AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಪಂದ್ಯದಲ್ಲೇ ಶತಮಾನದ ವಿಶ್ವ ದಾಖಲೆ ಬರೆದ ಯುವ ವೇಗಿ!

1925ರ ನಂತರ ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಸಂಭವಿಸದಿದ್ದ ಅದ್ಭುತವೊಂದು ಈಗ ಮರುಕಳಿಸಿದೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧಿಸಿದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿಗೆ ಟಾಮ್ ನಾರ್ಟನ್ ಭಾಜನರಾಗಿದ್ದಾರೆ. ಹಳೆ ದಾಖಲೆಗಳನ್ನು ಧೂಳೀಪಟ ಮಾಡಿದ ಈ ಯುವ ಪ್ರತಿಭೆಯ ಮ್ಯಾಜಿಕ್ ಸ್ಪೆಲ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೊದಲ ಪಂದ್ಯದಲ್ಲೇ ಶತಮಾನದ ವಿಶ್ವ ದಾಖಲೆ ಬರೆದ ಯುವ ವೇಗಿ!
Tom Norton
ಝಾಹಿರ್ ಯೂಸುಫ್
|

Updated on: May 10, 2026 | 10:24 AM

Share

ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೇವಲ 18 ವರ್ಷದ ಯುವ ವೇಗಿ ಟಾಮ್ ನಾರ್ಟನ್ ತಮ್ಮ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ 100 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ವೇಲ್ಸ್​ನ ಸೋಫಿಯಾ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಸಮರ್‌ಸೆಟ್ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗ್ಲಾಮೋರ್ಗನ್ ಪರ ಕಣಕ್ಕಿಳಿದ ನಾರ್ಟನ್, ತಮ್ಮ ಮಾರಕ ದಾಳಿಯಿಂದ ಎದುರಾಳಿ ಪಡೆಯನ್ನು ಕಟ್ಟಿಹಾಕಿದ್ದಾರೆ.

ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಅಬರ್ಗವೆನ್ನಿ ಮೂಲದ ಟಾಮ್ ನಾರ್ಟನ್ ಐದನೇ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ಮೂವರು ಬ್ಯಾಟರ್‌ಗಳನ್ನು ಔಟ್ ಮಾಡಿದರು.

  1.  ಜೇಮ್ಸ್ ರೇವ್: ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
  2. . ಟಾಮ್ ಲ್ಯಾಮ್ಮನ್ಬಿ: ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
  3.  ಆರ್ಚಿ ವಾನ್: ಎಲ್‌ಬಿಡಬ್ಲ್ಯೂ  ಆಗಿ ಹೊರ ನಡೆದರು.

ಈ ಮೂರು ವಿಕೆಟ್​ಗಳೊಂದಿಗೆ ಟಾಮ್ ನಾರ್ಟನ್ ಶತಮಾನದ ಬಳಿಕ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಶತಮಾನದ ದಾಖಲೆ ಉಡೀಸ್:

  • ಅತಿ ಕಿರಿಯ ಆಟಗಾರ: ಪ್ರಥಮ ದರ್ಜೆ ಪಂದ್ಯದ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ 18 ವರ್ಷದ ಟಾಮ್ ನಾರ್ಟನ್ ಪಾತ್ರರಾಗಿದ್ದಾರೆ.
  •  100 ವರ್ಷಗಳ ಕಾಯುವಿಕೆ ಅಂತ್ಯ: ಇಂಗ್ಲಿಷ್ ಕ್ರಿಕೆಟ್ ಇತಿಹಾಸದಲ್ಲಿ 1925ರ ನಂತರ ಪದಾರ್ಪಣೆಯ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಇವರಾಗಿದ್ದಾರೆ.
  • ಕೌಂಟಿ ಇತಿಹಾಸ: ಕೌಂಟಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 1906ರ ಬಳಿಕ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿ ಇವರದ್ದಾಗಿದೆ.

ಪಂದ್ಯದ ಮುಖ್ಯಾಂಶ (2ನೇ ದಿನದಾಟದ ಅಂತ್ಯಕ್ಕೆ):

  • ಸಮರ್‌ಸೆಟ್ ಮೊದಲ ಇನಿಂಗ್ಸ್: 354/10 (ಟಾಮ್ ಅಬೆಲ್ 86, ಜೋಷ್ ಥಾಮಸ್ 71; ರಿಯಾನ್ ಹ್ಯಾಡ್ಲಿ 3/72)
  • ಗ್ಲಾಮೋರ್ಗನ್ ಮೊದಲ ಇನಿಂಗ್ಸ್: 229/10 (ಆಸ ಟ್ರೈಬ್ 131*, ಕಿರಣ್ ಕಾರ್ಲ್‌ಸನ್ 41; ಕ್ರೇಗ್ ಓವರ್‌ಟನ್ 3/43)
  • ಸಮರ್‌ಸೆಟ್ ಎರಡನೇ ಇನಿಂಗ್ಸ್: 32/6 (ಟಾಮ್ ಅಬೆಲ್ 14*; ಟಾಮ್ ನಾರ್ಟನ್ 4/22)
  • ಒಟ್ಟಾರೆ ಮುನ್ನಡೆ: ಸಮರ್‌ಸೆಟ್ ತಂಡವು ಪ್ರಸ್ತುತ 157 ರನ್‌ಗಳ ಮುನ್ನಡೆಯಲ್ಲಿದೆ.

ಇದನ್ನೂ ಓದಿ: IPL 2026: RCB vs MI ಪಂದ್ಯಕ್ಕೆ 5 ಆಟಗಾರರು ಅಲಭ್ಯ

ದ್ವಿತೀಯ ದಿನದಾಟದ ಅಂತ್ಯಕ್ಕೆ ಸಮರ್​ಸೆಟ್ ತಂಡವು 157 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಆದರೆ ಟಾಮ್ ನಾರ್ಟನ್ ಅವರ ಮಾರಕ ದಾಳಿಗೆ ತತ್ತರಿಸಿರುವ ಸಮರ್​ಸೆಟ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 32 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಗ್ಲಾಮೋರ್ಗನ್ ತಂಡವು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

Follow Us