AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾಗೆ ನೂತನ ವಿದೇಶಿ ಕೋಚ್ ನೇಮಿಸಲು ಮುಂದಾದ ಬಿಸಿಸಿಐ

BCCI Appoints Nicolaas Lee: ಭಾರತ ಮಹಿಳಾ ಕ್ರಿಕೆಟ್ ತಂಡವು 2026ರ ಟಿ20 ವಿಶ್ವಕಪ್​ಗೆ ಸಜ್ಜಾಗುತ್ತಿದ್ದು, ಬಿಸಿಸಿಐ ತಂಡವನ್ನು ಬಲಪಡಿಸಲು ಪ್ರಮುಖ ಹೆಜ್ಜೆ ಇಟ್ಟಿದೆ. ಮಾಜಿ ಇಂಗ್ಲೆಂಡ್ ಕ್ರಿಕೆಟರ್ ಅನುಭವಿ ಕೋಚ್ ನಿಕೋಲಸ್ ಲೀ ಅವರನ್ನು ನೂತನ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಲೀ WPL ನಂತರ ತಂಡ ಸೇರಲಿದ್ದು, ಅವರ ವಿಶಾಲ ಅನುಭವ ತಂಡದ ಫಿಟ್ನೆಸ್ ಮತ್ತು ಪ್ರದರ್ಶನಕ್ಕೆ ಹೊಸ ಶಕ್ತಿ ತುಂಬಲಿದೆ. ಇದು ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಹಾಗೂ ಐಸಿಸಿ ಟೂರ್ನಿಗಳಿಗೆ ತಂಡವನ್ನು ಸಜ್ಜುಗೊಳಿಸಲಿದೆ.

ಟೀಂ ಇಂಡಿಯಾಗೆ ನೂತನ ವಿದೇಶಿ ಕೋಚ್ ನೇಮಿಸಲು ಮುಂದಾದ ಬಿಸಿಸಿಐ
Team India
ಪೃಥ್ವಿಶಂಕರ
|

Updated on: Jan 02, 2026 | 8:49 PM

Share

2025 ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಬೀಗಿದ್ದ ಭಾರತ ಮಹಿಳಾ ತಂಡ (Indian Women’s Cricket Team) ಇದೀಗ 2026 ರಲ್ಲೂ ಮತ್ತೊಂದು ಐಸಿಸಿ ಟೂರ್ನಿಯ ಮೇಲೆ ಕಣ್ಣಿಟ್ಟಿದೆ. ವಾಸ್ತವವಾಗಿ ಈ ವರ್ಷ ಮಹಿಳೆಯರ ಟಿ20 ವಿಶ್ವಕಪ್ (T20 World Cup 2026) ಕೂಡ ನಡೆಯಲಿದೆ. ಈ ಟೂರ್ನಿಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಭಾರತ ಮಹಿಳಾ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಬಿಸಿಸಿಐ (BCCI), ತಂಡಕ್ಕೆ ನೂತನ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ನೇಮಿಸಲು ಮುಂದಾಗಿದೆ. 2026 ರ ಮಹಿಳಾ ಪ್ರೀಮಿಯರ್ ಲೀಗ್ ನಂತರ ಕೋಚ್ ನೇಮಕವಾಗಲಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಈ ಹುದ್ದೆಗೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ಸಧ್ಯದ ಮಾಹಿತಿಯ ಪ್ರಕಾರ, ಇಂಗ್ಲೆಂಡ್‌ ತಂಡದ ಮಾಜಿ ಅನುಭವಿ ಆಟಗಾರ್ತಿ ನಿಕೋಲಸ್ ಲೀ ಈ ಹೊಸ ಜವಾಬ್ದಾರಿಯನ್ನು ಹೊರಲಿದ್ದಾರೆ.

ಟೀಂ ಇಂಡಿಯಾಗೆ ಹೊಸ ಕೋಚ್

ಮೇಲೆ ಹೇಳಿದಂತೆ ಬಿಸಿಸಿಐ, ಇಂಗ್ಲೆಂಡ್‌ನ ನಿಕೋಲಸ್ ಲೀ ಅವರನ್ನು ತಂಡದ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ನೇಮಿಸಲು ನಿರ್ಧರಿಸಿದೆ. 2026 ರ ಮಹಿಳಾ ಪ್ರೀಮಿಯರ್ ಲೀಗ್ ಮುಗಿದ ನಂತರ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ವರ್ಷದ WPL ಜನವರಿ 9 ರಂದು ಪ್ರಾರಂಭವಾಗಿ ಫೆಬ್ರವರಿ 5 ರವರೆಗೆ ನಡೆಯಲಿದೆ. ಇದಾದ ತಕ್ಷಣ, ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ, ಅಲ್ಲಿ ಫೆಬ್ರವರಿ 15 ರಿಂದ ಮಾರ್ಚ್ 9 ರವರೆಗೆ ವಿವಿಧ ಸ್ವರೂಪಗಳಲ್ಲಿ ಸರಣಿಗಳು ನಡೆಯಲಿವೆ. ಪಿಟಿಐ ವರದಿ ಮಾಡಿರುವ ಪ್ರಕಾರ, ‘WPL ನಂತರ, ಲೀ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಾಕಷ್ಟು ಅನುಭವವಿರುವ ನಿಕೋಲಸ್ ಲೀ

ನಿಕೋಲಸ್ ಲೀ ಕ್ರಿಕೆಟ್​ನಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ. ಅವರು ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದು, 13 ಪಂದ್ಯಗಳಲ್ಲಿ 490 ರನ್ ಗಳಿಸಿದ್ದಾರೆ. ಹಾಗೆಯೇ ಇತ್ತೀಚೆಗೆ ಯುಎಇಯ ಐಎಲ್‌ಟಿ 20 ಲೀಗ್‌ನಲ್ಲಿ ಗಲ್ಫ್ ಜೈಂಟ್ಸ್ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು, ಅವರು ಜನವರಿ 2024 ರಿಂದ ಡಿಸೆಂಬರ್ 2025 ರವರೆಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸಿದರು. ಹಾಗೆಯೇ ಮಾರ್ಚ್ 2020 ರಿಂದ ಜನವರಿ 2024 ರವರೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ನಂತರ ಅಕ್ಟೋಬರ್ 2016 ರಿಂದ ಮಾರ್ಚ್ 2020 ರವರೆಗೆ ಶ್ರೀಲಂಕಾ ಪುರುಷರ ತಂಡದೊಂದಿಗೂ ಕೆಲಸ ಮಾಡಿದ್ದರು.

U19 World Cup: ಅಂಡರ್-19 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡ ಪ್ರಕಟ

ದೇಶೀಯ ಮಟ್ಟದಲ್ಲಿ, ಲೀ ಮಾರ್ಚ್ 2012 ರಿಂದ ಸೆಪ್ಟೆಂಬರ್ 2016 ರವರೆಗೆ ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ನಲ್ಲಿ ಪ್ರಮುಖ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು, ಜನವರಿ 2010 ರಿಂದ ಮಾರ್ಚ್ 2012 ರವರೆಗೆ ಸಹಾಯಕ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಆಸ್ಟ್ರೇಲಿಯಾದ ಸವಾಲಿನ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಲೀ ಅವರ ನೇಮಕಾತಿ ಭಾರತೀಯ ಮಹಿಳಾ ತಂಡಕ್ಕೆ ಮಹತ್ವದ್ದಾಗಿದೆ. ಅವರ ಪರಿಣತಿಯು ತಂಡದ ಫಿಟ್‌ನೆಸ್ ಮತ್ತು ಪ್ರದರ್ಶನಕ್ಕೆ ಹೊಸ ಶಕ್ತಿಯನ್ನು ತುಂಬುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ