ಪ್ರತಿ ವರ್ಷ ನಿಗೂಢವಾಗಿ ಬೆಳೆಯುತ್ತಲೇ ಇದೆ ಮಾತಂಗೇಶ್ವರ ಮಹಾದೇವ ದೇವಸ್ಥಾನದ ಶಿವಲಿಂಗ

|

Updated on: Mar 08, 2024 | 2:23 PM

Matangeshwar Mahadev Temple: ಇಂದು ಮಹಾ ಶಿವರಾತ್ರಿ. ಶಿವರಾತ್ರಿ ಹಬ್ಬದಂದು ದೇಶಾದ್ಯಂತ ಇರುವ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಭಕ್ತರು ಇಂದು ಉಪವಾಸ, ಭಜನೆ, ಜಾಗರಣೆಯ ಮೂಲಕ ಶಿವನನ್ನು ಸ್ತುತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಇರುವ ಅತ್ಯಂತ ವಿಚಿತ್ರವಾದ ಮತ್ತು ವಿಶೇಷವಾದ ಶಿವನ ದೇವಸ್ಥಾನದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇಲ್ಲಿನ ಶಿವಲಿಂಗ ಪ್ರತಿ ವರ್ಷ ಉದ್ದವಾಗುತ್ತದೆ ಎಂಬುದು ನಿಗೂಢವಾದ ಸಂಗತಿ.

ಪ್ರತಿ ವರ್ಷ ನಿಗೂಢವಾಗಿ ಬೆಳೆಯುತ್ತಲೇ ಇದೆ ಮಾತಂಗೇಶ್ವರ ಮಹಾದೇವ ದೇವಸ್ಥಾನದ ಶಿವಲಿಂಗ
ಮಾತಂಗೇಶ್ವರ ಮಹಾದೇವ ದೇವಸ್ಥಾನ
Image Credit source: iStock
Follow us on

ಮಧ್ಯಪ್ರದೇಶದ ಖಜುರಾಹೊದಲ್ಲಿರುವ ಮಾತಂಗೇಶ್ವರ ದೇವಾಲಯದ (Matangeshwar Mahadev Temple) ಸಾವಿರ ವರ್ಷಗಳ ಹಳೆಯ ವಾಸ್ತುಶಿಲ್ಪದಿಂದಾಗಿ ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ. ಈ ದೇವಾಲಯವು ಯುನೆಸ್ಕೋ (UNESCO) ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಒಂದು ಕಾಲದಲ್ಲಿ ಈ ದೊಡ್ಡ ದೇವಾಲಯದ ರಚನೆಯ ಭಾಗವಾಗಿ 85 ದೇವಾಲಯಗಳು ಅಸ್ತಿತ್ವದಲ್ಲಿದ್ದವು ಎಂಬುದಕ್ಕೆ ಪುರಾವೆಗಳಿವೆ. ಆದರೆ ಈಗ ಕೇವಲ 25 ದೇವಾಲಯಗಳು ಉಳಿದುಕೊಂಡಿವೆ. ಮಧ್ಯಪ್ರದೇಶದ ಮಾತಂಗೇಶ್ವರ ಮಹಾದೇವ ದೇವಸ್ಥಾನದಲ್ಲಿ 19 ಅಡಿ ಉದ್ದದ ಶಿವಲಿಂಗವಿದೆ. ಈ ಶಿವಲಿಂಗವನ್ನು (Shivalinga) ನೋಡಲು ಜಗತ್ತಿನ ಅನೇಕ ಭಾಗಗಳಿಂದ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ಏಕೆಂದರೆ, ಈ ಶಿವಲಿಂಗ ಪ್ರತಿವರ್ಷವೂ ಕೊಂಚ ಕೊಂಚವೇ ಉದ್ದವಾಗುತ್ತಿದೆ. ಹೀಗಾಗಿ, ಖಜುರಾಹೊದಲ್ಲಿರುವ 25 ದೇವಸ್ಥಾನಗಳ ಪೈಕಿ ಮಾತಂಗೇಶ್ವರ ಮಹಾದೇವ ದೇವಾಲಯ ಅತ್ಯಂತ ವಿಶೇಷವಾದ ಮತ್ತು ಜನಪ್ರಿಯವಾದ ದೇವಸ್ಥಾನವಾಗಿದೆ.

ಮಾತಂಗೇಶ್ವರ ಮಹಾದೇವ್ ದೇವಾಲಯವು ಖಜುರಾಹೋದಲ್ಲಿನ ಅತಿ ಎತ್ತರದ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ. ಈ ದೇವಾಲಯದ ಗೋಡೆಗಳ ಮೇಲೆ ಪಾಶ್ಚಿಮಾತ್ಯ ಪ್ರಪಂಚದ ದೇವಾಲಯಗಳಂತೆ ಯಾವುದೇ ಆಕೃತಿಗಳಾಗಲಿ, ಶಿಲ್ಪಕಲೆಗಳಾಗಲಿ ಇಲ್ಲ. ಈ ದೇವಾಲಯದ ವಿಶೇಷತೆಯೆಂದರೆ, ಪ್ರತಿ ವರ್ಷ ಶರದ್ ಪೂರ್ಣಿಮೆಯ ದಿನದಂದು ದೇವಾಲಯದಲ್ಲಿರುವ ಶಿವಲಿಂಗದ ಉದ್ದವು ಒಂದು ಇಂಚು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Ramadan 2024: ರಂಜಾನ್ ಉಪವಾಸ ಮಾಡುತ್ತೀರಾ?; WHO ನೀಡಿರುವ ಸೂಚನೆಗಳಿವು

ಮಾತಂಗೇಶ್ವರ ಮಹಾದೇವ ದೇವಸ್ಥಾನದ ಅರ್ಚಕರು ಇಲ್ಲಿರುವ ಶಿವಲಿಂಗವು ನೆಲದೊಳಗೆ 9 ಅಡಿ ಮತ್ತು ಹೊರಗೂ ಬೆಳೆದಿದೆ ಎಂದು ಹೇಳಿಕೊಂಡಿದ್ದಾರೆ. ಪ್ರತಿ ವರ್ಷ ಶರದ್ ಪೂರ್ಣಿಮೆಯ ದಿನದಂದು ದೇವಾಲಯದಲ್ಲಿರುವ ಈ ಶಿವಲಿಂಗದ ಉದ್ದವು ಒಂದು ಇಂಚು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಶಾರದ ಪೂರ್ಣಿಮೆಯಂದು ಶಿವಲಿಂಗದ ಉದ್ದವು ಎಳ್ಳಿನ ಗಾತ್ರಕ್ಕೆ ಹೆಚ್ಚಾಗುತ್ತದೆ. ಶಿವಲಿಂಗದ ಉದ್ದವನ್ನು ಅಳೆಯಲು ಪ್ರವಾಸೋದ್ಯಮ ಇಲಾಖೆಯ ಉದ್ಯೋಗಿಗಳು ನಿಯಮಿತವಾಗಿ ಮಾಪನ ಟೇಪ್ ಅನ್ನು ಬಳಸುತ್ತಾರೆ. ಅದ್ಭುತವಾದ ವಿಷಯವೆಂಬಂತೆ ಶಿವಲಿಂಗದ ಉದ್ದವು ಮೊದಲಿಗಿಂತ ಎತ್ತರವಾಗಿದೆ.

ಈ ಶಿವಲಿಂಗವು ಏಕೆ ಮೇಲಕ್ಕೆ ಚಲಿಸುತ್ತದೆ ಮತ್ತು ಎಷ್ಟು ಕೆಳಕ್ಕೆ ಚಲಿಸುತ್ತದೆ ಎಂಬುದರ ಮಾಹಿತಿ ಇಲ್ಲ. ಈ ದಿನದಂದು, ಶಿವಲಿಂಗದ ಈ ಅದ್ಭುತ ಪವಾಡವನ್ನು ನೋಡಲು ಜನರು ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯವು ವರ್ಷವಿಡೀ ಭಕ್ತರಿಂದ ತುಂಬಿರುತ್ತದೆ. ಶ್ರಾವಣ ಮಾಸದಲ್ಲಿ ಇಲ್ಲಿ ಭಕ್ತಾದಿಗಳ ಭಾರೀ ನೂಕುನುಗ್ಗಲು ಇರುತ್ತದೆ. ಮಹಾಶಿವರಾತ್ರಿಯಂದು ಜನರು ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಾರೆ.

ಇದನ್ನೂ ಓದಿ: Mahashivratri 2024: ಮಹಾಶಿವರಾತ್ರಿಯ ದಿನ ಉಪವಾಸ ಮಾಡುವವರು ಈ ನಿಯಮಗಳನ್ನು ಮರೆಯಬೇಡಿ

ಪ್ರತಿ ವರ್ಷ ಶಿವರಾತ್ರಿಯ ಸಂದರ್ಭದಲ್ಲಿ ಮಾತಂಗೇಶ್ವರ ಮಹಾದೇವ ದೇವಸ್ಥಾನದಲ್ಲಿ ಅದ್ಧೂರಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಅಂದು ಇಲ್ಲಿ ಶಿವನ ಮೆರವಣಿಗೆ ನಡೆಸಲಾಗುತ್ತದೆ. ಇದಕ್ಕೆ ದೇವಸ್ಥಾನವನ್ನು ವಧುವಿನಂತೆ ಅಲಂಕರಿಸಲಾಗುತ್ತದೆ. ಲಕ್ಷ್ಮಣ ದೇವಾಲಯದ ಬಳಿ ಇರುವ ಈ ದೇವಾಲಯವನ್ನು 35 ಅಡಿ ಚದರ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದರ ಗರ್ಭಗುಡಿಯೂ ಚೌಕಾಕಾರವಾಗಿದೆ. ಪ್ರವೇಶದ್ವಾರವು ಪೂರ್ವಕ್ಕೆ ಇದೆ. ದೇವಾಲಯದ ಶಿಖರವು ಬಹುಮಹಡಿಯನ್ನು ಹೊಂದಿದೆ.

ತಜ್ಞರ ಪ್ರಕಾರ, ಈ ದೇವಾಲಯವನ್ನು ಸುಮಾರು 900ರಿಂದ 925 ADಯಲ್ಲಿ ಚಂದೇಲ ದೊರೆ ಹರ್ಷದೇವನ ಅವಧಿಯಲ್ಲಿ ನಿರ್ಮಿಸಲಾಯಿತು. ಶಿವಲಿಂಗಗಳ ಸುತ್ತಳತೆ ಸುಮಾರು 4 ಅಡಿ. ಮೃತ್ಯುಂಜಯ ಮಹಾದೇವ್ ಎಂಬ ಹೆಸರಿನಿಂದಲೂ ಜನರು ಈ ಶಿವಲಿಂಗವನ್ನು ಆರಾಧಿಸುತ್ತಾರೆ. ಪುರಾಣಗಳ ಪ್ರಕಾರ, ಭಗವಾನ್ ಶಂಕರನು ಪಚ್ಚೆ ರತ್ನವನ್ನು ಹೊಂದಿದ್ದನು. ಅದನ್ನು ಶಿವನು ಪಾಂಡವರ ಸಹೋದರ ಯುಧಿಷ್ಠಿರನಿಗೆ ನೀಡಿದನು. ಯುಧಿಷ್ಠಿರನಿಂದ ಆ ರತ್ನವು ಋಷಿ ಮಣಿ ಮಾತಂಗನನ್ನು ತಲುಪಿತು ಮತ್ತು ಅವನು ಅದನ್ನು ಚಂದೇಲ ರಾಜ ಹರ್ಷವರ್ಮನಿಗೆ ಕೊಟ್ಟನು. ಈ ರತ್ನದ ಕಾರಣದಿಂದ ಮಾತಂಗ ಋಷಿಗೆ ಮಾತಂಗೇಶ್ವರ ಮಹಾದೇವ ಎಂದು ಹೆಸರು ನೀಡಲಾಯಿತು. ಈ ರತ್ನವನ್ನು ಸುರಕ್ಷತೆಗಾಗಿ ಶಿವಲಿಂಗದ ನಡುವೆ ನೆಲದಲ್ಲಿ ಹೂಳಲಾಯಿತು. ಈ ರತ್ನವು ಶಿವಲಿಂಗದ ಅಡಿಯಲ್ಲಿದೆ ಎಂದು ಹೇಳಲಾಗುತ್ತದೆ.

ಇನ್ನಷ್ಟು ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:13 pm, Fri, 8 March 24