Anthills Pooja: ಹುತ್ತಗಳಿಗೆ ಪೂಜೆ ಮಾಡುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಹಿಂದೂ ಸನಾತನ ಸಂಸ್ಕೃತಿಯಲ್ಲಿ ಹುತ್ತದ ಪೂಜೆಗೆ ವಿಶೇಷ ಮಹತ್ವವಿದೆ. ಹೆಣ್ಣು ಮತ್ತು ಗಂಡು ಎಂಬ ಎರಡು ವಿಧದ ಹುತ್ತಗಳಿದ್ದು, ನಾಗದೋಷ, ಸಂತಾನ, ಆರೋಗ್ಯ, ಶಾಂತಿ ನೆಮ್ಮದಿಗಾಗಿ ಪೂಜಿಸಲಾಗುತ್ತದೆ. ಅರಳಿ ಮರದ ಬಳಿ, ದೇವಾಲಯಗಳ ಸನಿಹ, ನಾಗರ ಕಲ್ಲುಗಳ ಪಕ್ಕದಲ್ಲಿರುವ ಹುತ್ತಗಳು ಹೆಚ್ಚು ಫಲಪ್ರದ. ಇದು ಸುಬ್ರಹ್ಮಣ್ಯ ಮತ್ತು ಆದಿಶಕ್ತಿಯ ಆವಾಸ ಸ್ಥಾನ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಹಿಂದೂ ಸನಾತನ ಸಂಸ್ಕೃತಿಯ ಒಂದು ವಿಶಿಷ್ಟ ಆಚರಣೆಯಾದ ಹುತ್ತದ ಪೂಜೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಿಂದೂ ಪರಂಪರೆಯಲ್ಲಿ ಕಲ್ಲು, ಮಣ್ಣು, ವಿಗ್ರಹ, ಮರ, ಗಿಡ, ನೀರು ಎಲ್ಲವನ್ನೂ ಪವಿತ್ರ ಭಾವನೆಯಿಂದ ಭಗವಂತನ ಸ್ವರೂಪವೆಂದು ಆರಾಧಿಸಲಾಗುತ್ತದೆ. ಈ ಆಚರಣೆಗಳಲ್ಲಿ ಹುತ್ತಕ್ಕೆ ಪೂಜೆ ಮಾಡುವುದು, ನಮಸ್ಕಾರ ಮಾಡುವುದು, ಹಾಲು ಎರೆದು ನೈವೇದ್ಯ ಅರ್ಪಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ನಮ್ಮ ಶೋಡಶೋಪ ಸಂಸ್ಕಾರಗಳಲ್ಲಿ ಹುತ್ತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.
ಯಾವ ಹುತ್ತ ಶ್ರೇಷ್ಠ ಮತ್ತು ಯಾವ ಹುತ್ತಕ್ಕೆ ಪೂಜೆ ಮಾಡುವುದರಿಂದ ಹೆಚ್ಚು ಫಲ ದೊರೆಯುತ್ತದೆ ಎಂಬ ಪ್ರಶ್ನೆಗೆ, ಶಾಸ್ತ್ರಗಳಲ್ಲಿ ವಿವರಣೆ ನೀಡಲಾಗಿದೆ. ಹುತ್ತಗಳಲ್ಲಿ ಎರಡು ವಿಧಗಳಿವೆ: ದೊಡ್ಡ ಕಿಂಡಿಗಳನ್ನು, ಅಂದರೆ ಅಗಲವಾದ ತೂತುಗಳನ್ನು ಹೊಂದಿರುವ ಹುತ್ತಗಳನ್ನು ಹೆಣ್ಣು ಹುತ್ತವೆಂದು ಕರೆಯಲಾಗುತ್ತದೆ. ಗೋಪುರದ ಆಕಾರದಲ್ಲಿ ನಿರಂತರವಾಗಿ ಬೆಳೆಯುವ ಹುತ್ತಗಳನ್ನು ಗಂಡು ಹುತ್ತವೆಂದು ಪರಿಗಣಿಸಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದಲೇ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ.
ಹುತ್ತದ ಪೂಜೆಯು ಅನೇಕ ಸಂಕಲ್ಪಗಳು ಮತ್ತು ದೋಷಗಳ ನಿವಾರಣೆಗಾಗಿ ಆಚರಿಸಲಾಗುತ್ತದೆ. ನಾಗದೋಷ, ಸಂತಾನ ಪ್ರಾಪ್ತಿ, ಕಣ್ಣಿನ ತೊಂದರೆಗಳು, ಚರ್ಮದ ಸಮಸ್ಯೆಗಳು, ಕುಜದೋಷ ನಿವಾರಣೆ, ಹಾಗೂ ಸುಖ, ಶಾಂತಿ, ನೆಮ್ಮದಿಗಾಗಿ ಹುತ್ತಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಪೂರ್ವಿಕರು ಹುತ್ತಗಳನ್ನು ಶಕ್ತಿ ಕೇಂದ್ರಗಳು ಎಂದು ಗುರುತಿಸಿದ್ದಾರೆ. ಕಲಶದಲ್ಲಿ ಸರ್ವದೇವತೆಗಳನ್ನು ಆವಾಹನೆ ಮಾಡುವಂತೆ, ಹುತ್ತಗಳಲ್ಲಿ ಶಕ್ತಿ, ದೇವಿಯ ಕೃಪೆ, ಅಮ್ಮನ ಆವಾಹನೆ ಮತ್ತು ತ್ರಿಶಕ್ತಿಗಳ ಸಂಗಮವಿರುತ್ತದೆ ಎಂಬ ದೃಢ ನಂಬಿಕೆಯಿದೆ. ನಾಗದೋಷ ಅಥವಾ ರಾಹು ಗ್ರಹಗಳ ದೋಷವಿದ್ದರೆ, ಈ ಹುತ್ತ ಪೂಜೆಯನ್ನು ಶ್ರದ್ಧೆ, ಭಕ್ತಿ ಮತ್ತು ಭಯದಿಂದ ಆಚರಿಸಬೇಕು.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಸಾಮಾನ್ಯವಾಗಿ ಹುತ್ತ ಪೂಜೆಯನ್ನು ನಾಗರ ಪಂಚಮಿ, ಷಷ್ಠಿ, ಸುಬ್ರಹ್ಮಣ್ಯ ಷಷ್ಠಿ, ಮಂಗಳವಾರ, ಶುಕ್ರವಾರ ಮತ್ತು ಸಂಕಷ್ಟಹರ ಚತುರ್ಥಿಗಳಂದು ಮಾಡಲಾಗುತ್ತದೆ. ಇರುವೆಗಳು ನಿರ್ಮಿಸುವ ಸಣ್ಣ ಹುತ್ತಗಳ ಜೊತೆಗೆ, ಗೆದ್ದಲು ಹುತ್ತಗಳೂ ಇರುತ್ತವೆ. ಆದರೆ, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿನ ಹುತ್ತಗಳು ಅತಿ ಹೆಚ್ಚು ಪವಿತ್ರ ಮತ್ತು ಫಲಪ್ರದ ಎಂದು ಪರಿಗಣಿಸಲಾಗುತ್ತದೆ. ಅರಳಿ ಮರದ ಹತ್ತಿರ ಇರುವ ಹುತ್ತಗಳು ಅತ್ಯಂತ ಪವಿತ್ರವಾದವು. ದೇವಾಲಯಗಳ ಸಮೀಪ, ನವಗ್ರಹಗಳ ಪಕ್ಕ, ಮತ್ತು ನಾಗರ ಕಲ್ಲುಗಳ ಪಕ್ಕದಲ್ಲಿರುವ ಹುತ್ತಗಳು ಶ್ರೇಷ್ಠವೆಂದು ಭಾವಿಸಲಾಗುತ್ತದೆ. ಈ ಸ್ಥಳಗಳಲ್ಲಿ ಸುಬ್ರಹ್ಮಣ್ಯ ಮತ್ತು ಆದಿಶಕ್ತಿಯ ಆವಾಸವಿರುತ್ತದೆ ಎಂಬ ನಂಬಿಕೆಯಿದೆ.
ಕೃಷಿಕರ ನಂಬಿಕೆಯ ಪ್ರಕಾರ, ಹುತ್ತಗಳಿರುವ ಹೊಲಗಳಲ್ಲಿ ನೀರಿನ ಮೂಲ ಇರುತ್ತದೆ. ಹುತ್ತಗಳ ಬಳಿ ಮಹರ್ಷಿಗಳು, ಸಪ್ತ ಚಿರಂಜೀವಿಗಳಾದ ಹನುಮಂತ, ಸಪ್ತ ಋಷಿಗಳು ಸೂಕ್ಷ್ಮ ರೂಪದಲ್ಲಿ ನೆಲೆಸಿರುತ್ತಾರೆ ಎಂಬ ಮಾತಿದೆ. ಹಾಗಾಗಿ, ಭೂಮಿಯ ಮಟ್ಟದಲ್ಲಿರುವ ಮತ್ತು ದೇವಾಲಯಗಳಂತಹ ಪವಿತ್ರ ಕ್ಷೇತ್ರಗಳಲ್ಲಿರುವ ಹುತ್ತಗಳಿಗೆ ಪೂಜೆ ಸಲ್ಲಿಸುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ. ಬೇರೆಡೆ ಹುತ್ತ ಪೂಜೆ ಮಾಡುವುದರಿಂದ ಫಲ ದೊರೆಯುವುದಿಲ್ಲ ಎಂದಲ್ಲ, ಆದರೆ ಸಮಯ ತೆಗೆದುಕೊಳ್ಳಬಹುದು. ಈ ನಿರ್ದಿಷ್ಟ ಸ್ಥಳಗಳು ಹೆಚ್ಚಿನ ಶಕ್ತಿ ಹೊಂದಿದ ಸ್ಥಳಗಳಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:58 am, Tue, 7 April 26




