Kalasha Sthapana: ಯಾವುದೇ ಶುಭ ಕಾರ್ಯಗಳಲ್ಲಿ ಕಲಶ ಸ್ಥಾಪನೆ ಯಾಕೆ ಮುಖ್ಯ ಗೊತ್ತಾ? ಆಧ್ಯಾತ್ಮಿಕ ಮಹತ್ವ ಇಲ್ಲಿದೆ
ಸನಾತನ ಧರ್ಮದಲ್ಲಿ ಕಲಶ ಸ್ಥಾಪನೆ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಗತ್ಯ. ಇದು ಶುದ್ಧತೆ, ಸಮೃದ್ಧಿ ಮತ್ತು ದೈವಿಕ ಶಕ್ತಿಯ ಸಂಕೇತವಾಗಿದೆ. ಕಲಶವು ತ್ರಿಮೂರ್ತಿಗಳ ನೆಲೆ, ಪವಿತ್ರ ನದಿಗಳ ಸಂಗಮ ಎಂದೂ ನಂಬಲಾಗಿದೆ. ಕಲಶ ಸ್ಥಾಪನೆಯಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡಿ, ನಕಾರಾತ್ಮಕತೆ ದೂರಾಗಿ, ಶಾಂತಿ, ಸಂತೋಷ ಹಾಗೂ ದೈವಿಕ ಕೃಪೆ ಪ್ರಾಪ್ತವಾಗುತ್ತದೆ. ಇದರ ಪ್ರತಿಯೊಂದು ಅಂಶಕ್ಕೂ ಆಧ್ಯಾತ್ಮಿಕ ಮಹತ್ವವಿದೆ.

ಸನಾತನ ಧರ್ಮದಲ್ಲಿ ಯಾವುದೇ ಪೂಜೆ, ಗೃಹಪ್ರವೇಶ, ಮದುವೆ, ಸತ್ಯನಾರಾಯಣ ವ್ರತ ಅಥವಾ ನವರಾತ್ರಿಯಂತಹ ಶುಭ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಕಲಶ ಸ್ಥಾಪನೆ ಮಾಡುವುದು ಅತ್ಯಂತ ಮುಖ್ಯವಾದ ಪದ್ಧತಿಯಾಗಿದೆ. ಕಲಶವಿಲ್ಲದೆ ಯಾವುದೇ ದೈವಿಕ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ಕಲಶವನ್ನು ಶುದ್ಧತೆ, ಮಂಗಳಕರತೆ, ಸಮೃದ್ಧಿ, ಸೃಷ್ಟಿ ಮತ್ತು ದೈವಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಯಾವುದೇ ಪೂಜಾ ಸಮಾರಂಭಗಳಲ್ಲಿ ಪ್ರಥಮ ಆದ್ಯತೆಯನ್ನು ಕಲಶಕ್ಕೆ ನೀಡಲಾಗುತ್ತದೆ.
ಹಿಂದೂ ಧರ್ಮದ ಪುರಾಣಗಳಲ್ಲಿ ಕಲಶಗಳ ಮಹತ್ವ:
ಹಿಂದೂ ಧರ್ಮದ ಪುರಾಣಗಳ ಪ್ರಕಾರ, ಕಲಶವನ್ನು ತ್ರಿಮೂರ್ತಿಗಳ ಸಾಕಾರ ರೂಪ ಹಾಗೂ ಅವರ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಕಲಶದ ಮುಂಭಾಗ ಅಥವಾ ಮುಖದ ಭಾಗದಲ್ಲಿ ಶ್ರೀಮನ್ನಾರಾಯಣ (ವಿಷ್ಣು), ಮಧ್ಯ ಭಾಗದಲ್ಲಿ ಪರಮಶಿವ ಹಾಗೂ ಕೆಳಭಾಗದಲ್ಲಿ ಬ್ರಹ್ಮದೇವ ನೆಲೆಸಿದ್ದಾರೆ ಎಂಬ ಭಾವನೆಯಿದೆ. ಹೀಗಾಗಿ, ಕಲಶವು ಸೃಷ್ಟಿ, ಸ್ಥಿತಿ ಮತ್ತು ಲಯಗಳ ಸಾರ್ವತ್ರಿಕ ಚಕ್ರವನ್ನು ಪ್ರತಿನಿಧಿಸುತ್ತದೆ. ಅಲ್ಲದೆ, ಕಲಶದಲ್ಲಿ ತುಂಬುವ ನೀರನ್ನು ಗಂಗಾ, ಯಮುನಾ, ಗೋದಾವರಿ, ಕೃಷ್ಣ ಹಾಗೂ ಕಾವೇರಿಯಂತಹ ಪವಿತ್ರ ನದಿಗಳ ಸಾಕಾರ ರೂಪವೆಂದು ಭಾವಿಸಿ ಪೂಜಿಸಲಾಗುತ್ತದೆ.
ಶಾಸ್ತ್ರಗಳು ಹೇಳುವುದೇನು ಗೊತ್ತಾ?
ಶಾಸ್ತ್ರಗಳ ಪ್ರಕಾರ, ಪೂಜಾ ಸ್ಥಳದಲ್ಲಿ ಕಲಶವನ್ನು ಸ್ಥಾಪಿಸುವುದರಿಂದ ಆ ಪರಿಸರವು ಸಂಪೂರ್ಣವಾಗಿ ಶುದ್ಧಗೊಂಡು ಧನಾತ್ಮಕ ಶಕ್ತಿಯು ಹರಡುತ್ತದೆ. ಕಲಶ ಪ್ರತಿಷ್ಠಾಪನೆಯ ನಂತರವೇ ಆಯಾ ದೇವತೆಗಳನ್ನು ಆಹ್ವಾನಿಸಿ ಮೂಲ ಪೂಜೆಯನ್ನು ಪ್ರಾರಂಭಿಸುವುದು ಸಂಪ್ರದಾಯ. ಈ ಪದ್ಧತಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊರಹಾಕಿ, ದೈವಿಕ ಕೃಪೆಯನ್ನು ಆಕರ್ಷಿಸುತ್ತದೆ. ಆದ್ದರಿಂದ ಗೃಹಪ್ರವೇಶ, ಯಜ್ಞ-ಹೋಮಗಳು ಮತ್ತು ವ್ರತಗಳಂತಹ ಪ್ರತಿಯೊಂದು ಶುಭ ಕಾರ್ಯದಲ್ಲೂ ಕಲಶ ಸ್ಥಾಪನೆಯೇ ಮೊದಲ ಹೆಜ್ಜೆಯಾಗಿದೆ.
ಕಲಶವು ಕೇವಲ ಒಂದು ಪಾತ್ರೆಯಲ್ಲ, ಬದಲಿಗೆ ಅದರಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೂ ವಿಶೇಷ ಆಧ್ಯಾತ್ಮಿಕ ಅರ್ಥವಿದೆ. ಕಲಶದ ದುಂಡಗಿನ ಆಕಾರವು ಬ್ರಹ್ಮಾಂಡ, ಭೂಮಿ ಮತ್ತು ಪರಿಪೂರ್ಣತೆಯನ್ನು ಸಂಕೇತಿಸುತ್ತದೆ. ಅದರಲ್ಲಿರುವ ನೀರು ಜೀವ, ಸೃಷ್ಟಿ ಮತ್ತು ಶುದ್ಧತೆಯನ್ನು ಪ್ರತಿನಿಧಿಸಿದರೆ, ಮಾವಿನ ಎಲೆಗಳು ಪ್ರಗತಿ, ನೈಸರ್ಗಿಕ ಆರೋಗ್ಯ ಮತ್ತು ಫಲವತ್ತತೆಯ ಸಂಕೇತವಾಗಿವೆ. ಕೊನೆಯಲ್ಲಿ ಇಡುವ ತೆಂಗಿನಕಾಯಿಯನ್ನು ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯ ಕೃಪೆ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ಕಲಶ ಪ್ರತಿಷ್ಠಾಪಿಸುವ ಪ್ರಮುಖ ವಿಧಿವಿಧಾನ:
ಕಲಶವನ್ನು ಪ್ರತಿಷ್ಠಾಪಿಸುವಾಗ ಕೆಲವು ಪ್ರಮುಖ ವಿಧಿವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಮೊದಲಿಗೆ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಪವಿತ್ರಗೊಳಿಸಬೇಕು. ನಂತರ ಕಲಶದ ಪಾತ್ರೆಗೆ ಶುದ್ಧ ನೀರನ್ನು ತುಂಬಿ, ಸಾಧ್ಯವಿದ್ದಲ್ಲಿ ಗಂಗಾಜಲವನ್ನು ಸೇರಿಸಬೇಕು. ಅದರ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ಮಾವಿನ ಎಲೆಗಳನ್ನು ಜೋಡಿಸಿ, ಶುದ್ಧವಾದ ತೆಂಗಿನಕಾಯಿಯನ್ನು ಇಡಬೇಕು. ತದನಂತರ ಸೂಕ್ತ ಮಂತ್ರಗಳ ಪಠಣೆಯೊಂದಿಗೆ ದೇವತೆಗಳನ್ನು ಆವಾಹನೆ ಮಾಡಿ ಪೂಜೆಯನ್ನು ನೆರವೇರಿಸಬೇಕು.
ಧಾರ್ಮಿಕ ನಂಬಿಕೆಗಳ ಪ್ರಕಾರ, ಕಲಶವನ್ನು ಶಾಸ್ತ್ರೋಕ್ತವಾಗಿ ಸ್ಥಾಪಿಸುವುದರಿಂದ ಮನೆಗೆ ಶಾಂತಿ, ಸಂತೋಷ ಮತ್ತು ಕಾರ್ಯಸಿದ್ದಿ ಲಭಿಸುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹಾಗೂ ಐಕ್ಯತೆ ಹೆಚ್ಚಾಗುತ್ತದೆ ಮತ್ತು ಕಾರ್ಯಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಒಟ್ಟಾರೆಯಾಗಿ, ಕಲಶ ಸ್ಥಾಪನೆಯೊಂದಿಗೆ ಪ್ರಾರಂಭವಾಗುವ ಪ್ರತಿಯೊಂದು ಶುಭ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡು ದೈವಿಕ ಆಶೀರ್ವಾದ ದೊರೆಯುತ್ತದೆ ಎಂಬುದು ಯುಗಯುಗಗಳಿಂದ ಮುಂದುವರಿದುಕೊಂಡು ಬಂದಿರುವ ಪವಿತ್ರ ನಂಬಿಕೆಯಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




