IND vs AUS: ಆಸ್ಟ್ರೇಲಿಯಾ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯನ್ನೂ ಸೋತ ಭಾರತ

IND vs AUS: ಭಾರತ-ಎ ಮತ್ತು ಆಸ್ಟ್ರೇಲಿಯಾ-ಎ ತಂಡಗಳ ನಡುವೆ ನಡೆದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2-0 ಅಂತರದ ಸೋಲು ಎದುರಿಸಬೇಕಾಯಿತು. ಸರಣಿಯ ಎರಡನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಕೇವಲ 3 ದಿನಗಳಲ್ಲಿ ಸೋತಿದೆ. ಹಿಂದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಎ 7 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

IND vs AUS: ಆಸ್ಟ್ರೇಲಿಯಾ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯನ್ನೂ ಸೋತ ಭಾರತ
ಭಾರತ ಎ ತಂಡ
Follow us
ಪೃಥ್ವಿಶಂಕರ
|

Updated on:Nov 09, 2024 | 2:52 PM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗುವುದಕ್ಕೂ ಮುನ್ನ ಉಭಯ ದೇಶಗಳ ಎ ತಂಡಗಳ ನಡುವೆ ನಡೆದ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಅತಿಥೇಯ ಆಸ್ಟ್ರೇಲಿಯಾ ಎ ತಂಡ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಸರಣಿ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ-ಎ ತಂಡ, ಭಾರತ-ಎ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಮೊನ್ನೆಯ ಪಂದ್ಯದಲ್ಲೂ ಭಾರತ ತಂಡ 7 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಈ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ತಯಾರಿ ದೃಷ್ಟಿಯಿಂದ ಆಡಿದ ಎರಡೂ ಅಭ್ಯಾಸ ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ, ನವೆಂಬರ್ 22 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಭಾರತದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಹೀಗಾಗಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 161 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 223 ರನ್ ಗಳಿಸಿತ್ತು. ಈ ಮೂಲಕ 62 ರನ್‌ಗಳ ಮುನ್ನಡೆ ಸಾಧಿಸಿತ್ತು. ಪಂದ್ಯದ ಎರಡನೇ ಇನಿಂಗ್ಸ್​ನಲ್ಲಾದರೂ ಭಾರತದ ಬ್ಯಾಟ್ಸ್​ಮನ್​ಗಳು ಪುಟಿದೇಳುವ ನಿರೀಕ್ಷೆ ಇತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲೂ ಬ್ಯಾಟ್ಸ್​ಮನ್​ಗಳು ಕಳಪೆ ಪ್ರದರ್ಶನ ನೀಡಿದರು.

ಹೀಗಾಗಿ ಭಾರತ-ಎ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 229 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಆಸ್ಟ್ರೇಲಿಯ ತಂಡಕ್ಕೆ ಪಂದ್ಯ ಗೆಲ್ಲಲು 168 ರನ್‌ಗಳ ಗುರಿ ಸಿಕ್ಕಿತು. ಈ ಪಂದ್ಯದಲ್ಲಾದರೂ ಆಸ್ಟ್ರೇಲಿಯಾವನ್ನು ಮಣಿಸಬೇಕು ಎನ್ನುವ ಉದ್ದೇಶವಿಟ್ಟುಕೊಂಡಿದ್ದ ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್​ನಲ್ಲಿ ವೇಗಿಗಳು ಉತ್ತಮ ಆರಂಭ ನೀಡಿದರು. ಕೇವಲ ಒಂದು ರನ್​ಗಳಿಗೆ ಆಸ್ಟ್ರೇಲಿಯಾದ ಎರಡು ವಿಕೆಟ್ ಉರುಳಿಸಿದರು. 73 ರನ್ ತಲುಪುವ ವೇಳೆಗೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಇದಾದ ನಂತರ ಭಾರತೀಯ ಬೌಲರ್‌ಗಳು ವಿಕೆಟ್‌ಗಾಗಿ ಹಾತೊರೆಯಬೇಕಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ 6 ವಿಕೆಟ್‌ಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

ಟೀಂ ಇಂಡಿಯಾಕ್ಕೆ ಹೆಚ್ಚಿದ ತಲೆನೋವು

ಈ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್, ಧ್ರುವ ಜುರೆಲ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಪ್ರಸಿದ್ಧ್ ಕೃಷ್ಣ ಭಾರತ ಎ ತಂಡದ ಭಾಗವಾಗಿದ್ದರು. ಆದರೆ ಈ ಪಂದ್ಯದಲ್ಲಿ ಧ್ರುವ್ ಜುರೆಲ್ ಮತ್ತು ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ ಯಾವುದೇ ಆಟಗಾರ ಒಟ್ಟಾರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 14 ರನ್ ಗಳಿಸಿದರು. ಅದೇ ಸಮಯದಲ್ಲಿ, ಅಭಿಮನ್ಯು ಈಶ್ವರನ್ ಕೂಡ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 17 ರನ್ ಗಳಿಸಿದರು. ನಿತೀಶ್ ಕುಮಾರ್ ರೆಡ್ಡಿ ಮೊದಲ ಇನಿಂಗ್ಸ್‌ನಲ್ಲಿ 16 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 38 ರನ್ ಗಳಿಸಿದರು. ಆದರೆ ಎರಡನೇ ಟೆಸ್ಟ್​ನಲ್ಲಿ ಆಡುವ ಅವಕಾಶ ಪಡೆದಿದ್ದ ವಿಕೆಟ್ ಕೀಪರ್ ಧ್ರುವ್ ಜುರೆಲ್ ಗಮನಾರ್ಹ ಪ್ರದರ್ಶನ ನೀಡಿ, ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ, ಪ್ರಸಿದ್ಧ್ ಕೃಷ್ಣ ಈ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಪಡೆದರು.

ಹೀಗಾಗಿ ಮೊದಲ ಟೆಸ್ಟ್​ಗೆ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಅಥವಾ ಅಭಿಮನ್ಯು ಈಶ್ವರನ್​ಗೆ ಆರಂಭಿಕನ ಪಟ್ಟಕಟ್ಟಬೇಕು ಎಂದುಕೊಂಡಿದ್ದ ಮ್ಯಾನೇಜ್​ಮೆಂಟ್​ಗೆ ಈ ಇಬ್ಬರ ಕಳಪೆ ಫಾರ್ಮ್​ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಇಬ್ಬರಲ್ಲಿ ಒಬ್ಬರಾದರೂ ಗಮನಾರ್ಹ ಪ್ರದರ್ಶನ ನೀಡಿದ್ದರೆ ಅವರಿಗೆ ಆಸೀಸ್ ವಿರುದ್ಧದ ಮೊದಲ ಟೆಸ್ಟ್​ಗೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತಿತ್ತು. ಇದೀಗ ಮ್ಯಾನೇಜ್​ಮೆಂಟ್ ಯಾವ ರೀತಿಯಾಗಿ ತಂಡವನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Sat, 9 November 24