Mahabharat: ‘ನನ್ನಂಥ ಹೆಣ್ಣನ್ನು ತೃಪ್ತಿ ಪಡಿಸದ ನೀನು ನಪುಂಸಕನಾಗಿ ಹೋಗು, ಅರ್ಜುನನಿಗೆ ಊರ್ವಶಿ ಶಾಪ ನೀಡಿದ್ದೇಕೆ?
ಸ್ವರ್ಗದ ಅಪ್ಸರೆಯಾದ ಊರ್ವಶಿಯು ಸ್ವರ್ಗಸಭೆಯ ವೇಳೆಯೇ ಅರ್ಜುನನ ಸೌಂದರ್ಯಕ್ಕೆ ಮನ ಸೋತಿರುತ್ತಾಳೆ. ಹೀಗೊಂದು ದಿನ ಅವಕಾಶ ಸಿಕ್ಕಿತು, ಊರ್ವಶಿ ಅರ್ಜುನನ ಮುಂದೆ ಪ್ರೀತಿಯ ಪ್ರಸ್ತಾಪವನ್ನು ಮಾಡುತ್ತಾಳೆ.
ಜಗತ್ತಿಗೆ ಮಹಾನ್ ಸಂದೇಶ ನೀಡಿದ ಧರ್ಮಗ್ರಂಥ ಮಹಾಭಾರತ(Mahabharat). ಇದರಲ್ಲಿ ಬರುವ ಒಂದೊಂದು ಉಪಕಥೆಗಳು ಕೂಡ ನೀತಿ ಪಾಠ ಹೇಳುತ್ತವೆ. ಜೀವನ ಸಂದೇಶವನ್ನು ಸಾರುತ್ತವೆ. ಇಲ್ಲಿ ಘೋರವಾಗಿ ನೀಡಿದ ಶಾಪಗಳು ಒಂದಲ್ಲಾವೊಂದು ರೀತಿಯಲ್ಲಿ ವರವಾಗಿವೆ, ವಿನಾಶಕ್ಕೆ ಕಾರಣವೂ ಆಗಿವೆ. ಅರ್ಜುನನಿಗೆ(Arjuna) ಊರ್ವಶಿ(Urvashi) ನೀಡಿದ ಶಾಪ ಏನು? ಹಾಗೂ ಆ ಶಾಪ ಅರ್ಜುನನಿಗೆ ವರವಾಗಿದ್ದು ಹೇಗೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜೂಜಿನಲ್ಲಿ ಕೌರವರ ವಿರುದ್ಧ ಸೋತ ಬಳಿಕ ಪಂಚ ಪಾಂಡವರು 12 ವರ್ಷಗಳ ವನವಾಸ ಮತ್ತು 1 ವರ್ಷದ ಅಜ್ಞಾತ ವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ, ಶ್ರೀ ಕೃಷ್ಣನು ಅರ್ಜುನನಿಗೆ ವನವಾಸದ ನಂತರ ನೀವು ಕೌರವರೊಡನೆ ಯುದ್ಧ ಮಾಡಬೇಕಾಗಬಹುದು, ಆದ್ದರಿಂದ ನೀವು ದೈವಿಕ ಆಯುಧಗಳಿಗಾಗಿ ಶಿವನಿಗೆ ತಪಸ್ಸು ಮಾಡಬೇಕು ಎಂದು ಹೇಳಿದನು. ಅರ್ಜುನನು ಕೃಷ್ಣನ ಮಾತಿನಂತೆ ತಪಸ್ಸು ಮಾಡಿ ಶಿವನ ಕೃಪೆಯಿಂದ ಆಕಾಶ ಆಯುಧವನ್ನು ಪಡೆಯಲು ಸ್ವರ್ಗಕ್ಕೆ ಬಂದ.
ಸ್ವರ್ಗಕ್ಕೆ ಬಂದ ನಂತರ ಅರ್ಜುನ ಅನೇಕ ದೈವಿಕ ಆಯುಧಗಳನ್ನು ಪಡೆದ. ಈ ಸಂದರ್ಭದಲ್ಲಿ ಅರ್ಜುನನ ಸಾಧನೆಗೆ ಸಂತೃಪ್ತನಾಗಿದ್ದ ಅರ್ಜುನನ ತಂದೆ ಇಂದ್ರನು ಅರ್ಜುನನಿಗಾಗಿ ವಿಶೇಷ ಸ್ವರ್ಗಸಭೆ ಏರ್ಪಡಿಸುತ್ತಾನೆ. ನೃತ್ಯ- ಸಂಗೀತವನ್ನು ಆಯೋಜಿಸುತ್ತಾನೆ. ಅಲ್ಲದೆ ನೃತ್ಯ ಮತ್ತು ಸಂಗೀತದ ಜ್ಞಾನವು ಆಕಾಶ ಆಯುಧಕ್ಕಿಂತ ಕಡಿಮೆಯಿಲ್ಲ, ಹಾಗಾಗಿ ಅವುಗಳನ್ನು ಕಲಿತಿರುವುದು ಒಳ್ಳೆಯದು ಎಂದು ಅರ್ಜುನನಿಗೆ ಸಂಗೀತ ಕಲಿಯಲೇಳುತ್ತಾನೆ. ದೇವರಾಜನ ಆಜ್ಞೆಯ ಮೇರೆಗೆ ಅರ್ಜುನನು ಗಂಧರ್ವದೇವರಿಂದ ನೃತ್ಯ ಮತ್ತು ಸಂಗೀತ ಪಾಠಗಳನ್ನು ಕಲಿಯುತ್ತಾನೆ.
ಅರ್ಜುನನ ಮೈ ಮಾಟಕ್ಕೆ ಮನ ಸೋತ ಊರ್ವಶಿ
ಸ್ವರ್ಗದ ಅಪ್ಸರೆಯಾದ ಊರ್ವಶಿಯು ಸ್ವರ್ಗಸಭೆಯ ವೇಳೆಯೇ ಅರ್ಜುನನ ಸೌಂದರ್ಯಕ್ಕೆ ಮನ ಸೋತಿರುತ್ತಾಳೆ. ಹೀಗೊಂದು ದಿನ ಅವಕಾಶ ಸಿಕ್ಕಿತು, ಊರ್ವಶಿ ಅರ್ಜುನನ ಮುಂದೆ ಪ್ರೀತಿಯ ಪ್ರಸ್ತಾಪವನ್ನು ಮಾಡುತ್ತಾಳೆ. ಅರ್ಜುನನಲ್ಲಿ ಪ್ರಣಯ ಭಿಕ್ಷೆಯನ್ನು ಯಾಚಿಸುತ್ತಾಳೆ. ಆದರೆ ಅರ್ಜುನ ಅದನ್ನು ನಿರಾಕರಿಸುತ್ತಾನೆ. ಊರ್ವಶಿಯನ್ನು ತಾಯಿ ಎಂದು ಕರೆಯುತ್ತಾನೆ. ಕಾಮದ ದಾಹದಲ್ಲಿದ್ದ ಊರ್ವಶಿಗೆ ಈ ಮಾತುಗಳು ರುಚಿಸುವುದಿಲ್ಲ. ಅವಳು ಅರ್ಜುನನಿಗೆ ಶಾಪ ನೀಡುತ್ತಾಳೆ. ‘ನನ್ನಂಥ ಹೆಣ್ಣನ್ನು ತೃಪ್ತಿ ಪಡಿಸದ ನೀನು ನಪುಂಸಕನಾಗಿ ಹೋಗು. ಯಾವತ್ತೂ ನೀನು ಒಂದು ಹೆಣ್ಣಿಗೆ ಸುಖ ಕೊಡದಂತವನಾಗು’ ಎಂದು ಶಪಿಸುತ್ತಾಳೆ.
ತನ್ನ ಪೂರ್ವಜರಾದ ಪುರೂರವ ಮತ್ತು ಊರ್ವಶಿ ಕೆಲವು ಷರತ್ತುಗಳೊಂದಿಗೆ ಪತಿ-ಪತ್ನಿಯಾಗಿ ಬದುಕುತ್ತಿದ್ದ ಕಾರಣ ಅರ್ಜುನ ಊರ್ವಶಿಯನ್ನು ತಾಯಿ ಎಂದು ಕರೆದಿದ್ದನು. ಶಾಪದ ವಿಚಾರವು ಅರ್ಜುನನ ತಂದೆ ದೇವರಾಜ ಇಂದ್ರನಿಗೆ ತಲುಪುತ್ತದೆ. ದೇವರಾಜ ಇಂದ್ರನು ಊರ್ವಶಿ ಅರ್ಜುನನನ್ನು ಶಪಿಸಿರುವುದು ತಿಳಿದಾಗ, ತುಂಬಾ ಕೋಪಗೊಳ್ಳುತ್ತಾನೆ. ಶಾಪ ವಿಮೋಚನೆ ಮಾಡೆಂದು ಅಪ್ಪಣೆ ಮಾಡುತ್ತಾನೆ. ಊರ್ವಶಿಯು ಕೊಟ್ಟ ಶಾಪವನ್ನು ನಾನು ಹಿಂಪಡೆಯಲು ಆಗದು. ಆದರೆ ಶಾಪದ ಅವಧಿಯನ್ನು ಒಂದು ವರ್ಷಕ್ಕೆ ಇಳಿಸುತ್ತೇನೆ. ಆ ಒಂದು ವರ್ಷದ ಅವಧಿಯನ್ನು ಅರ್ಜುನನೇ ಯಾವಾಗ ಬೇಕೆಂದು ನಿರ್ಧರಿಸಬಹುದು ಎನ್ನುತ್ತಾಳೆ. ಅರ್ಜುನ ಇದನ್ನು ಒಪ್ಪಿಕೊಂಡು ಭೂಲೋಕಕ್ಕೆ ಹಿಂದಿರುಗುತ್ತಾನೆ.
ಇನ್ನು ಅರ್ಜುನನಿಗೆ ಊರ್ವಶಿಯು ನೀಡಿದ ಶಾಪವು ಅವನ ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಅಜ್ಞಾತವಾಸದ ಸಮಯದಲ್ಲಿ ಬ್ರಹನ್ನಳೆಯಾಗಿ ಮತ್ಸ್ಯ ದೇಶದ ವಿರಾಟ ರಾಜನ ಮಗಳಾದ ಉತ್ತರೆಗೆ ಅರ್ಜುನ ನೃತ್ಯಾಭ್ಯಾಸ ಹೇಳಿಕೊಡುತ್ತಾನೆ. ಹೀಗೆ ಅಜ್ಞಾತವಾಸದಲ್ಲಿ ನಪುಂಸಕನಾದ ಅರ್ಜುನ ಒಂದು ವರ್ಷ ಮುಗಿದ ಕೂಡಲೇ ತನ್ನ ಪುರುಷತ್ವವನ್ನು ಮರಳಿ ಪಡೆಯುತ್ತಾನೆ. ಹೀಗೆ ಊರ್ವಶಿಯ ಶಾಪವು ಅರ್ಜುನನಿಗೆ ವರವಾಯಿತು ಎಂದು ಪುರಾಣಗಳು ಹೇಳುತ್ತವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ