AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಟ್ಟೆ ಚರ್ಮದ ಕಾಯಿಲೆ ಸಂಶೋಧನೆಗಾಗಿ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಗೆ 5.50 ಕೋಟಿ ರೂ ಅನುದಾನ ಘೋಷಿಸಿದ ಐಸಿಎಂಆರ್

ಚಿಟ್ಟೆ ಚರ್ಮದ ಕಾಯಿಲೆ (Epidermolysis Bullosa) ಕುರಿತು ಸಂಶೋಧನೆ ನಡೆಸಲು ಐಸಿಎಂಆರ್ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಗೆ 5.50 ಕೋಟಿ ಅನುದಾನ ನೀಡಿದೆ. ಕಡಿಮೆ ವೆಚ್ಚದ ಜೆನೆಟಿಕ್ ಪರೀಕ್ಷೆ, ಆರಂಭಿಕ ರೋಗಪತ್ತೆ ಮತ್ತು ವೈಯಕ್ತಿಕ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ಈ ಸಂಶೋಧನೆ ಹೊಸ ಭರವಸೆ ಮೂಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಚಿಟ್ಟೆ ಚರ್ಮದ ಕಾಯಿಲೆ ಸಂಶೋಧನೆಗಾಗಿ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಗೆ 5.50 ಕೋಟಿ ರೂ ಅನುದಾನ ಘೋಷಿಸಿದ ಐಸಿಎಂಆರ್
Epidermolysis BullosaImage Credit source: Sri Madhusudan Sai Hospital
ಪ್ರೀತಿ ಭಟ್​, ಗುಣವಂತೆ
|

Updated on: Aug 29, 2026 | 2:22 PM

Share

“ಒನ್ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್” ನೇತೃತ್ವದಲ್ಲಿ ನಡೆಯುತ್ತಿರುವ ‘ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ಗೆ (SMSIMSR) ‘ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ’ಯು (ICMR) ಅಪರೂಪದ ಆನುವಂಶಿಕ ಚರ್ಮರೋಗವಾದ ಎಪಿಡರ್ಮೊಲಿಸಿಸ್ ಬುಲ್ಲೋಸಾ (Epidermolysis Bullosa – EB) ಕುರಿತು ಸಂಶೋಧನೆ ನಡೆಸಲು 5.50 ಕೋಟಿ ರೂಪಾಯಿ ಸಂಶೋಧನಾ ಅನುದಾನವನ್ನು ಮಂಜೂರು ಮಾಡಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಈ ಅನುದಾನದ ಮೂಲಕ ಸಂಶೋಧನೆ ನಡೆಯಲಿದೆ.

‘ಎಪಿಡರ್ಮೊಲಿಸಿಸ್ ಬುಲ್ಲೋಸಾ ಕಾಯಿಲೆಗೆ ಕೈಗೆಟುಕುವ ದರದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆ’ ಹೆಸರಿನ ಈ ಯೋಜನೆಯನ್ನು ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ಡಾ ವಂಶೀಕೃಷ್ಣ ಯೆನಮಂದ್ರ ಪ್ರಧಾನ ಸಂಶೋಧಕರಾಗಿ ಮುನ್ನಡೆಸಲಿದ್ದಾರೆ. ಇದೇ ಆಸ್ಪತ್ರೆಯ ಡಾ ದಿವ್ಯಾ ಶೇಷಾದ್ರಿ, ಡಾ ಮನೋಜ್ ಶ್ರೀನಿವಾಸ್ ಹಾಗೂ ಮೆಹಬೂಬ್‌ನಗರದ ಎಸ್‌ವಿಎಸ್ ವೈದ್ಯಕೀಯ ಕಾಲೇಜಿನ ಡಾ ಶರತ್ ಚಂದ್ರ ಕೊಂಡ ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಏನಿದು ಚಿಟ್ಟೆ ಚರ್ಮದ ಕಾಯಿಲೆ? ಲಕ್ಷಣಗಳೇನು?

ಎಪಿಡರ್ಮೊಲಿಸಿಸ್ ಬುಲ್ಲೋಸಾ ಅಪರೂಪದ ಆನುವಂಶಿಕ ಚರ್ಮರೋಗಗಳ ಒಂದು ಗುಂಪಾಗಿದೆ. ಸಣ್ಣ ಪ್ರಮಾಣದ ಉಜ್ಜುವಿಕೆ ಅಥವಾ ಗಾಯವಾದರೂ ಚರ್ಮದ ಮೇಲೆ ಗುಳ್ಳೆಗಳು ಹಾಗೂ ಗಾಯಗಳು ಉಂಟಾಗುತ್ತವೆ. ಇದನ್ನು ‘ಚಿಟ್ಟೆ ಚರ್ಮದ ಕಾಯಿಲೆ’ (Butterfly Skin Disease) ಎಂದೂ ಕರೆಯಲಾಗುತ್ತದೆ. ಈ ಕಾಯಿಲೆಯಿಂದ ಬಳಲುವವರ ಚರ್ಮವು ಚಿಟ್ಟೆಯ ರೆಕ್ಕೆಗಳಷ್ಟೇ ಸೂಕ್ಷ್ಮವಾಗಿರುತ್ತದೆ ಎಂಬ ಕಾರಣಕ್ಕೆ ಈ ಹೆಸರು ಬಳಕೆಯಲ್ಲಿದೆ. ಈ ಕಾಯಿಲೆಯಿಂದ ದೀರ್ಘಕಾಲೀನ ಗಾಯಗಳು, ಕಲೆಗಳು, ಪೌಷ್ಟಿಕಾಂಶದ ಕೊರತೆ ಹಾಗೂ ಚರ್ಮದ ಕ್ಯಾನ್ಸರ್‌ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.

ಭಾರತದಲ್ಲಿ ಈ ಕಾಯಿಲೆಗೆ ಸಂಬಂಧಿಸಿದ ರಾಷ್ಟ್ರೀಯ ಮಟ್ಟದ ನೋಂದಣಿ ವ್ಯವಸ್ಥೆ (ರಿಜಿಸ್ಟ್ರಿ) ಸದ್ಯಕ್ಕೆ ಇಲ್ಲ. ಲಭ್ಯವಿರುವ ಆನುವಂಶಿಕ ಪರೀಕ್ಷೆಗಳು ಹಾಗೂ ವಿಶೇಷ ವೈದ್ಯಕೀಯ ಸೇವೆಗಳು ಕೂಡ ಸೀಮಿತವಾಗಿವೆ. ಇದರಿಂದ ಕಾಯಿಲೆಯ ಪತ್ತೆಯಲ್ಲಿ ವಿಳಂಬವಾಗುವುದರ ಜೊತೆಗೆ, ಆನುವಂಶಿಕ ಸಲಹೆ ಪಡೆಯುವುದರಲ್ಲಿಯೂ ತೊಂದರೆಗಳು ಎದುರಾಗುತ್ತಿವೆ. ಭಾರತದಲ್ಲಿ ಪ್ರತಿ 114 ಜನರಲ್ಲಿ ಸರಾಸರಿ ಒಬ್ಬರಿಗೆ ವಂಶವಾಹಿಗಳ ಮೂಲಕ ಚರ್ಮದ ಕಾಯಿಲೆ ಬರುವ ಅಪಾಯವಿದೆ ಎಂದು ಅಂದಾಜಿಸಲಾಗಿದೆ. ಇದರರ್ಥ ಆ ವ್ಯಕ್ತಿಗೆ ಕಾಯಿಲೆ ಇದೆ ಎಂದಲ್ಲ. ಅವರು ಆರೋಗ್ಯವಾಗಿಯೇ ಇರಬಹುದು. ಆದರೆ ಅವರಿಂದ ಮುಂದಿನ ತಲೆಮಾರಿಗೆ ಕಾಯಿಲೆ ವರ್ಗಾವಣೆ ಆಗುವ ಅಪಾಯ ಇರುತ್ತದೆ.

ಕಡಿಮೆ ವೆಚ್ಚದಲ್ಲಿ ವಂಶವಾಹಿ ಪರೀಕ್ಷೆ

ಪ್ರಸಕ್ತ ಸಂಶೋಧನಾ ಅನುದಾನದಿಂದ ಭಾರತೀಯ ರೋಗಿಗಳಿಗೆ ಸೂಕ್ತವಾಗುವ ಸಮಗ್ರ ನಿರ್ದಿಷ್ಟ ಔಷಧ ಪದ್ಧತಿಯನ್ನು ಅಭಿವೃದ್ಧಿಪಡಿಸಲು ಗಮನ ಹರಿಸಲಾಗುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸಂಪೂರ್ಣ ವಂಶವಾಹಿಯನ್ನು ವಿಶ್ಲೇಷಿಸುವ ಪರೀಕ್ಷೆಗಳಿಗೆ ಹೋಲಿಸಿದರೆ ಶೇ 60ಕ್ಕೂ ಹೆಚ್ಚು ಕಡಿಮೆ ವೆಚ್ಚದಲ್ಲಿ ಉದ್ದೇಶಿತ ಆನುವಂಶಿಕ ಪರೀಕ್ಷಾ ಕ್ರಮಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಕಾಯಿಲೆಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ತಂತುಗಳನ್ನು ಗುರುತಿಸುವುದು ಹಾಗೂ ಗರ್ಭದಲ್ಲಿರುವ ಶಿಶುವಿನಲ್ಲಿ ಕಾಯಿಲೆಯನ್ನು ಪತ್ತೆಹಚ್ಚಲು ಇವುಗಳನ್ನು ಬಳಸುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತದೆ. ದೇಹದ ಕೆಲವು ಜೀವಕೋಶಗಳಲ್ಲಿ ಸಹಜವಾಗಿ ನಡೆಯುವ ಆನುವಂಶಿಕ ಸ್ವಯಂ-ಸರಿಪಡಿಸುವ ಪ್ರಕ್ರಿಯೆಯನ್ನು ಅಧ್ಯಯನ ಮಾಡಲಾಗುತ್ತದೆ. ಇದರ ಮೂಲಕ ವ್ಯಕ್ತಿಯ ಅಗತ್ಯಕ್ಕೆ ಅನುಗುಣವಾಗಿ ಪುನರುತ್ಪಾದಕ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತದೆ.

ಕಾಯಿಲೆಗೆ ತಕ್ಕ ಚಿಕಿತ್ಸೆ

ಈ ಸಂಶೋಧನೆಯು ಈಗಾಗಲೇ ಲಭ್ಯವಿರುವ, ಕಡಿಮೆ ವೆಚ್ಚದಲ್ಲಿ ಬಳಸಬಹುದಾದ ಔಷಧಗಳನ್ನು ಪರಿಶೀಲನೆಗೆ ಒಳಪಡಿಸಲಿದೆ. ಕಾಯಿಲೆಗೆ ಸಂಬಂಧಿಸಿದ ಜೈವಿಕ ಪ್ರಕ್ರಿಯೆಗಳ ಮೇಲೆ ಔಷಧಿಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ರೋಗಿಯ ಆನುವಂಶಿಕ ಗುಣಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತದೆ. ಕಾಯಿಲೆಯ ತಡೆಗಟ್ಟುವಿಕೆ, ಮುಂಚಿತವಾಗಿ ಅಂದಾಜು ಮಾಡುವುದು, ಚಿಕಿತ್ಸೆ ಹಾಗೂ ವಂಶವಾಹಿ ಪರೀಕ್ಷೆಗಳನ್ನು ಆಧರಿಸಿದ ವೈದ್ಯಕೀಯ ವಿಧಾನಗಳನ್ನು ಒಂದೇ ಸಂಶೋಧನಾ ಚೌಕಟ್ಟಿನಡಿ ತರುವುದು ಈ ಯೋಜನೆಯ ಮತ್ತೊಂದು ಮುಖ್ಯ ಉದ್ದೇಶವಾಗಿದೆ. ಇದರ ಮೂಲಕ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು, ಉತ್ತಮ ಆನುವಂಶಿಕ ಸಲಹೆ ನೀಡುವುದು ಹಾಗೂ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸಾ ಕ್ರಮಗಳನ್ನು ರೂಪಿಸುವ ಬಗ್ಗೆಯೂ ಸಂಶೋಧಕರು ಗಮನಹರಿಸಲಿದ್ದಾರೆ.

ಈ ಯೋಜನೆಯನ್ನು ಮುಖ್ಯ ಸಂಶೋಧಕರಾಗಿ ಮುನ್ನಡೆಸಲಿರುವ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ಡಾ ವಂಶೀಕೃಷ್ಣ ಯೆನಮಂದ್ರ ಮಾತನಾಡಿ, ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಸರಿಯಾದ ಸಮಯದಲ್ಲಿ ಕಾಯಿಲೆಯ ಪತ್ತೆ ಮತ್ತು ವಿಶೇಷ ವೈದ್ಯಕೀಯ ಸೇವೆಗಳು ಲಭ್ಯವಾಗದಿರುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು. ಕಡಿಮೆ ವೆಚ್ಚದಲ್ಲಿ, ಎಲ್ಲೆಡೆ ಅಪರೂಪದ ಕಾಯಿಲೆಗಳಿಗೆ ನಿರ್ದಿಷ್ಟ ಚಿಕಿತ್ಸಾಕ್ರಮಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ ಎಂದು ಅವರು ವಿವರಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳ ಜೊತೆಗೆ ಸಂಶೋಧನೆಗೂ ಆದ್ಯತೆ ನೀಡುತ್ತಿದೆ. ಸಂಸ್ಥೆಯ ಸಂಶೋಧನಾ ವಿಭಾಗವು ಅಪರೂಪದ ಆನುವಂಶಿಕ ಕಾಯಿಲೆಗಳು, ಮಾನಸಿಕ ಆರೋಗ್ಯ, ದೀರ್ಘಕಾಲೀನ ಅಸಾಂಕ್ರಾಮಿಕ ಕಾಯಿಲೆಗಳು, ತಾಯಿ-ಮಗು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲಭೂತ, ಅನ್ವಯಿಕ ಹಾಗೂ ಕ್ಲಿನಿಕಲ್ ಸಂಶೋಧನೆಗಳನ್ನು ನಡೆಸುತ್ತಿದೆ.

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು