ನವರಾತ್ರಿಯಲ್ಲಿ ಯಾವ ದಿನ ಯಾವ ದೇವಿಯನ್ನು ಪೂಜಿಸಬೇಕು? ನವ ಅವತಾರಗಳ ಹಿಂದಿನ ಪುರಾಣ ಕಥೆ ಏನು?

ನವರಾತ್ರಿಯನ್ನು ಒಂಭತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಹತ್ತನೇ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಈ ಒಂಭತ್ತು ದಿನಗಳ ಕಾಲದಲ್ಲಿ ಭಕ್ತ ಜನರು ದೇವಿಯ 9 ಅವತಾರಗಳನ್ನು ಪೂಜಿಸುತ್ತಾರೆ. ಈ ಬಾರಿ ನವರಾತ್ರಿ ಹಬ್ಬವು ಅಕ್ಟೋಬರ್ 15 ರಂದು ಆರಂಭವಾಗಿ 25ಕ್ಕೆ ಕೊನೆಗೊಳ್ಳುತ್ತದೆ. ಅದ್ದೂರಿಯಿಂದ ಭಾರತದಾದ್ಯಂತ ನಡೆಯುವ ಹಬ್ಬ ಇದಾಗಿದ್ದು, ಕರ್ನಾಟಕದಲ್ಲಿ ನವರಾತ್ರಿ ಅಥವಾ ದಸಾರವೆಂದು ಕರೆಯಲಾಗುತ್ತದೆ. ಈ 9 ದಿನಗಳಲ್ಲಿ ಯಾವ ದಿನ ಯಾವ ದೇವಿಯನ್ನು ಪೂಜಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ನವರಾತ್ರಿಯಲ್ಲಿ ಯಾವ ದಿನ ಯಾವ ದೇವಿಯನ್ನು ಪೂಜಿಸಬೇಕು? ನವ ಅವತಾರಗಳ ಹಿಂದಿನ ಪುರಾಣ ಕಥೆ ಏನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2023 | 5:17 PM

ನವರಾತ್ರಿಯೆಂದರೆ ಹೆಸರೇ ಹೇಳುವ ಹಾಗೆ ಒಂಭತ್ತು ರಾತ್ರಿಗಳು, ದೇವಿಯ ಒಂಭತ್ತು ವಿಧದ ರೂಪಗಳನ್ನು ಆರಾಧಿಸುವುದು. ಜೊತೆಗೆ ಅದ್ದೂರಿಯಿಂದ ಭಾರತದಾದ್ಯಂತ ನಡೆಯುವ ಹಬ್ಬ ಇದಾಗಿದ್ದು, ಕರ್ನಾಟಕದಲ್ಲಿ ನವರಾತ್ರಿ ಅಥವಾ ದಸಾರವೆಂದು ಕರೆಯಲಾಗುತ್ತದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಇದನ್ನು ದುರ್ಗಾ ಪೂಜೆಯೆಂದು ಆಚರಿಸುತ್ತಾರೆ. ಇದೆಲ್ಲದರ ಮೂಲವೊಂದೆ ಆದರೆ ಆಚರಣೆ ಮಾಡುವ ರೀತಿ ಮಾತ್ರ ವಿಭಿನ್ನ. ಈ ಒಂಭತ್ತು ದಿನಗಳ ಕಾಲ ಭಕ್ತ ಜನರು ದೇವಿಯ 9 ಅವತಾರಗಳನ್ನು ಪೂಜಿಸುತ್ತಾರೆ. ಹತ್ತನೇ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಪುರಾಣಗಳಲ್ಲಿ ಹೇಳುವಂತೆ, ಮಹಿಷಾಸುರನೆಂಬ ಅಸುರನು ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ, ದೇವತೆಗಳನ್ನು ಹೊರಗೆ ಅಟ್ಟಿದಾಗ, ದೇವತೆಗಳೆಲ್ಲರೂ ಜಗತ್ತಿನ ಸೃಷ್ಟಿಕರ್ತ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಕೇಳಿಕೊಂಡಾಗ, ಮೂರು ತ್ರಿಮೂರ್ತಿಗಳೂ ತಮ್ಮ ದೇಹದ ಶಕ್ತಿಯನ್ನೆಲ್ಲ ಸೇರಿಸಿ, ದೇವತೆಯನ್ನು ಸೃಷ್ಟಿಸಿದರು. ಎಲ್ಲಾ ದೇವರ ಶಕ್ತಿಯು ಸೇರಿ ದೇವಿಯು ದುರ್ಗೆಯ ಅವತಾರವೆತ್ತಿದಳು. ಬಳಿಕ ಯುದ್ಧದಲ್ಲಿ ಅಸುರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಈ ಯುದ್ಧ ಒಂಭತ್ತು ದಿನಗಳ ಕಾಲ ನಡೆದು ಮಹಿಷಾಸುರನನ್ನು ದೇವಿಯು ತನ್ನ ವಾಹನವಾದ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದಳು. ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯ ದಶಮಿ ಎಂದು ಹೇಳಲಾಗುತ್ತದೆ.

ಶೈಲ ಪುತ್ರಿ

ನವರಾತ್ರಿಯ ಮೊದಲನೇ ದಿನದಂದು ಪರ್ವತರಾಜನ ಮಗಳಾದ ಶೈಲಪುತ್ರಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈಶ್ವರನ ಪತ್ನಿಯಾಗಿಯೂ ಶೈಲ ಪುತ್ರಿಯನ್ನು ಆರಾಧಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಸತಿ ದೇವಿಯು ಈಶ್ವರನಿಗಾಗಿ ಶೈಲಪುತ್ರಿಯನ್ನು ರೂಪದಲ್ಲಿ ಪುನರ್ಜನ್ಮ ಪಡೆದು ಬಂದಳು ಎನ್ನಲಾಗುತ್ತದೆ. ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿದ್ದ ಪರಿಣಾಮ, ದೇವಿ ಶೈಲ ಪುತ್ರಿಯೂ ಈಶ್ವರನಿಗಾಗಿ ಸತತ 16 ವರ್ಷ ಕಾಡಿನಲ್ಲಿ ಕಠಿಣ ತಪಸ್ಸನ್ನು ಮಾಡಿ ಶಿವನನ್ನು ಪಡೆದಳು ಎನ್ನಲಾಗುತ್ತದೆ.

ಬ್ರಹ್ಮಚಾರಿಣಿ

ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪರ್ವತಗಳ ರಾಜನಾದ ಹಿಮವಾನನ ಮಗಳಾಗಿ ಜನಿಸಿದ ದೇವಿ ಪಾರ್ವತಿಯು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡಿ ಶಿವನನ್ನು ಪತಿಯಾಗಿ ಪಡೆಯುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿತು ಎಂದು ನಂಬಲಾಗಿದೆ.

ಚಂದ್ರ ಘಂಟ ದೇವಿ

ನವರಾತ್ರಿಯ ಮೂರನೇ ದಿನ ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟ ದೇವಿಯನ್ನು ಪೂಜಿಸಲಾಗುತ್ತದೆ. ಚಂದ್ರಘಂಟ ದೇವಿಯ ಚಿನ್ನದ ಮೈ ಬಣ್ಣ, ಹತ್ತು ತೋಳು ಹಾಗೂ ಮೂರು ಕಣ್ಣನ್ನು ಹೊಂದಿರುತ್ತಾಳೆ. ಜೊತೆಗೆ ಘಂಟೆಯಾಕಾರದ ಚಂದ್ರನನ್ನು ಶಿರದಲ್ಲಿ ಧರಿಸಿದವಳಾದ್ದರಿಂದ ಈಕೆಗೆ ಚಂದ್ರಘಂಟ ಯೆಂಬ ಹೆಸರು ಬಂದಿದೆ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ದುರ್ಗಾ ಮಾತೆಯ ರೌದ್ರ ಸ್ವರೂಪವೆಂಬುದಾಗಿಯೂ ಕರೆಯಲಾಗುತ್ತದೆ. ಒಮ್ಮೆ ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆ ಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಈ ಸ್ವರೂಪವನ್ನು ದುರ್ಗಾಮಾತೆಯ ಚಂದ್ರಘಂಟ ಎಂದು ವರ್ಣಿಸಲಾಗುತ್ತದೆ.

ಕೂಷ್ಮಾಂಡ ದೇವಿ

ಚತುರ್ಥಿ ಅಥವಾ ನಾಲ್ಕನೇ ದಿನದಂದು ದೇವಿ ಕೂಷ್ಮಾಂಡಿನಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತಾಯಿ ಕೂಷ್ಮಾಂಡಾ, ವಿಶ್ವವನ್ನು ಸೃಷ್ಟಿಸಿದಳು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಅವಳಿಗೆ ಪೂಜೆ ಮಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದೂ ಅವಳನ್ನು ವರ್ಣಿಸಲಾಗುತ್ತದೆ. ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ.

ಸ್ಕಂದ ಮಾತೆ

ನವರಾತ್ರಿಯ ಐದನೇ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್‌. ಕಾರ್ತಿಕೇಯನ ತಾಯಿಯೇ ಸ್ಕಂದ ಮಾತೆ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದದ ಜೊತೆಗೆ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು.

ಇದನ್ನೂ ಓದಿ: 52 ದೇವಿ ಶಕ್ತಿಪೀಠಗಳು -ಈ ನವರಾತ್ರಿಯಲ್ಲಿ ಅವುಗಳನ್ನು ಭೇಟಿ ಮಾಡಿ.. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ

ಕಾತ್ಯಾಯಿನಿ

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಮಾತೆಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ್‌ ಎನ್ನುವ ಋಷಿಯು ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ ಭಕ್ತಿಯಿಂದ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಆಶೀರ್ವಾದ ಮಾಡುತ್ತಾಳೆ. ಅಂತೆಯೇ ಹುಟ್ಟಿದ ಮಗುವಿಗೆ ಕಾತ್ಯಾಯಿನಿ ಎಂದು ಹೆಸರಿಡುತ್ತಾರೆ. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಕಾತ್ಯಾಯಿನಿ ರೂಪ ಪಡೆದು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ.

ಕಾಳ ರಾತ್ರಿ

ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುವುದು. ಹೆಸರೇ ಹೇಳುವಂತೆ ತಾಯಿಯು ಕಗ್ಗತ್ತಲು ಮತ್ತು ಸಮಯದ ಸ್ವರೂಪಳಾಗಿದ್ದಾಳೆ. ತಾಯಿ ಕಾಲರಾತ್ರಿ ದೇವಿಯು ಅಂಧಕಾರವನ್ನು ಹೋಗಲಾಡಿಸಿ ಬೆಳಕೆಂಬ ಶಕ್ತಿಯನ್ನು ನೀಡುತ್ತಾಳೆ. ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿಯೂ ಕಷ್ಟಗಳನ್ನು ದೂರಮಾಡಿ ಧೈರ್ಯ ತುಂಬುತ್ತಾಳೆ ಎಂದು ನಂಬಲಾಗುತ್ತದೆ. ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿಯನ್ನು ದೂರ ಮಾಡುತ್ತಾಳೆ. ಜೊತೆಗೆ ಭಕ್ತರಿಗೆ ಹೆಚ್ಚಿನ ಸಂತೋಷ ಕರುಣಿಸುವುದರಿಂದಾಗಿ ಆಕೆಯನ್ನು ಶುಭಾಂಕರಿ ಎಂದು ಕರೆಯಲಾಗುತ್ತದೆ.

ಮಹಾಗೌರಿ

ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ಗೂಳಿ ಮೇಲೆ ಕುಳಿತು ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುತ್ತಾಳೆ. ತಾಯಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ದೇವಲೋಕಕ್ಕೆ ಹೋಗಿ ಶಿವನನ್ನು ಮದುವೆಯಾಗಲು ಬಯಸುತ್ತಾಳೆ. ನಾರದರ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಕೆ ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನವಾಗಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾವಿರಾರು ವರ್ಷಗಳ ತಪಸ್ಸಿನ ನಂತರ ಶಿವನು ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ ಎಂಬ ಪ್ರತೀತಿ ಇದೆ.

ಸಿದ್ಧಿಧಾತ್ರಿ

ನವಮಿಯಂದು ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ. “ಸಿದ್ಧಿ” ಎಂದರೆ ಪರಿಪೂರ್ಣತೆ “ದಾತ್ರಿ” ಎಂದರೆ “ಕೊಡುವವಳು” ಆದ್ದರಿಂದ ಅಕೆಯನ್ನು ಮಾತಾ ಸಿದ್ಧಿದಾತ್ರಿ ಎಂದು ಬಣ್ಣಿಸಲಾಗುತ್ತದೆ. ಹೀಗೆ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ ಅಥವಾ ಅವರನ್ನು ಹಿಂಸಿಸುತ್ತಾರೆಯೋ, ಆ ಸಂದರ್ಭದಲ್ಲಿ ದೇವಿಯು ಧರ್ಮಸಂಸ್ಥಾಪನೆಗಾಗಿ ಮತ್ತೆ ಅವತಾರ ತಾಳುತ್ತಾಳೆ ಎಂದು ನಂಬಲಾಗಿದೆ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ