ಪ್ರತಿ ವ್ಯಕ್ತಿಗೂ 5 ಜನ ತಂದೆಯ ಸ್ಥಾನದಲ್ಲಿರುತ್ತಾರೆ ಎನ್ನುತ್ತಾನೆ ಚಾಣಕ್ಯ; ಅವರು ಯಾರ್ಯಾರು?
Chanakya Nithi: ಪ್ರತಿ ವ್ಯಕ್ತಿಗೆ 5 ಜನ ತಂದೆಯ ಸ್ಥಾನದಲ್ಲಿರುತ್ತಾರೆ. ಅವರನ್ನು ಗೌರವದಿಂದ ಕಾಣಬೇಕು ಎನ್ನುತ್ತಾನೆ ಚಾಣಕ್ಯ. ತಂದೆಯ ಸ್ಥಾನದಲ್ಲಿರುವ 5 ಜನರು ಯಾರು? ಇಲ್ಲಿದೆ ಮಾಹಿತಿ.
ಒಂದು ಮಗು ತಂದೆಯ ಮೇಲ್ವಿಚಾರಣೆಯಲ್ಲಿ ಹೂವಿನಂತೆ ಅರಳುತ್ತದೆ. ಒಬ್ಬ ತಂದೆ ತನ್ನ ಮಗುವಿನ ಜೀವನವನ್ನು ಉತ್ತಮಗೊಳಿಸಲು ತನ್ನ ಇಡೀ ಜೀವನವನ್ನು ತ್ಯಾಗ ಮಾಡುತ್ತಾನೆ. ಆದರೆ ಆಚಾರ್ಯ ಚಾಣಕ್ಯನ ಪ್ರಕಾರ, ತಂದೆಯ ಸ್ಥಾನದಲ್ಲಿ ಮತ್ತೂ 4 ಜನರಿರುತ್ತಾರೆ ಎಂದಿದ್ದಾನೆ. ಜನ್ಮ ನೀಡುವ ತಂದೆಯೊಂದಿಗೆ ಇತರ 4 ಜನರನ್ನು ಸಹ ತಂದೆಗೆ ಸಮಾನವೆಂದು ಪರಿಗಣಿಸಲಾಗಿದೆ ಎನ್ನುತ್ತಾನೆ ಚಾಣಕ್ಯ. ಈ ರೀತಿಯಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ 5 ಪಿತೃಗಳನ್ನು ಹೊಂದಿರುತ್ತಾನೆ. ಅವರೆಲ್ಲರೂ ಮಗುವಿನ ಕಲ್ಯಾಣಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ, ಆದ್ದರಿಂದ ಅವರನ್ನು ಎಂದಿಗೂ ಅವಮಾನಿಸಬಾರದು. ಆಚಾರ್ಯ ಚಾಣಕ್ಯ ಯಾರನ್ನು ತಂದೆ ಎಂದು ಕರೆದಿದ್ದಾನೆಂದು ತಿಳಿಯಲು ಮುಂದೆ ಓದಿ.
1. ಜನ್ಮ ನೀಡುವವನು: ಚಾಣಕ್ಯ ಹೇಳುವಂತೆ ಪ್ರತಿಯೊಬ್ಬರೂ ಇರಲು ಕಾರಣ, ಅವರನ್ನು ಜಗತ್ತಿಗೆ ಕರೆತಂದವನು- ತಂದೆ. ಆತ ದೇವರಂತೆ. ನಿಮ್ಮ ಜೀವನವನ್ನು ರೂಪಿಸಲು ತನ್ನ ಸರ್ವಸ್ವವನ್ನೂ ತಂದೆ ಅರ್ಪಿಸುತ್ತಾನೆ. ಆದ್ದರಿಂದ ಅವರನ್ನು ಯಾವಾಗಲೂ ಗೌರವಿಸಬೇಕು ಎನ್ನುತ್ತಾನೆ ಚಾಣಕ್ಯ.
2. ಆಚರಣೆಗಳನ್ನು ಹೇಳಿಕೊಡುವ ವ್ಯಕ್ತಿ: ಜನ್ಮ ನೀಡುವವರಲ್ಲದೆ, ನಿಮಗೆ ಉತ್ತಮ ಮೌಲ್ಯಗಳನ್ನು ನೀಡುವ, ಒಳ್ಳೆಯ ವಿಷಯಗಳನ್ನು ಕಲಿಸುವ ಮನೆಯ ದೊಡ್ಡ ವ್ಯಕ್ತಿಯೂ ಕೂಡ ತಂದೆಗೆ ಸಮಾನ. ಆ ವ್ಯಕ್ತಿಗೂ ತಂದೆಯಷ್ಟೇ ಗೌರವವನ್ನು ನೀಡಬೇಕು. ಏಕೆಂದರೆ ಆತ ವ್ಯಕ್ತಿತ್ವವನ್ನು ನಿರ್ಮಿಸುವಲ್ಲಿ ಸಕಾರಾತ್ಮಕ ಪಾತ್ರ ವಹಿಸುತ್ತಾನೆ. ಮತ್ತು ಜೀವನದ ಮೌಲ್ಯಗಳನ್ನು ಕಲಿಸಿ, ಆದರ್ಶ ವ್ಯಕ್ತಿಯಾಗಲು ಸಹಾಯ ಮಾಡುತ್ತಾನೆ.
3. ಬೋಧನಾ ಗುರು: ಗುರುಗಳು ಭವಿಷ್ಯವನ್ನು ನಿರ್ಮಿಸುವವರು ಎಂದು ಹೇಳಲಾಗುತ್ತದೆ. ಗುರುವಿನಿಂದ ಶಿಕ್ಷಣ ಪಡೆದ ನಂತರ, ಒಬ್ಬ ವ್ಯಕ್ತಿಯು ಸರಿಯಾದ ಹಾದಿಯಲ್ಲಿ ಸಾಗುತ್ತಾನೆ. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಆದ್ದರಿಂದ, ಅಂತಹ ಗುರುವನ್ನು ಯಾವಾಗಲೂ ತಂದೆಯಂತೆ ಗೌರವಿಸಬೇಕು ಎಂದು ಚಾಣಕ್ಯ ಹೇಳುತ್ತಾನೆ.
4. ಆಹಾರ ನೀಡುವವರು: ಹಸಿದ ಹೊಟ್ಟೆಯಲ್ಲಿ ಜಗತ್ತಿನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಹಸಿದಿರುವಾಗ ನಿಮಗೆ ಆಹಾರವನ್ನು ನೀಡುವ, ನಿಮಗೆ ಗಳಿಕೆಯ ಸಾಧನವನ್ನು ಒದಗಿಸುವ ವ್ಯಕ್ತಿಯನ್ನು ತಂದೆಯಂತೆ ಗೌರವಿಸಬೇಕು ಎಂದು ನೀತಿಯನ್ನು ತಿಳಿಸಿದ್ದಾನೆ ಚಾಣಕ್ಯ.
5. ಕಷ್ಟದ ಸಮಯದಲ್ಲಿ ಸಹಾಯ ಮಾಡುವವನು: ಒಳ್ಳೆಯ ಸಮಯದಲ್ಲಿ ನಿಮ್ಮನ್ನು ಬೆಂಬಲಿಸಲು ನಿಮ್ಮ ಬಳಿ ಸಾವಿರಾರು ಜನರಿರುತ್ತಾರೆ. ಆದರೆ ಕಷ್ಟದ ಸಮಯದಲ್ಲಿ ಯಾರೂ ಇಲ್ಲ. ಕೆಟ್ಟ ಸಮಯದಲ್ಲಿ ನಿಮಗೆ ಬೆಂಬಲವಾಗಿ ನಿಂತ ವ್ಯಕ್ತಿ ಕೂಡ ತಂದೆಯ ಗೌರವವನ್ನು ಪಡೆಯಬೇಕು ಏಕೆಂದರೆ ತಂದೆ ಯಾವುದೇ ಪರಿಸ್ಥಿತಿಯಲ್ಲಿ ತನ್ನ ಮಗುವಿನ ಕೈ ಬಿಡುವುದಿಲ್ಲ ಎನ್ನುತ್ತಾನೆ ಚಾಣಕ್ಯ.
ಇದನ್ನೂ ಓದಿ:
Chanakya Niti: ಸಂತೋಷದ ಜೀವನಕ್ಕೆ ಚಾಣಕ್ಯ ನೀತಿಯ ಈ ಅಂಶಗಳನ್ನು ನೆನಪಿನಲ್ಲಿಡಿ