Spiritual: ಪ್ರಾಚೀನರು ಹೇಳದ್ದು, ಅರ್ವಾಚೀನರು ಹೇಳಿದ್ದು….

ಭಾರತದಂತಹ ಮತೀಯ, ಭಾಷಿಕ, ಜನಾಂಗೀಯ ಬಹುತ್ವಯುಕ್ತ ರಾಷ್ಟ್ರದಲ್ಲಿ ಜೈನ ರಾಮಾಯಣದಲ್ಲಿ ಲಕ್ಷ್ಮಣ ರಾವಣನನ್ನು ಕೊಲ್ಲುವುದು, ಕಾಶ್ಮೀರೀ ರಾಮಾಯಣದಲ್ಲಿ ಸೀತೆ ರಾವಣನ ಮಗಳಾಗಿರುವುದು, ಆನಂದ ರಾಮಾಯಣದಲ್ಲಿ ಸೀತೆ ರಾವಣನ ಬೆರಳಿನ ಚಿತ್ರ ಬಿಡಿಸಿದಳೆಂದು ರಾಮ ಆಕೆಯನ್ನು ಕಾಡಿಗೆ ಕಳುಹಿಸುವುದು ಇವೇ ಮುಂತಾದ ಆವಾಪ ಉದ್ವಾಪಗಳು ಸಂಭವಿಸುತ್ತಿರುತ್ತವೆ.

Spiritual: ಪ್ರಾಚೀನರು ಹೇಳದ್ದು, ಅರ್ವಾಚೀನರು ಹೇಳಿದ್ದು....
ಸಾಂದರ್ಭಿಕ ಚಿತ್ರ
TV9kannada Web Team

| Edited By: ಅಕ್ಷಯ್​ ಕುಮಾರ್​​

Jun 25, 2022 | 7:00 AM

ಭಾರತೀಯ ಕಾವ್ಯ ಪ್ರಪಂಚದಲ್ಲಿ ‘ಕವಿಸಮಯ‘ ಎನ್ನುವುದೊಂದು ವಿಶಿಷ್ಟವಾದ ಅವಕಾಶ. ಪ್ರಾಚೀನನಾದ ಕವಿಯೊಬ್ಬ ಭುವನೋಪಜೀವಿಯಾದ ಕಾವ್ಯವನ್ನು ಬರೆದಾಗ ಅದನ್ನಾಧರಿಸಿ ಕಲಾಪ್ರಕಾರಗಳಲ್ಲಿ ಅದನ್ನು ಮೂಡಿಸಿ ತಮ್ಮ ಸಮಕಾಲೀನರ ಮನಸ್ಸನ್ನು ಮುದಗೊಳಿಸಲು ಹಾಗೂ ಮೂಲಕವಿಯ ಕೃತಿಯಲ್ಲಿನ ವಿಷಯಗಳನ್ನು ಹಾಗೂ ಆಶಯಗಳನ್ನು ಆಚಂದ್ರಾರ್ಕವಾಗಿ ಜೀವಂತವಾಗಿರಿಸಲು ಅರ್ವಾಚೀನನೂ ಸಮರ್ಥನೂ ಆದ ಕವಿಯೊಬ್ಬನಿಗೆ ಮೂಲಕಾವ್ಯದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅದರ ಮರುಸೃಷ್ಟಿಯನ್ನು ಮಾಡುವ ಸ್ವಾತಂತ್ರ್ಯವಿದೆ. ಆದರೆ ಆ ಮರುಸೃಷ್ಟಿಯಲ್ಲಿ ಹೊಸ ಪಾತ್ರಗಳ, ಹೊಸ ಸನ್ನಿವೇಶಗಳ, ಹೊಸ ಆದರ್ಶಗಳ ಮೂಲಕ ಆತ ಹೊಮ್ಮಿಸುವ ಸೃಜನಶೀಲತೆಯು ಮೂಲದ ಆಶಯಗಳಿಗೆ ಧಕ್ಕೆಯುಂಟುಮಾಡುವುದಾಗಲೀ ಅಥವಾ ಅಲ್ಲಿನ ಐತಿಹಾಸಿಕವಾಗಿ ಪ್ರಮುಖವಾಗಬಹುದಾದಂತಹ ಘಟನೆಗಳನ್ನೇ ತಿರುಚುವುದನ್ನಾಗಲೀ ಮಾಡಬಾರದೆನ್ನುವುದು ಸರ್ವಾನುಮೋದಿತವಾದ ವಿಧಿ.

ಕೆಲವು ಬಾರಿ ಅಂತಹ ಅಪಸವ್ಯಗಳು ಸಂಭವಿಸುತ್ತವೆ. ಅದರಲ್ಲಿಯೂ ಭಾರತದಂತಹ ಮತೀಯ, ಭಾಷಿಕ, ಜನಾಂಗೀಯ ಬಹುತ್ವಯುಕ್ತ ರಾಷ್ಟ್ರದಲ್ಲಿ ಜೈನ ರಾಮಾಯಣದಲ್ಲಿ ಲಕ್ಷ್ಮಣ ರಾವಣನನ್ನು ಕೊಲ್ಲುವುದು, ಕಾಶ್ಮೀರೀ ರಾಮಾಯಣದಲ್ಲಿ ಸೀತೆ ರಾವಣನ ಮಗಳಾಗಿರುವುದು, ಆನಂದ ರಾಮಾಯಣದಲ್ಲಿ ಸೀತೆ ರಾವಣನ ಬೆರಳಿನ ಚಿತ್ರ ಬಿಡಿಸಿದಳೆಂದು ರಾಮ ಆಕೆಯನ್ನು ಕಾಡಿಗೆ ಕಳುಹಿಸುವುದು ಇವೇ ಮುಂತಾದ ಆವಾಪ ಉದ್ವಾಪಗಳು ಸಂಭವಿಸುತ್ತಿರುತ್ತವೆ. ಅಂತಹದೇ ಒಂದು ಅಪಸವ್ಯ “ರಾವಣ ಸೀತೆಯನ್ನು ಪುಷ್ಪಕವಿಮಾನದಲ್ಲಿ ಅಪಹರಿಸಿಕೊಂಡು ಹೋದ” ಎನ್ನುವುದು.

ಪ್ರಸ್ತುತ ಗ್ರಂಥದ ಮೂಲಕರ್ತೃವಾದ ವಾಲ್ಮೀಕಿ ಮಹರ್ಷಿಗಳು ಮಾತ್ರ,

“ಪ್ರಾದ್ರವನ್ ಗಿರಿಸಂಕಾಶಂ ಭಯಾರ್ತಾ ವನದೇವತಾಃ |

ಸ ಚ ಮಾಯಮಯೋ ದಿವ್ಯಃ ಖರಯುಕ್ತಃ ಖರಸ್ವನಃ ||

ಪ್ರತ್ಯದರ್ಶತ ಹೇಮಾಂಗೋ ರಾವಣಸ್ಯ ಮಹಾರಥಃ |” (ರಾವಣನು ಪರ್ವತೋಪಮವಾಗಿ ಬೆಳೆದನು. ಅಷ್ಟರಲ್ಲಿ ಅವನ ಹೇಸರಗತ್ತೆಗಳಿಂದ ಕೂಡಿದ, ಕರ್ಕಶವಾದ ಶಬ್ದವನ್ನುಂಟುಮಾಡುತ್ತಿದ್ದ ಸ್ವರ್ಣಮಯವಾದ ರಥವು ಕಾಣಿಸಿಕೊಂಡಿತು)

“ಅಂಕೇನಾದಾಯ ವೈದೇಹೀಂ ರಥಮಾರೋಪಯತ್ತದಾ |” (ತೊಡೆಯ ಹಿಂಭಾಗವನ್ನು ಹಿಡಿದು ಸೀತೆಯನ್ನು ರಥಕ್ಕೆ ಹತ್ತಿಸಿದನು) ಎಂದೇ ಆ ಸನ್ನಿವೇಶವನ್ನು ವರ್ಣಿಸುತ್ತಾರೆ. ಇದೇ ರಥವನ್ನೂ, ಅದರ ಸಾರಥಿಯನ್ನೂ ಹಾಗೂ ರಾವಣನಿಗೆ ಛತ್ರ ಚಾಮರಗಳನ್ನು ಹಿಡಿದಿದ್ದವರನ್ನೂ ಮುಂದೆ ಮಾರ್ಗಮಧ್ಯದಲ್ಲಿ ಮಹಾಪರಾಕ್ರಮಿಯಾದ ಜಟಾಯುವು ನಾಶಪಡಿಸುತ್ತಾನೆ. ತದನಂತರ ಜಟಾಯುವನ್ನು ಕೊಂದ ರಾವಣ ಸೀತೆಯನ್ನು ಎತ್ತಿಕೊಂಡು ಆಕಾಶಮಾರ್ಗವಾಗಿ ಹಾರಿಹೋಗುತ್ತಾನೆ.

“ಸ ತು ತಾಂ ರಾಮ ರಾಮೇತಿ ರುದಂತೀಂ ಲಕ್ಷ್ಮಣೇತಿ ಚ | ಜಗಾಮಾದಾಯ ಚಾಕಾಶಂ ರಾವಣೋ ರಾಕ್ಷಸೇಶ್ವರಃ ||”

ಆಶ್ಚರ್ಯವೆಂದರೆ ತೊರವೆ ರಾಮಾಯಣವಾಗಲೀ, ತುಳಸೀರಾಮಾಯಣವಾಗಲೀ, ಆಧ್ಯಾತ್ಮ ರಾಮಾಯಣವಾಗಲೀ ‘ರಥ’ದಲ್ಲಿ ರಾವಣ ಸೀತೆಯನ್ನು ಅಪಹರಿಸಿದ ಎಂದೇ ಹೇಳುವುದು.

ಕಲಾಪ್ರಕಾರಗಳಲ್ಲಿ ಕೆಲವೊಮ್ಮೆ ರಂಜನೆಯ ದೃಷ್ಟಿಯಿಂದ ಕೆಲವು ಬದಲಾವಣೆಗಳು ಮಾಡಲ್ಪಡುತ್ತವೆ. ತಪ್ಪೇನೂ ಅಲ್ಲ. ಹಾಗಾಗಿ ಪುರಾಣೋಪಜೀವೀ ಕಲೆಯಾದ ಯಕ್ಷಗಾನದಲ್ಲಿ ಎಲ್ಲಿಯಾದರೂ ಈ ಪ್ರಯೋಗ ನಡೆದಿದೆಯೇ ಅಂತ ಗಮನಿಸಿದಾಗ ಅಲ್ಲಿಯೂ ಸಹ ‘ಪಾರ್ತಿಸುಬ್ಬ’ ಕವಿಯ ‘ಸೀತಾಪಹಾರ’ ಪ್ರಸಂಗದಲ್ಲಿ ಸ್ಪಷ್ಟವಾಗಿ “ದಾನವನು ತನಗೆ ಸಿಕ್ಕಿದಳೆಂದು ನೆನೆಸುತ್ತಲಾ ನಿತಂಬೆಯ ‘ರಥದಲಿ’ ಕುಳ್ಳಿರಿಸುತೈದಿದಂ” ಅಂತಲೇ ಹೇಳುವುದು!!

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಮನೆಯಲ್ಲಿ ನೆಮ್ಮದಿ ಕಾಣಬೇಕೆಂದರೆ ನಿಮ್ಮ ದೇವರ ಕೋಣೆಯಲ್ಲಿ ಈ ಫೋಟೋಗಳು ಇಡಬೇಡಿ!

ಅರೇ!! ಪುಷ್ಪಕವಿಮಾನವೆಲ್ಲಿ??

ಅದು ಇರುವುದು ಕ್ರಿಸ್ತಪೂರ್ವ ಮೂರನೇ ಶತಮಾನದ ಸುಮಾರಿಗೆ ಜೀವಿಸಿದ್ದನೆಂದು ಹೇಳಲಾದ ಜೈನಕವಿಯಾದ ವಿಮಲಸೂರಿಯ ಪ್ರಾಕೃತ ಭಾಷೆಯ ರಾಮಾಯಣದ ಆವೃತ್ತಿಯಲ್ಲಿ. ಮುಂದೆ ಅದನ್ನೇ ಕನ್ನಡದ ನಾಗಚಂದ್ರ ಕವಿ ತನ್ನ ಪಂಪರಾಮಾಯಣಕ್ಕೆ ತಂದ. ಅಷ್ಟೇ……!!

ಈ ಘಟ್ಟದಲ್ಲಿ ಗಮನಿಸಲೇಬೇಕಾದ ಅಂಶವೆಂದರೆ ಸನ್ನಿವೇಶದಲ್ಲಿ ಇಂತಹ ಬದಲಾವಣೆ ಉಂಟಾದರೂ ಖಳಪಾತ್ರಗಳ ಉದಾರೀಕರಣದ ಭರದಲ್ಲಿ ರಾವಣ ಸೀತೆಯನ್ನು ಕದ್ದೊಯ್ದದ್ದಲ್ಲ, ಸೀತೆಯೇ ರಾವಣನೊಂದಿಗೆ ಹೋದದ್ದು ಎಂದಾಗಲಿಲ್ಲವಲ್ಲ. ರಾವಣ ಸೀತೆಯನ್ನು ಪಂಚವಟಿಯಿಂದ ಅಪಹರಿಸಿದ ಅನ್ನುವ ಮೂಲದ ಅಂಶ ಹಾಗೆಯೇ ಉಳಿಯಿತಲ್ಲ. ಅದೇ ಸಮಾಧಾನ….!! ಇದನ್ನೇ ಸಕಾರಾತ್ಮಕ ಸೃಜನಶೀಲತೆ ಎನ್ನುವುದು.

ಇದನ್ನೂ ಓದಿ

– ನಚಿಕೇತ್ ಹೆಗಡೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada