ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಾವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಬೆಟ್ಟಿಂಗ್ ಕಂಪನಿಗಳು..!
ಗಮನಿಸಬೇಕಾದ ಮುಖ್ಯ ವಿಷಯ ಎಂದರೆ ಜೂಜಾಟವನ್ನು ಇಸ್ಲಾಂನಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆಯೇ ಪಾಕಿಸ್ತಾನದಲ್ಲೂ ಜೂಜಾಟಕ್ಕೆ ನಿಷೇಧವಿದೆ. ಆದಾಗ್ಯೂ, ಬೆಟ್ಟಿಂಗ್ ವಿಧಾನಗಳನ್ನು ಬಳಸಿಕೊಂಡು ಮತ್ತು ಫ್ಯಾಂಟಸಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಾಕ್ನಲ್ಲಿ ಜೂಜಾಟ ನಡೆಸಲಾಗುತ್ತಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕಾರಾವಧಿಯಲ್ಲಿ ಬೆಟ್ಟಿಂಗ್ ಕಂಪನಿಗಳು ದೇಶದ ಕ್ರಿಕೆಟ್ ಮಂಡಳಿಯ ಮೂಲಕ ಪಾಕಿಸ್ತಾನದಲ್ಲಿ ನೆಲೆಯೂರಿದೆ ದಿ ನ್ಯೂಸ್ ವರದಿ ಮಾಡಿದೆ. ಈ ಕಂಪೆನಿಗಳಿಂದ ದೇಶದ ಆರ್ಥಿಕತೆಗೆ ಶತಕೋಟಿ ನಷ್ಟವಾಗಿದ್ದು, ಇದೀಗ ಪಾಕ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಬೆಟ್ಟಿಂಗ್ ಕಂಪೆನಿಗಳ ಮೇಲೆ ಕ್ರಮಕೈಗೊಳ್ಳಲು ಮುಂದಾಗಿದೆ.
ಪಾಕ್ನಲ್ಲಿರುವ 150 ಅಕ್ರಮ ಬೆಟ್ಟಿಂಗ್ ಬ್ರ್ಯಾಂಡ್‌ಗಳ ಮೇಲೆ ಪಾಕಿಸ್ತಾನ ಸರ್ಕಾರವು ಶಿಸ್ತುಕ್ರಮವನ್ನು ಪ್ರಾರಂಭಿಸಿದ್ದು, ಇದಾಗಿ ಒಂದು ವಾರದ ನಂತರ ಈ ವಿಚಾರ ಬಹಿರಂಗವಾಗಿದೆ. 2021 ರಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧಿಕಾರದಲ್ಲಿದ್ದಾಗ ಮತ್ತು ಎಹ್ಸಾನ್ ಮಣಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರಾಗಿದ್ದಾಗ, ಪ್ರಮುಖ ಬೆಟ್ಟಿಂಗ್ ಕಂಪೆನಿಯಾದ ದಫಾ ನ್ಯೂಸ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ನೀಡಲಾಯಿತು. ಆ ಬಳಿಕ ಕಂಪನಿಯ ಜಾಹೀರಾತುಗಳು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ದಫಾ ನ್ಯೂಸ್ ಮೂಲತಃ ಬೆಟ್ಟಿಂಗ್ ಕಂಪನಿಯಾಗಿದ್ದು, ಇದನ್ನು ‘ದಫಾಬೆಟ್’ ಎಂದು ಗುರುತಿಸಲಾಗಿದೆ. ಅಲ್ಲದೆ 1XBET 1XBat, WOLF111, woLF111, MELBET ಮತ್ತು MELBAT ಎಂದು ಹೆಸರಿನಲ್ಲೂ ಕಾರ್ಯನಿರ್ವಹಿಸುತ್ತಿದೆ.
ಇಂತಹ 150 ಕ್ಕೂ ಹೆಚ್ಚು ಕಂಪನಿಗಳು ಉಪಖಂಡದ ರಾಷ್ಟ್ರದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಈ ಕಂಪನಿಗಳು ಪಾಕಿಸ್ತಾನದ ಅಂತರಾಷ್ಟ್ರೀಯ ಕ್ರಿಕೆಟ್ ಬ್ರ್ಯಾಂಡಿಂಗ್‌ನ ಆಂತರಿಕ ಭಾಗವಾಗಿದ್ದರೂ, ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ನಾಲ್ಕು ತಂಡಗಳ ಪ್ರಮುಖ ಪ್ರಾಯೋಜಕರಾಗಿ ಕಾಣಿಸಿಕೊಳ್ಳುತ್ತಿದೆ.
ಬೆಟ್ಟಿಂಗ್ ಕಂಪನಿಗಳು ದೇಶದ ಕ್ರೀಡಾ ವಲಯದಲ್ಲಿ ಭ್ರಷ್ಟಾಚಾರವನ್ನು ಪ್ರೇರೇಪಿಸುತ್ತಿವೆ ಮತ್ತು ಜನರನ್ನು ಜೂಜಿನ ವ್ಯಸನಿಯಾಗಿಸುವ ಮೂಲಕ ಆರ್ಥಿಕತೆಯನ್ನು ಮತ್ತಷ್ಟು ಅಸ್ತವ್ಯಸ್ತಗೊಳಿಸುತ್ತಿವೆ ಎಂದು ಪಾಕಿಸ್ತಾನ ಸರ್ಕಾರ ಅಭಿಪ್ರಾಯಪಟ್ಟಿದೆ.
ಪಿಸಿಬಿ ಮುಂದಿನ ನಡೆಯೇನು?
ದಫಾ ನ್ಯೂಸ್ ಮತ್ತು ಇತರರೊಂದಿಗಿನ ಒಪ್ಪಂದವನ್ನು ತಕ್ಷಣವೇ ಕೊನೆಗೊಳಿಸುವಂತೆ ಸರ್ಕಾರದಿಂದ ಪಿಸಿಬಿಗೆ ಸೂಚನೆ ನೀಡಲಾಗಿದೆ. ಆದರೆ, ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಹೇಳುವ ಮೂಲಕ ಮಂಡಳಿಯು ಇನ್ನೂ ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ. ಸರ್ಕಾರವು ನಮಗೆ ಸಲಹೆ ನೀಡಿದ್ದಾರೆ. ಇದರಲ್ಲಿ ಯಾವುದೇ ಆದೇಶ ಇರಲಿಲ್ಲ ಎಂದು ಪಿಸಿಬಿ ವಕ್ತಾರರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಯಾವುದೇ ಆರೋಪ ಸಾಬೀತಾಗದ ಕಾರಣ ಅಂತಹ ಕಂಪನಿಗಳೊಂದಿಗಿನ ನಮ್ಮ ಒಪ್ಪಂದಗಳ ಭವಿಷ್ಯದ ಬಗ್ಗೆ ಈಗಲೇ ನಿರ್ಧರಿಸಲಾಗುವುದಿಲ್ಲ. ಸದ್ಯಕ್ಕೆ, ಬೆಟ್ಟಿಂಗ್ ಕಂಪನಿಯಿಂದ ದೂರವಿರಲು ಪಿಸಿಬಿ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: 1,058 ಟು 1,080: ತನ್ನದೇ ಹೀನಾಯ ದಾಖಲೆ ಮುರಿದ ಪಾಕಿಸ್ತಾನ್
ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಎಂದರೆ ಜೂಜಾಟವನ್ನು ಇಸ್ಲಾಂನಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆಯೇ ಪಾಕಿಸ್ತಾನದಲ್ಲೂ ಜೂಜಾಟಕ್ಕೆ ನಿಷೇಧವಿದೆ. ಆದಾಗ್ಯೂ, ಬೆಟ್ಟಿಂಗ್ ವಿಧಾನಗಳನ್ನು ಬಳಸಿಕೊಂಡು ಮತ್ತು ಫ್ಯಾಂಟಸಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಾಕ್ನಲ್ಲಿ ಜೂಜಾಟ ನಡೆಸಲಾಗುತ್ತಿದೆ.