ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಮಾಡುವ ವಿಧಾನ ತಿಳಿದಿದೆಯಾ? ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಎಂಬುದನ್ನು ತಿಳಿದುಕೊಳ್ಳಿ!
ಕರ್ಜಿಕಾಯಿಯಲ್ಲಿ ಸೇರಿಸುವ ಒಂದೊಂದು ಪದಾರ್ಥವೂ ಆರೋಗ್ಯಕ್ಕೆ ಅನೇಕ ಪೋಷಕಾಂಶಗಳನ್ನು ನೀಡುತ್ತದೆ. ಕರ್ಜಿಕಾಯಿಯಲ್ಲಿ ಗೋದಿ, ತೆಂಗಿನ ತುರಿ, ಶೇಂಗಾ, ಬೆಲ್ಲ ಸೇರಿ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು ದೇಹಕ್ಕೆ ಪೂರಕ ಆಹಾರವಾಗಿದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ತರಹೇವಾರಿ ತಿಂಡಿಗಳನ್ನು ಇಷ್ಟಪಡುವ ಗಣಪತಿಗೆ ಪ್ರತಿ ಮನೆಯಲ್ಲಿಯೂ ಮೋದಕ, ಕರ್ಜಿಕಾಯಿಯನ್ನು ತಪ್ಪದೆ ಮಾಡಿಯೇ ಮಾಡುತ್ತಾರೆ. ಆದರೆ ಇವು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಕರ್ಜಿಕಾಯಿಯಲ್ಲಿ ಸೇರಿಸುವ ಒಂದೊಂದು ಪದಾರ್ಥವೂ ಆರೋಗ್ಯಕ್ಕೆ ಅನೇಕ ಪೋಷಕಾಂಶಗಳನ್ನು ನೀಡುತ್ತದೆ. ಕರ್ಜಿಕಾಯಿಯಲ್ಲಿ ಗೋದಿ, ತೆಂಗಿನ ತುರಿ, ಶೇಂಗಾ, ಬೆಲ್ಲ ಸೇರಿ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು ದೇಹಕ್ಕೆ ಪೂರಕ ಆಹಾರವಾಗಿದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಜೊತೆಗೆ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ ಹಾಗೂ ಹಲವಾರು ವಿಟಮಿನ್ ಮತ್ತು ಖನಿಜಗಳ ಮೂಲವಾಗಿದೆ. ಉದಾಹರಣೆಗೆ ತಾಮ್ರ, ರಂಜಕ, ಸೆಲೆನಿಯಮ್, ಮೆಗ್ನೀಸಿಯಮ್, ಫೋಲೇಟ್ ಅಂಶವನ್ನು ಹೊಂದಿರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಹಾಗಾದರೆ ಕರ್ಜಿಕಾಯಿ ಹೇಗೆ ಮಾಡಲಾಗುತ್ತದೆ ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಎಂಬುದನ್ನು ತಿಳಿಯಿರಿ.
ಕರ್ಜಿಕಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು:
- ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು – ಅರ್ಧ ಕೆಜಿ
- ಉಪ್ಪು – ಚಿಟಿಕೆ
- ಎಣ್ಣೆ – ಕರಿಯಲು
- ಕೊಬ್ಬರಿ – 1/2 ಕೆಜಿ
- ಸಕ್ಕರೆ ಅಥವಾ ಬೆಲ್ಲ – 1/4 ಕೆಜಿ
- ಏಲಕ್ಕಿ ಪುಡಿ – ಸ್ವಲ್ಪ
- ಎಳ್ಳು – ಸ್ವಲ್ಪ
ಕರ್ಜಿಕಾಯಿ ಮಾಡುವ ವಿಧಾನ:
- ಮೊದಲನೆಯದಾಗಿ, ಮೈದಾ ಹಿತ್ತು ಅಥವಾ ಗೋಧಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಚಿಟಿಕೆ ಉಪ್ಪು ಹಾಕಿ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಡಿ.
- ಕೊಬ್ಬರಿಯನ್ನು ತುರಿದು ಅದಕ್ಕೆ ಪುಡಿ ಮಾಡಿದ ಸಕ್ಕರೆ ಅಥವಾ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಚೆನ್ನಾಗಿ ಕಲಸಿಟ್ಟುಕೊಳ್ಳಿ.
- ಬಳಿಕ ಮೊತ್ತೊಂದು ಕಡೆಗೆ ಚೆನ್ನಾಗಿ ನಾದಿದ ಮೈದಾ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ ಪೂರಿ ಸೈಜ್‍ನಲ್ಲಿ ಲಟ್ಟಿಸಿ.
- ಹೀಗೆ ಲಟ್ಟಿಸಿದ ಪೂರಿ ಸೈಜ್‍ನ ಒಳಗೆ ಕೊಬ್ಬರಿ ಮಿಶ್ರಿತ ಚೂರ್ಣವನ್ನು ತುಂಬಿ ಮಧ್ಯಕ್ಕೆ ಮಡಚಿ ಸೀಲ್ ಮಾಡಿ.
- ಈ ರೀತಿ ಎಲ್ಲವನ್ನೂ ಮಾಡಿಟ್ಟುಕೊಂಡ ನಂತರ ಕಾದ ಎಣ್ಣೆಗೆ ಹಾಕಿ ಗೋಲ್ಡನ್ ಬಣ್ಣಕ್ಕೆ ಬರುವವರೆಗೂ ಕರಿಯಿರಿ.
- ಕರಿದ ಬಳಿಕ ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ಹಾಕಿ. ಗರಿ ಗರಿಯಾದ ಕರ್ಜಿಕಾಯಿಯನ್ನು ಹಲವು ದಿನಗಳ ಕಾಲ ಸ್ಟೋರ್ ಮಾಡಿ ತಿನ್ನಬಹುದು.
ಇದನ್ನೂ ಓದಿ: ಗಣೇಶನ ನೈವೇದ್ಯಕ್ಕಾಗಿ ತಯಾರಿಸಿ ಸಾಂಪ್ರದಾಯಿಕ ಶೈಲಿಯ ಮೋದಕ
ಕರ್ಜಿಕಾಯಿ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ?
- ಕರ್ಜಿಕಾಯಿಯಲ್ಲಿ ಬಳಸುವ ಬೆಲ್ಲವು ನಿಮ್ಮ ಆಯಾಸ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಅಲ್ಲದೆ ಕಬ್ಬಿಣಾಂಶಗಳಿಂದ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಸಹ ಒಳಗೊಂಡಿದೆ.
- ತೆಂಗಿನಕಾಯಿಯಲ್ಲಿಯೂ ಅನೇಕ ಪೋಷಕಾಂಶಗಳಿದ್ದು ಚರ್ಮ, ಮೂಳೆಗಳು ಮತ್ತು ಸ್ನಾಯುರಜ್ಜುಗಳ ಸಂಯೋಜಕ ಅಂಗಾಂಶಗಳನ್ನು ಬಲಪಡಿಸುತ್ತದೆ. ಅಲ್ಲದೆ ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ. ಇದರ ಜೊತೆಗೆ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಎಳ್ಳು ದೇಹವನ್ನು ತಂಪಾಗಿರಿಸುತ್ತದೆ. ಜೊತೆಗೆ ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ, ಇವೆರಡೂ ನಿಮ್ಮ ಮೂಳೆಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಹೀಗಾಗಿ ನೀವು ಕರ್ಜಿಕಾಯಿಯಲ್ಲಿ ಎಳ್ಳನ್ನು ಸೇರಿಸುವುದು ಒಳ್ಳೆಯದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:20 pm, Sun, 17 September 23