ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಸ್ಟೀವ್ ಸ್ಮಿತ್ ನಾಯಕ
Sri Lanka vs Australia: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ಜನವರಿ 29 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಎರಡು ಪಂದ್ಯಗಳನ್ನಾಡಲಿದ್ದು, ಈ ಪಂದ್ಯಗಳಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಇನ್ನು ಈ ಮ್ಯಾಚ್ಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿದ್ದರೂ, ಸರಣಿ ಫಲಿತಾಂಶ ಫೈನಲಿಸ್ಟ್ಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಎರಡು ಪಂದ್ಯಗಳ ಈ ಸರಣಿಯಿಂದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೊರಗುಳಿದಿದ್ದಾರೆ. ಹೀಗಾಗಿ ಲಂಕಾ ವಿರುದ್ಧದ ಸರಣಿಗೆ ಹಂಗಾಮಿ ನಾಯಕನಾಗಿ ಸ್ಟೀವ್ ಸ್ಮಿತ್ ಅವರನ್ನು ನೇಮಿಸಲಾಗಿದೆ. ಇನ್ನು ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ಮಿಚೆಲ್ ಮಾರ್ಷ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಕೂಪರ್ ಕೊನೊಲಿ ಅವರನ್ನು ಆಯ್ಕೆ ಮಾಡಿದ್ದಾರೆ.
ಇನ್ನುಳಿದಂತೆ ಉಸ್ಮಾನ್ ಖ್ವಾಜಾ ಹಾಗೂ ಸ್ಯಾಮ್ ಕೊನ್ಸ್ಟಾಸ್ ಆರಂಭಿಕರಾಗಿ ಸ್ಥಾನ ಪಡೆದಿದ್ದು, ಮೂರನೇ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಮಧ್ಯಮ ಕ್ರಮಾಂಕಗಳಲ್ಲಿ ಬಲ ತುಂಬಲಿದ್ದಾರೆ.
ಹಾಗೆಯೇ ವಿಕೆಟ್ ಕೀಪರ್ಗಳಾಗಿ ಅಲೆಕ್ಸ್ ಕ್ಯಾರಿ ಹಾಗೂ ಜೋಶ್ ಇಂಗ್ಲಿಸ್ ತಂಡಲ್ಲಿದ್ದು, ಬೌಲರ್ಗಳಾಗಿ ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಟಾಡ್ ಮರ್ಫಿ ತಂಡದಲ್ಲಿದ್ದಾರೆ. ಅದರಂತೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಈ ಕೆಳಗಿನಂತಿದೆ…
ಆಸ್ಟ್ರೇಲಿಯಾ ಟೆಸ್ಟ್ ತಂಡ : ಸ್ಟೀವ್ ಸ್ಮಿತ್ (ನಾಯಕ), ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಟ್ರಾವಿಸ್ ಹೆಡ್ (ಉಪನಾಯಕ), ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ , ಸ್ಯಾಮ್ ಕೊನ್ಸ್ಟಾಸ್, ಮ್ಯಾಟ್ ಕುಹ್ನೆಮನ್, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ನಾಥನ್ ಮೆಕ್‌ಸ್ವೀನಿ, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್ಸ್ಟರ್.
ಶ್ರೀಲಂಕಾ-ಆಸ್ಟ್ರೇಲಿಯಾ ಸರಣಿ ಯಾವಾಗ ಶುರು?
ಶ್ರೀಲಂಕಾ ಆತಿಥ್ಯವಹಿಸುತ್ತಿರುವ ಈ ಟೆಸ್ಟ್ ಸರಣಿಯು ಜನವರಿ 29 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಎರಡು ಪಂದ್ಯಗಳನ್ನಾಡಲಿದ್ದು, ಈ ಮ್ಯಾಚ್ಗಳಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡವು ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ಇರಾದೆಯಲ್ಲಿದೆ.
ಇದನ್ನೂ ಓದಿ: WTC Final: ಹೀಗಾದರೆ ಫೈನಲ್ಗೆ ಪ್ರವೇಶಿಸಿರುವ ಆಸ್ಟ್ರೇಲಿಯಾ ಹೊರಬೀಳಬಹುದು..!
ಇನ್ನು ಈ ಸರಣಿಯಲ್ಲಿ ಶ್ರೀಲಂಕಾ ತಂಡ ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲು ಸಾಧ್ಯವಿಲ್ಲ. ಅತ್ತ ಈಗಾಗಲೇ ಫೈನಲ್ಗೆ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡವು ಜೂನ್ 11 ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂತಿಮ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಶ್ರೀಲಂಕಾ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:
- 1ನೇ ಟೆಸ್ಟ್, 29ನೇ ಜನವರಿ-2ನೇ ಫೆಬ್ರವರಿ 2025, ಗಾಲೆ
- 2ನೇ ಟೆಸ್ಟ್, 6ನೇ-10 ಫೆಬ್ರವರಿ 2025, ಗಾಲೆ