ಯಶೋದಾ ಆಸ್ಪತ್ರೆಯಿಂದ ಆರೋಗ್ಯ ಜಾಗೃತಿ: ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಪಿವಿ ಸಿಂಧು, ದೇವರಕೊಂಡ ಮಹತ್ವದ ಸಂದೇಶ
ಆರೋಗ್ಯಕರ ದೀರ್ಘಾಯುಷ್ಯ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸಲು ಹೈದರಾಬಾದ್‌ನ ಹೈಟೆಕ್ ಸಿಟಿಯ ಯಶೋದಾ ಆಸ್ಪತ್ರೆಯಿಂದ 'ದಿ ವೆಲ್‌ಬೀಯಿಂಗ್ ರೌಂಡ್‌ಟೇಬಲ್' (ಯೋಗಕ್ಷೇಮ ದುಂಡುಮೇಜಿನ ಸಭೆ) ಆಯೋಜನೆ ಮಾಡಲಾಗಿದ್ದು. ಖ್ಯಾತ ನಟ ಮತ್ತು ನಿರ್ಮಾಪಕ ವಿಜಯ್ ದೇವರಕೊಂಡ, ಹಾರ್ಟ್‌ಫುಲ್‌ನೆಸ್‌ನ ಜಾಗತಿಕ ಮಾರ್ಗದರ್ಶಕ ಕಮಲೇಶ್ ಡಿ. ಪಟೇಲ್, ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಸೇರಿದಂತೆ ಹಲವು ಗಣ್ಯರು ಆರೋಗ್ಯ, ದೀರ್ಘಾಯುಷ್ಯ ಮತ್ತು ಉದ್ಯೋಗಿಗಳ ಯೋಗಕ್ಷೇಮದ ಕುರಿತು ವಿಚಾರ ವಿನಿಮಯ ಹಂಚಿಕೊಂಡರು.

ಹೈದರಾಬಾದ್, (ನವೆಂಬರ್ 19): ಆರೋಗ್ಯಕರ ದೀರ್ಘಾಯುಷ್ಯ, ಗುಣಮಟ್ಟದ ಜೀವನ, ವೈಯಕ್ತಿಕ ಯೋಗಕ್ಷೇಮ ಮತ್ತು ಉದ್ಯೋಗಿಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಯಶೋದಾ ಆಸ್ಪತ್ರೆಯು ಹೈದರಾಬಾದ್‌ನ ತನ್ನ ಹೈಟೆಕ್ ಸಿಟಿ ಆವರಣದಲ್ಲಿ ‘ದಿ ವೆಲ್‌ಬೀಯಿಂಗ್ ರೌಂಡ್‌ಟೇಬಲ್ – ವರ್ಷಗಳಿಗೆ ಜೀವ ತುಂಬುವುದು’ (Adding Life to Years) ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ವೈದ್ಯಕೀಯ, ಕಾರ್ಪೊರೇಟ್ (ಉದ್ಯಮ), ಕ್ರೀಡಾ ಮತ್ತು ಸಾಮಾಜಿಕ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಒಂದೇ ವೇದಿಕೆಗೆ ತಂದ ಈ ಕಾರ್ಯಕ್ರಮದಲ್ಲಿ, ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ, ದೀರ್ಘಾಯುಷ್ಯ ಮತ್ತು ಯೋಗಕ್ಷೇಮದ ಮಹತ್ವದ ಕುರಿತು ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕೇವಲ ರೋಗದ ಚಿಕಿತ್ಸೆಗೆ ಸೀಮಿತವಾಗದೆ, ರೋಗ ಬಾರದಂತೆ ತಡೆಯುವ ಮುನ್ನೆಚ್ಚರಿಕಾ ಆರೋಗ್ಯ ರಕ್ಷಣೆಯ (preventive healthcare)ತ್ತ ಗಮನಹರಿಸುವುದು, ದೀರ್ಘಾಯುಷ್ಯಕ್ಕೆ ವೈಜ್ಞಾನಿಕವಾಗಿ ಬೆಂಬಲಿತ ವಿಧಾನಗಳನ್ನು ಅನುಸರಿಸುವುದು ಹಾಗೂ ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಮಹತ್ವದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ

ಖ್ಯಾತ ನಟ ಮತ್ತು ನಿರ್ಮಾಪಕ ಶ್ರೀ ವಿಜಯ್ ದೇವರಕೊಂಡ ಹಾಗೂ ಹಾರ್ಟ್‌ಫುಲ್‌ನೆಸ್‌ನ ಜಾಗತಿಕ ಮಾರ್ಗದರ್ಶಕ ಶ್ರೀ ಕಮಲೇಶ್ ಡಿ. ಪಟೇಲ್ (ದಾಜಿ) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಒಲಿಂಪಿಕ್ ಪದಕ ವಿಜೇತೆ ಮತ್ತು ವಿಶ್ವ ಚಾಂಪಿಯನ್‌ಶಿಪ್ ವಿಜೇತೆ ಕುಮಾರಿ ಪಿ.ವಿ. ಸಿಂಧು ಅವರು ವಿಶೇಷ ಅತಿಥಿ ಸಂವಾದಕರಾಗಿ ಪಾಲ್ಗೊಂಡಿದ್ದರು.
ಇನ್ನು ಹೈದರಾಬಾದ್‌ನಾದ್ಯಂತ ಇರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCCs) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEOs), ಹಿರಿಯ ಕಾರ್ಯನಿರ್ವಾಹಕರು, ವಿಭಾಗದ ಮುಖ್ಯಸ್ಥರು, ವ್ಯವಸ್ಥಾಪಕರು ಮತ್ತು ಉದ್ಯಮದ ನಾಯಕರು ಸೇರಿದಂತೆ ಸುಮಾರು 500 ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಶೋದಾ ಆಸ್ಪತ್ರೆಯ ಅಧ್ಯಕ್ಷ ಹೇಳಿದ್ದೇನು?
ಯಶೋದಾ ಆಸ್ಪತ್ರೆಯ ಅಧ್ಯಕ್ಷ ಜಿ. ರವೀಂದರ್ ರಾವ್ ಮಾತನಾಡಿ,”ತಡವಾಗಿ ರೋಗ ಪತ್ತೆಯಾಗುವುದರಿಂದ ರೋಗಿಗಳು ಮತ್ತು ಅವರ ಕುಟುಂಬಗಳು ಹೇಗೆ ತೊಂದರೆ ಅನುಭವಿಸುತ್ತವೆ ಎಂಬುದನ್ನು ನಾವು ಯಶೋದಾ ಆಸ್ಪತ್ರೆಯಲ್ಲಿ ಪ್ರತಿದಿನ ನೋಡುತ್ತೇವೆ.’ದಿ ವೆಲ್‌ಬೀಯಿಂಗ್ ರೌಂಡ್‌ಟೇಬಲ್’ ಮೂಲಕ, ನಾವು ಚಿಕಿತ್ಸೆಯಿಂದ ಮುನ್ನೆಚ್ಚರಿಕೆಯ ಕಡೆಗೆ ಗಮನವನ್ನು ಬದಲಾಯಿಸಲು ಬಯಸುತ್ತೇವೆ. ಆರೋಗ್ಯಕರ ಕೆಲಸದ ಸ್ಥಳಗಳು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಕಾರ್ಪೊರೇಟ್ ನಾಯಕರೊಂದಿಗೆ ಕೈಜೋಡಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದರು.
ಮುನ್ನೆಚ್ಚರಿಕೆಯು ಆ ವರ್ಷಗಳಿಗೆ ಜೀವ ತುಂಬುತ್ತದೆ
ಈ ಸಂದರ್ಭದಲ್ಲಿ ಮಾತನಾಡಿದ ಯಶೋದಾ ಆಸ್ಪತ್ರೆಯ ನಿರ್ದೇಶ ಡಾ. ಅಭಿನವ್ ಗೊರುಕಂಟಿ, “ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ಜೀವಿತಾವಧಿಯು ದ್ವಿಗುಣಗೊಂಡಿದೆ. ಆದಾಗ್ಯೂ, ಭಾರತೀಯರು ಈಗ ತಮ್ಮ ಜೀವನದ ಹತ್ತಕ್ಕೂ ಹೆಚ್ಚು ವರ್ಷಗಳನ್ನು ಅನಾರೋಗ್ಯದಲ್ಲಿ ಕಳೆಯುತ್ತಿದ್ದಾರೆ. ಮೂವತ್ತು ಮತ್ತು ನಲವತ್ತರ ಹರೆಯದ ಜನರಲ್ಲಿಯೇ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ನಮ್ಮ ಆಸ್ಪತ್ರೆಯ ಅಂಕಿಅಂಶಗಳು ತೋರಿಸುತ್ತವೆ. ಔಷಧಿಯು ಜೀವನಕ್ಕೆ ವರ್ಷಗಳನ್ನು ಸೇರಿಸಬಹುದು, ಆದರೆ ಮುನ್ನೆಚ್ಚರಿಕೆಯು ಆ ವರ್ಷಗಳಿಗೆ ಜೀವ ತುಂಬುತ್ತದೆ. ದೈನಂದಿನ ಕೆಲಸದ ಸಂಸ್ಕೃತಿಯಲ್ಲಿ ಮುನ್ನೆಚ್ಚರಿಕಾ ಆರೋಗ್ಯವನ್ನು ಒಂದು ಭಾಗವಾಗಿಸುವಲ್ಲಿ ಕಾರ್ಪೊರೇಟ್ ನಾಯಕರ ಪಾತ್ರ ಬಹಳ ಮುಖ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದ ದೇವರಕೊಂಡ
ಖ್ಯಾತ ನಟ ಮತ್ತು ನಿರ್ಮಾಪಕ ವಿಜಯ್ ದೇವರಕೊಂ ಡ ಮಾತನಾಡಿ, “ಜೀವನದಲ್ಲಿ ಯಶಸ್ಸು ಸಾಧಿಸುವುದು ಮುಖ್ಯ, ಆದರೆ ಆರೋಗ್ಯವಾಗಿರುವುದು ಕೂಡ ಅಷ್ಟೇ ಮುಖ್ಯ. ನಾವು ಎಷ್ಟೇ ಕಾರ್ಯನಿರತರಾಗಿದ್ದರೂ ನಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಸರಿಯಾದ ಪೌಷ್ಟಿಕಾಂಶ, ನಿಯಮಿತ ವ್ಯಾಯಾಮ ಮತ್ತು ಮಾನಸಿಕ ಶಾಂತಿಯನ್ನು ಒಳಗೊಂಡಿರುವ ಜೀವನಶೈಲಿಯು ನಮ್ಮ ಬದುಕನ್ನು ಹೆಚ್ಚು ಆರೋಗ್ಯಕರ ಮತ್ತು ಸಂತೋಷದಾಯಕವಾಗಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಸ್ವಂತ ಆರೋಗ್ಯ ಮತ್ತು ಯೋಗಕ್ಷೇಮದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದರು.
ಹಾರ್ಟ್‌ಫುಲ್‌ನೆಸ್‌ನ ಜಾಗತಿಕ ಮಾರ್ಗದರ್ಶಕ ಕಮಲೇಶ್ ಡಿ. ಪಟೇಲ್ ಮಾತನಾಡಿ, “ನಿಜವಾದ ಆರೋಗ್ಯವು ಕೇವಲ ದೈಹಿಕ ಸದೃಢತೆಗೆ ಮಾತ್ರ ಸೀಮಿತವಾಗಿಲ್ಲ. ಅದಕ್ಕೆ ದೇಹ, ಮನಸ್ಸು ಮತ್ತು ಭಾವನೆಗಳ ಸಮತೋಲನ ಬೇಕು. ಧ್ಯಾನ, ಶಾಂತಿಯುತ ಆಲೋಚನೆಗಳು ಮತ್ತು ಆರೋಗ್ಯಕರ ಅಭ್ಯಾಸಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಲ್ಲವು. ದೀರ್ಘಾಯುಷ್ಯದ ಜೊತೆಗೆ ನಾವು ಶಾಂತಿ, ಸಂತೋಷ ಮತ್ತು ಗುಣಮಟ್ಟದ ಜೀವನವನ್ನೂ ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು.
ಮಾನಸಿಕ ಶಕ್ತಿಯೂ ಯಶಸ್ಸಿಗೆ ಅಡಿಪಾಯ ಎಂದ ಪಿ.ವಿ. ಸಿಂಧು
ಇನ್ನು ಇದೇ ವೇಳೆ ಪಿ.ವಿ. ಸಿಂಧು ಮಾತನಾಡಿ, “ಒಬ್ಬ ಕ್ರೀಡಾಪಟುವಿನ ಜೀವನದಲ್ಲಿ ಆರೋಗ್ಯ, ಶಿಸ್ತು ಮತ್ತು ನಿರಂತರ ಅಭ್ಯಾಸ ಅತ್ಯಂತ ಮುಖ್ಯ. ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಶಕ್ತಿಯೂ ಯಶಸ್ಸಿಗೆ ಅಡಿಪಾಯವಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ವ್ಯಾಯಾಮ, ಸಮತೋಲಿತ ಆಹಾರ ಮತ್ತು ವಿಶ್ರಾಂತಿಗೆ ಆದ್ಯತೆ ನೀಡಬೇಕು. ಆರೋಗ್ಯಕರ ಜೀವನಶೈಲಿಯೇ ದೀರ್ಘಕಾಲೀನ ಯಶಸ್ಸಿನ ಹಾದಿಯಾಗಿದೆ” ಎಂದರು.
ಒಟ್ಟಿನಲ್ಲಿ ಯಶೋದಾ ಆಸ್ಪತ್ರೆಯು ಈ ಕಾರ್ಯಕ್ರದೊಂದಿಗೆ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮಗ್ರ ಯೋಗಕ್ಷೇಮವನ್ನು ಹೇಗೆ ಬೆಂಬಲಿಸಬಹುದು ಎಂಬುದರ ಕುರಿತು ಚರ್ಚಿಸಲು ಕಾರ್ಪೊರೇಟ್ ನಾಯಕರಿಗೆ ಉತ್ತಮ ವೇದಿಕೆಯನ್ನು ಒದಗಿಸಿತು. ಈ ದುಂಡುಮೇಜಿನ ಸಭೆಯು ವಿವಿಧ ಕ್ಷೇತ್ರಗಳ ನಾಯಕರ ನಡುವೆ ವಿಚಾರ ವಿನಿಮಯ ಮತ್ತು ಸಹಯೋಗವನ್ನು ಪ್ರೋತ್ಸಾಹಿಸಿದೆ.




