Australia vs England: ಗಬ್ಬಾದಲ್ಲಿ ಅಬ್ಬರಿಸಿದ ಆಸ್ಟ್ರೇಲಿಯಾ, ನೇಥನ್ ಲ್ಯಾನ್ ನೂತನ ದಾಖಲೆ: ಮೊದಲ ಟೆಸ್ಟ್ನಲ್ಲಿ ಭರ್ಜರಿ ಜಯ
Ashes Series 2021: ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನೇಥನ್ ಲ್ಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದು ನೂತನ ದಾಖಲೆ ಬರೆದರು. ಪುರುಷರ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 17ನೇ ಆಟಗಾರ ಎಂದೆನಿಸಿದ್ದಾರೆ.

ಬ್ರಿಸ್ಬೇನ್ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2021-22ನೇ ಸಾಲಿನ ಪ್ರತಿಷ್ಠಿತ ಆ್ಯಶಸ್ ಸರಣಿಯ (Ashes Series) ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia vs England) ಭರ್ಜರಿ ಜಯ ಸಾಧಿಸಿದೆ. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಕಾಂಗರೂ ಪಡೆ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು 9 ವಿಕೆಟ್ಗಳ ಗೆಲುವು ಕಾಣುವ ಮೂಲಕ ಐದು ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆಸೀಸ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 147 ರನ್ಗೆ ಸರ್ವಪತನ ಕಂಡರೆ, ಎರಡನೇ ಇನ್ನಿಂಗ್ಸ್ನಲ್ಲಿ 297 ರನ್ಗೆ ಆಲೌಟ್ ಆಯಿತು. ಅಂತಿಮವಾಗಿ ಗೆಲುವಿಗೆ 20 ರನ್ಗಳ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾಕ್ಕೆ ಸುಲಭ ಜಯ ದಕ್ಕಿ 4ನೇ ದಿನಕ್ಕೇ ಪಂದ್ಯ ಮುಕ್ತಾಯವಾಯಿತು.
ಈ ಪಂದ್ಯದಲ್ಲಿ ಮೊದಲ ದಿನ ಇಂಗ್ಲೆಂಡ್ ತಂಡ ಪ್ಯಾಟ್ ಕಮಿನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ 147 ರನ್ಗೆ ಸರ್ವಪತನ ಕಂಡಿತು. ಗುರುವಾರ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಲ್ಲೇ ಒಂದು ವಿಕೆಟ್ ಕಳೆದುಕೊಂಡಿತಾದರು ಎರಡನೇ ವಿಕೆಟ್ಗೆ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಶೇನ್ ಭರ್ಜರಿ ಜೊತೆಯಾಟ ಆಡಿದರು. ಈ ಜೋಡಿ 156 ರನ್ ಪೇರಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ವಾರ್ನರ್ ಕೇವಲ 6 ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು. 176 ಎಸೆತಗಳ ಈ ಜವಾಬ್ದಾರಿಯುತ ಆಟದ ವೇಳೆ 11 ಬೌಂಡರಿ, 2 ಸಿಕ್ಸರ್ ಸಿಡಿದಿತ್ತು. ಲ್ಯಾಬುಶೇನ್ ಗಳಿಕೆ 117 ಎಸೆತಗಳಿಂದ 74 ರನ್ (6 ಬೌಂಡರಿ, 2 ಸಿಕ್ಸರ್).
ಆದರೆ ಸ್ಟೀವನ್ ಸ್ಮಿತ್ (12), ಕ್ಯಾಮರಾನ್ ಗ್ರೀನ್ (0). ಅಲೆಕ್ಸ್ ಕ್ಯಾರಿ (12), ನಾಯಕ ಪ್ಯಾಟ್ ಕಮಿನ್ಸ್ (12) ಬೇಗನೇ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಟ್ರಾವಿಸ್ ಹೆಡ್ ಇಂಗ್ಲೆಂಡಿಗೆ ತಲೆನೋವಾಗಿ ಪರಿಣಮಿಸಿದರು. ಬರೋಬ್ಬರಿ 2 ವರ್ಷಗಳ ಬಳಿಕ ಮೊದಲ ಶತಕ ಸಿಡಿಸಿದ ಇವರು ತಂಡಕ್ಕೆ ಆಸರೆಯಾಗಿ ನಿಂತರು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಹೆಡ್ 85 ಎಸೆತಗಳಲ್ಲಿ ಶತಕ ಪೂರೈಸಿದರು.
ಮತ್ತೊಂತೆಡೆ ಇವರಿಗೆ ಮಿಚೆಲ್ ಸ್ಟಾರ್ಕ್ (64 ಎಸೆತ, 35 ರನ್) ಕೊಂಚ ಹೊತ್ತು ಸಾಥ್ ನೀಡುದ್ದು ಬಿಟ್ಟರೆ ಮತ್ಯಾವ ಬ್ಯಾಟರ್ಗಳು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಪರಿಣಾಮ ಕೊನೇಯದಾಗಿ ಹೆಡ್ 148 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್ನೊಂದಿಗೆ 152 ರನ್ ಸಿಡಿಸಿ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ 425 ರನ್ಗೆ ಆಲೌಟ್ ಆಯಿತು. 260 ರನ್ಗಳ ಮುನ್ನಡೆ ಪಡೆದುಕೊಂಡಿತು. ಇಂಗ್ಲೆಂಡ್ ಪರ ರಾಬಿನ್ಸನ್ ಮತ್ತು ಮಾರ್ಕ್ ವುಡ್ ತಲಾ 3 ವಿಕೆಟ್ ಕಿತ್ತರೆ, ಕ್ರಿಸ್ ವೋಕ್ಸ್ 2 ವಿಕೆಟ್ ಪಡೆದರು.
ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಹಸೀಬ್ ಹಮ್ಮದ್ (27) ಹಾಗೂ ರಾರಿ ಬರ್ನ್ಸ್ (13) ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಮೂರನೇ ವಿಕೆಟ್ಗೆ ಜೊತೆಯಾದ ಡೇವಿಡ್ ಮಲನ್ ಹಾಗೂ ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗಿ ನಿಂತರು. ಇಬ್ಬರೂ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಮಲ್ 195 ಎಸೆತಗಳಲ್ಲಿ 82 ರನ್ಗೆ ಔಟ್ ಆದರೆ, ರೂಟ್ 165 ಎಸೆತಗಳಲ್ಲಿ 89 ರನ್ಗೆ ನಿರ್ಗಮಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್ ಮತ್ತೆ ಕುಸಿತ ಕಂಡಿತು. ಬೆನ್ ಸ್ಟೋಕ್ಸ್ 14, ಓಲಿ ಪೊಪ್ 4 ಮತ್ತು ಜೋಸ್ ಬಟ್ಲರ್ ಕೇವಲ 23 ರನ್ ಕಲೆಹಾಕಿದರು.
ಅಂತಿಮವಾಗಿ ಇಂಗ್ಲೆಂಡ್ 103 ಓವರ್ಗಳಲ್ಲಿ 297 ರನ್ಗೆ ಆಲೌಟ್ ಆಯಿತು. ಆಸೀಸ್ ಪರ ನೇಥನ್ ಲ್ಯಾನ್ 4 ವಿಕೆಟ್ ಕಿತ್ತು ಮಿಂಚಿದರು. 20 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಅಲೆಕ್ಸ್ ಕ್ಯಾರಿ (9) ವಿಕೆಟ್ ಕಳೆದುಕೊಂಡಿತಾದರೂ ಮಾರ್ನಸ್ ಹ್ಯಾರಿಸ್ ವಿನ್ನಿಂಗ್ ಶಾಟ್ ಹೊಡೆದು 5.1 ಓವರ್ನಲ್ಲಿ ಗೆಲುವು ಸಾಧಿಸಿತು.
400 of the very best from Nathan Lyon! ?
He becomes the 17th player to achieve the milestone in men’s Test cricket, joining Shane Warne and Glenn McGrath as the only other Australian players #Ashes pic.twitter.com/hbdIjXVr6F
— Cricket Australia (@CricketAus) December 10, 2021
ನೇಥನ್ ಲ್ಯಾನ್ ದಾಖಲೆ:
ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನೇಥನ್ ಲ್ಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದು ನೂತನ ದಾಖಲೆ ಬರೆದರು. ಪುರುಷರ ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ 17ನೇ ಆಟಗಾರ ಎಂದೆನಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ಪರ ಶೆನ್ ವಾರ್ನ್ ಮತ್ತು ಗ್ಲೆನ್ ಮೆಕ್ಗ್ರಾತ್ ಬಳಿಕ 400 ವಿಕೆಟ್ ದಾಟಿದ ಬೌಲರ್ ಆಗಿದ್ದಾರೆ. ಅಲ್ಲದೆ ಭಾರತದ ಹರ್ಭಜನ್ ಸಿಂಗ್ ಸಾಧನೆ ಮುರಿಯಲು ಇವರಿಗೆ 15 ವಿಕೆಟ್ಗಳ ಬೇಕಾಗಿವೆಯಷ್ಟೆ. ಆಫ್ ಸ್ಪಿನ್ನರ್ಗಳ ಸಾಲಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ನೇಥನ್ 4ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೆ ರವಿಚಂದ್ರನ್ ಅಶ್ವಿನ್ 427 ವಿಕೆಟ್ ಕಬಳಿಸಿದ್ದರು.
Virat Kohli and Anushka Sharma: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ
(Australia beat England on 9 wickets to go 1-0 up in the five-Test Ashes series and Nathan Lyon entered 400 Test wickets club)
