Nail shape personality: ನಿಮ್ಮ ಉಗುರುಗಳ ಆಕಾರದಲ್ಲಿದೆ ಭವಿಷ್ಯದ ರಹಸ್ಯ! ನಿಮ್ಮ ವ್ಯಕ್ತಿತ್ವ ಎಂತದ್ದು ಎಂದು ತಿಳಿಯಿರಿ
ಪ್ರಾಚೀನ ಜ್ಯೋತಿಷ್ಯ ಪದ್ಧತಿಗಳಲ್ಲಿ, ಉಗುರುಗಳ ಆಕಾರವು ಒಬ್ಬರ ವ್ಯಕ್ತಿತ್ವ, ಗುಣಸ್ವಭಾವಗಳು ಮತ್ತು ಭವಿಷ್ಯದ ಒಳನೋಟಗಳನ್ನು ನೀಡುತ್ತದೆ. ಅಗಲ, ವೃತ್ತಾಕಾರ, ಉದ್ದ ಮತ್ತು ಚೌಕಾಕಾರದ ಉಗುರುಗಳು ವಿಭಿನ್ನ ರಾಶಿಚಕ್ರ ಚಿಹ್ನೆಗಳಿಗೆ ಸಂಬಂಧಿಸಿದ್ದು, ಪ್ರತಿಯೊಂದು ಆಕಾರವು ವಿಶಿಷ್ಟ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಮತ್ತು ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗಬಲ್ಲದು ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಜ್ಯೋತಿಷ್ಯ, ಹಸ್ತಸಾಮುದ್ರಿಕ ಶಾಸ್ತ್ರ, ಮುಖ ಲಕ್ಷಣ ಶಾಸ್ತ್ರಗಳಂತೆ, ಉಗುರುಗಳ ಆಕಾರವನ್ನು ಆಧರಿಸಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಪದ್ಧತಿಯೂ ಇದೆ. ಉಗುರುಗಳು ಕೇವಲ ದೇಹದ ಭಾಗವಲ್ಲದೆ, ಆಂತರಿಕ ಗುಣಗಳು, ಮಾನಸಿಕ ಸ್ಥಿತಿ ಮತ್ತು ಭವಿಷ್ಯದ ಒಳನೋಟಗಳನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ದೇಹದ ವಾತ, ಪಿತ್ತ, ಕಫ ಗುಣಗಳಂತೆ, ಉಗುರುಗಳ ಆಕಾರವೂ ವಿಭಿನ್ನ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಉಗುರುಗಳ ಆಕಾರವನ್ನು ಆಧರಿಸಿ ವ್ಯಕ್ತಿತ್ವವನ್ನು ತಿಳಿಯುವ ಈ ವಿಧಾನವು ನಾಲ್ಕು ಪ್ರಮುಖ ವಿಧಗಳನ್ನು ಗುರುತಿಸುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಅಗಲವಾದ ಉಗುರುಗಳು:
ಅಗಲವಾದ ಉಗುರುಗಳನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಮೇಷ, ಸಿಂಹ ಮತ್ತು ಧನುಸ್ಸು ರಾಶಿಯವರಲ್ಲಿ ಹೆಚ್ಚು ಕಂಡುಬರುತ್ತಾರೆ. ಇವರು ತಕ್ಷಣವೇ ಪ್ರತಿಕ್ರಿಯಿಸುವ, ಸಾಧನೆ ಮಾಡಲು ಹಂಬಲಿಸುವ ಮತ್ತು ತಮ್ಮ ಗುರಿಗಳ ಬಗ್ಗೆ ದೃಢ ಮನಸ್ಸು ಹೊಂದಿರುವವರಾಗಿರುತ್ತಾರೆ. ಇವರು ಶ್ರಮಜೀವಿಗಳು, ಮುಂಗೋಪಿಗಳು ಮತ್ತು ಹಠಮಾರಿ ಸ್ವಭಾವದವರಾಗಿರಬಹುದು. ಯಾವುದೇ ಕಷ್ಟ ಬಂದರೂ ಅದನ್ನು ಪರಿಷ್ಕರಿಸಲು ಪ್ರಯತ್ನಿಸುತ್ತಾರೆ. ರಾಜಕೀಯ ಯೋಗವು ಇವರಿಗೆ ತುಂಬಾ ಚೆನ್ನಾಗಿರುತ್ತದೆ, ಮತ್ತು ಇವರು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಈ ಗುಣಗಳು ಬೇರೆ ರಾಶಿಯವರಲ್ಲೂ ಕಂಡುಬರಬಹುದು, ಇದು ಕೇವಲ ಒಂದು ಸೂಚಕವಾಗಿದೆ.
ವೃತ್ತಾಕಾರದ ಉಗುರುಗಳು:
ವೃತ್ತಾಕಾರದ ಉಗುರುಗಳು ಸಾಮಾನ್ಯವಾಗಿ ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರಲ್ಲಿ ಇರುತ್ತವೆ. ಇವರು ನಿಧಾನಪ್ರಿಯರು, ತಾಳ್ಮೆಯುಳ್ಳವರು ಮತ್ತು ಸಹನಶೀಲರು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಪ್ರತಿಯೊಂದು ವಿಷಯವನ್ನು ಆಳವಾಗಿ ಚಿಂತಿಸಿ ಮುಂದುವರೆಯುತ್ತಾರೆ. ಇವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದು, ಧರ್ಮ ಚಿಂತಕರಾಗಿರುತ್ತಾರೆ. ತಂತ್ರ, ಮಂತ್ರ, ಯಂತ್ರಗಳ ಬಗ್ಗೆ ಹೆಚ್ಚು ಒಲವು ಹೊಂದಿರುತ್ತಾರೆ. ರಾಜಕೀಯ ವ್ಯಕ್ತಿಗಳು ಇಂತಹ ಗುಣಗಳನ್ನು ಅಳವಡಿಸಿಕೊಳ್ಳುವುದು ಸಾಮಾನ್ಯ. ಇವರ ಶಾಂತ ಸ್ವಭಾವ ಮತ್ತು ದೃಢತೆ ಇವರ ಶಕ್ತಿ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಲಂಬವಾದ (ಉದ್ದವಾದ) ಉಗುರುಗಳು:
ಲಂಬವಾದ ಉಗುರುಗಳನ್ನು ಹೊಂದಿರುವವರು ಸಾಮಾನ್ಯವಾಗಿ ವೃಷಭ, ಕನ್ಯಾ ಮತ್ತು ಮಕರ ರಾಶಿಯವರಲ್ಲಿ ಕಂಡುಬರುತ್ತಾರೆ. ಇವರು ರಸಿಕ ಸ್ವಭಾವದವರು, ಪ್ರೀತಿ ಮತ್ತು ಪ್ರೇಮದ ಬಗ್ಗೆ ಹೆಚ್ಚು ಒಲವು ಹೊಂದಿದವರು. ಬೇಗ ಆಕರ್ಷಣೆಗೆ ಒಳಗಾಗುತ್ತಾರೆ ಮತ್ತು ಇತರರನ್ನು ಆಕರ್ಷಿಸುವ ಗುಣವನ್ನೂ ಹೊಂದಿರುತ್ತಾರೆ. ಸಮಾಜದಲ್ಲಿ ಹೆಸರು, ಕೀರ್ತಿ ಮತ್ತು ಪ್ರತಿಷ್ಠೆಗಾಗಿ ಹೋರಾಡುತ್ತಾರೆ. ಹಿಂದಿನ ಕಾಲದಲ್ಲಿ ಮಹಿಳೆಯರು ಉದ್ದವಾದ ಉಗುರುಗಳನ್ನು ಬೆಳೆಸಿಕೊಳ್ಳುತ್ತಿದ್ದುದು ಇದೇ ಕಾರಣಕ್ಕೆ. ಇವರ ಬಲ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಚಲನಚಿತ್ರ ನಟರು, ಸಾಹಿತಿಗಳು, ಪುಸ್ತಕ ಬರೆಯುವವರು ಮತ್ತು ಬರಹಗಾರರಲ್ಲಿ ಈ ಗುಣ ಹೆಚ್ಚು ಕಂಡುಬರುತ್ತದೆ. ಇವರು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ.
ಚೌಕಾಕಾರದ ಉಗುರುಗಳು:
ಚೌಕಾಕಾರದ ಉಗುರುಗಳು ಮಿಥುನ, ತುಲಾ ಮತ್ತು ಕುಂಭ ರಾಶಿಯವರಲ್ಲಿ ಸಾಮಾನ್ಯ. ಇವರು ಸೀಕ್ರೆಟ್ ಸ್ವಭಾವದವರು, ಯಾವುದೇ ವಿಷಯವನ್ನು ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ತಮ್ಮ ವೈಯಕ್ತಿಕ ವಿಚಾರಗಳಲ್ಲಿ ಗುಟ್ಟನ್ನು ಕಾಪಾಡಿಕೊಳ್ಳುತ್ತಾರೆ. ಇವರು ಗಂಭೀರ ವ್ಯಕ್ತಿತ್ವದವರು, ಸೋತರೂ ಗೆದ್ದಿದ್ದೇವೆ ಎಂದು ಹೇಳುವ, ಗೆದ್ದರೂ ಸೋತಿದ್ದೇವೆ ಎಂದು ಹೇಳಿಕೊಳ್ಳುವ ಧೈರ್ಯಶಾಲಿಗಳು. ಇವರು ಸ್ವತಂತ್ರ ಉದ್ಯೋಗವನ್ನು ಬಯಸುತ್ತಾರೆ ಮತ್ತು ಯಾರ ಮೇಲೂ ಅವಲಂಬಿತರಾಗಲು ಇಷ್ಟಪಡುವುದಿಲ್ಲ. ಇವರದೇ ಆದ ಆಲೋಚನೆಗಳು, ಮನೆ ಮತ್ತು ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರು ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಲು ಶಕ್ತರು.
ಅಂತಿಮವಾಗಿ, ಉಗುರುಗಳ ಆಕಾರದ ಮೂಲಕ ವ್ಯಕ್ತಿತ್ವವನ್ನು ಅರಿಯುವ ಈ ವಿಧಾನವು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಒಂದು ಆಸಕ್ತಿದಾಯಕ ಮಾರ್ಗವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





