
ಕೇಂದ್ರ ಸರ್ಕಾರ ಆನ್ ಲೈನ್ ಗೇಮ್ ನಿಷೇಧ ಬೆನ್ನಲ್ಲೇ ಡ್ರೀಮ್ 11 ಹಾಗೂ ಬಿಸಿಸಿಐ ನಡುವಿನ ಒಪ್ಪಂದ ಕಡಿತವಾಗಿದ್ದು, ಇದೀಗ ಟೀಂ ಇಂಡಿಯಾದ (Indian cricket team) ಹೊಸ ಜೆರ್ಸಿ ಸ್ಪಾನ್ಸರ್ (new jersey sponsor )ಸಿಕ್ಕಿದ್ದಾರೆ. ಹೌದು… ಡ್ರೀಮ್11 ಸ್ಥಾನವನ್ನು ಪ್ರಮುಖ ಟೈರ್ ಉತ್ಪಾದಕ ಕಂಪನಿ ಅಪೊಲೊ ಟೈಯರ್ಸ್ (Apollo Tyres) ತನ್ನದಾಗಿಸಿಕೊಂಡಿದೆ. ರಿಯಲ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರಿಂದ ಡ್ರೀಮ್ 11 ಅನಿವಾರ್ಯವಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವಕ್ಕೆ ಬಿಸಿಸಿಐ ಬಿಡ್ ಕರೆದಿತ್ತು. ಈ ಬಿಡ್ ವೇಳೆ ಹಲವು ಕಂಪನಿಗಳು ಆಸಕ್ತಿಯನ್ನು ಹೊಂದಿದ್ದವು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಪೋಲೋ ಟೈರ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದೆ. ಈ ಒಪ್ಪಂದ 2027ರವರೆಗೆ ಮುಂದುವರಿಯುವ ದಾಖಲೆಯ ಒಪ್ಪಂದವಾಗಿದ್ದು, ಪ್ರತಿ ಪಂದ್ಯಕ್ಕೆ 4.5 ಕೋಟಿ ರೂಪಾಯಿಗಳಿಗೆ ಒಪ್ಪಂದವಾಗಿದೆ.
ಪ್ರಾಯೋಜಕತ್ವದ ಸ್ಪರ್ಧೆಯಲ್ಲಿ ಕ್ಯಾನ್ವಾ ಮತ್ತು ಜೆಕೆ ಟೈಯರ್ ಕಂಪನಿಗಳೂ ಇದ್ದವು. ಆದರೆ ಅಂತಿಮವಾಗಿ ಅಪೊಲೊ ಟೈಯರ್ಸ್ ಸ್ಪಾನ್ಸರ್ ಹಕ್ಕುಗಳನ್ನು ಗೆದ್ದುಕೊಂಡಿದೆ. ಬಿರ್ಲಾ ಓಪಸ್ ಪೇಂಟ್ಸ್ ಕೂಡ ಆಸಕ್ತಿ ತೋರಿಸಿತ್ತಾದರೂ, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಂಪನಿ ಭಾಗವಹಿಸಿರಲಿಲ್ಲ. ಇದರಿಂದ ಅಂತಿಮವಾಗಿ ಡ್ರೀಮ್11 ಸ್ಥಾನವನ್ನು ಪ್ರಮುಖ ಟೈರ್ ಉತ್ಪಾದಕ ಕಂಪನಿ ಅಪೊಲೊ ಟೈಯರ್ಸ್ ತನ್ನದಾಗಿಸಿಕೊಂಡಿದ್ದು, ಪ್ರತಿ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಬರೋಬ್ಬರಿ ಸುಮಾರು 4.5 ಕೋಟಿ ರೂ. ಪಾವತಿಸಲಿದೆ.
ಇದು ಡ್ರೀಮ್ 11 ನೀಡುತ್ತಿದ್ದ 4 ಕೋಟಿ ರೂ.ಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ. 2027ರಲ್ಲಿ ಈ ಒಪ್ಪಂದ ಇರಲಿದ್ದು, ಅಲ್ಲಿಯವರೆಗೆ ಒಟ್ಟಾರೆಯಾಗಿ ಬಿಸಿಸಿಐಗೆ ಸುಮಾರು 600 ಕೋಟಿ ರೂ. ಜೆರ್ಸಿ ಪ್ರಾಯೋಜಕತ್ವದಿಂದಲೇ ಹರಿದು ಬರಲಿದೆ. ಇದರಿಂದ ಬಿಸಿಸಿ ಜಾಕ್ ಪಾಟ್ ಹೊಡೆದಿದೆ.
ಕೇಂದ್ರ ಸರ್ಕಾರವು ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ 2025 ಜಾರಿಗೆ ತಂದಿರುವುದರಿಂದ 2025 ರ ಏಷ್ಯಾ ಕಪ್‌ಗೆ ಮುನ್ನ Dream11 ಮತ್ತು BCCI ಒಪ್ಪಂದವನ್ನು ಮಧ್ಯದಲ್ಲಿಯೇ ಕಡಿತವಾಗಿಯಿತು. ಇದರ ನಂತರ, BCCI ಹೊಸ ಟೆಂಡರ್‌ಗಳನ್ನು ಆಹ್ವಾನಿಸಿತು. ಭಾರತೀಯ ಕ್ರಿಕೆಟ್ ಜೆರ್ಸಿ ಒಪ್ಪಂದವು BCCIಗೆ ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಹಾಗೇ ಅಪೋಲೋ ಟಯರ್ಸ್ ಗ್ರಾಹಕರನ್ನು ಆಕರ್ಷಿಸಲು ಈ ಒಪ್ಪಂದ ಸಹಾಯಕವಾಗಿದೆ.
Published On - 8:02 pm, Tue, 16 September 25