೆ ಶಿವ- ಪಾರ್ವತಿ ಆ ರಾಜಕುಮಾರನನ್ನು ಬದುಕಿಸಿದರು ಎಂಬ ಕತೆಯಿದೆ.

ಮುಖ್ಯವಾಗಿ ನವವಿವಾಹಿತರಿಗೆ ಈ ಭೀಮನ ಅಮಾವಾಸ್ಯೆ ಬಹಳ ವಿಶೇಷವಾದುದು. ಮಲೆನಾಡಿನ ಭಾಗದಲ್ಲಿ ಇದನ್ನು ಕೊಡೆ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಮದುವೆಯಾದ ಬಳಿಕ ತನ್ನ ತವರುಮನೆಯಲ್ಲಿ ಮೊದಲ ಬಾರಿಗೆ ಮಾಡುವ ಭೀಮನ ಅಮಾವಾಸ್ಯೆ ಅಥವಾ ಕೊಡೆ ಅಮಾವಾಸ್ಯೆ ವ್ರತ ಬಹಳ ವಿಶೇಷವಾದುದು. ಮಲೆನಾಡಿನ ಭಾಗದಲ್ಲಿ ಈ ದಿನ ಮಾವನ ಮನೆಯವರು ತಮ್ಮ ಅಳಿಯನಿಗೆ ಕೊಡೆ ಅಥವಾ ಛತ್ರಿಯನ್ನು ಉಡುಗೊರೆಯಾಗಿ ನೀಡುವ ಪದ್ಧತಿಯಿದೆ. ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸ್ಯೆಯೆಂದು, ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ, ಕರ್ಕಾಟಕ ಅಮಾವಾಸ್ಯೆ ಎಂದು ಕರೆಯುತ್ತಾರೆ.

ಇದನ್ನೂ ಓದಿ: ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?

Holige Habba: ಕೊರೊನಾ ತೊಲಗಲಿ ಎಂದು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ ಆಚರಣೆ, ಮನೆ ಮನೆಗಳಲ್ಲಿ ಹೋಳಿಗೆ ಘಮ

(Bheemana Amavasya 2021 Festival Celebrated on New Moon Day of Ashada Month Interesting History, Story)