IPL 2022: CSK ತಂಡದಿಂದ ಸ್ಟಾರ್ ಆಟಗಾರ ಔಟ್: ಯುವ ಆಟಗಾರನಿಗೆ ಮಣೆ
IPL 2022 CSK: ಐಪಿಎಲ್ನಲ್ಲಿ 205 ಪಂದ್ಯಗಳನ್ನಾಡಿರುವ ರೈನಾ 5528 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 39 ಅರ್ಧಶತಕಗಳು ಸೇರಿವೆ. ಆದರೆ ಕಳೆದ ಸೀಸನ್ ಐಪಿಎಲ್ನಲ್ಲಿ ರೈನಾ ಫಾರ್ಮ್ನಲ್ಲಿರಲಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಪ್ರಸ್ತುತ ಇರುವ 8 ಫ್ರಾಂಚೈಸಿಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಅದರಂತೆ ಎಲ್ಲಾ ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಆದರೆ ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉಳಿಸಿಕೊಳ್ಳಲಿರುವ ಪ್ರಮುಖ ಆಟಗಾರರ ಪಟ್ಟಿಯಲ್ಲಿ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಅವರ ಹೆಸರಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಸಿಎಸ್ಕೆ ಮೂಲಗಳ ಮಾಹಿತಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಸುರೇಶ್ ರೈನಾ ಅವರನ್ನು ಬಿಡುಗಡೆ ಮಾಡಲಿದೆ. ಬದಲಾಗಿ ಇಬ್ಬರು ಆರಂಭಿಕರನ್ನೇ ಉಳಿಸಿಕೊಳ್ಳಲಿದೆ.
ಅಂದರೆ ಇಲ್ಲಿ ಸಿಎಸ್ಕೆ ತಂಡವು ಸುರೇಶ್ ರೈನಾ ಅವರನ್ನು ಬಿಡುಗಡೆಗೊಳಿಸಿ ಅವರ ಸ್ಥಾನದಲ್ಲಿ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ಇನ್ನು ಮತ್ತೋರ್ವ ಆರಂಭಿಕ ಆಟಗಾರನಾಗಿ ವಿದೇಶಿ ಆಟಗಾರನ ಕೋಟಾದಲ್ಲಿ ಫಾಫ್ ಡುಪ್ಲೆಸಿಸ್ ಅವರನ್ನು ರಿಟೈನ್ ಮಾಡಿಕೊಳ್ಳಬಹುದು.
ಅದೇ ರೀತಿ ಸಿಎಸ್ಕೆ ತಂಡವು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಹೀಗಾಗಿ ಜಡ್ಡು ಕೂಡ ತಂಡದಲ್ಲೇ ಉಳಿಯಲಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ಬಯಸಿದರೆ ಸಿಎಸ್ಕೆ ತಂಡವು ಅವರನ್ನು ಉಳಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
ಏಕೆಂದರೆ ಇತ್ತೀಚೆಗೆ ಮಾತನಾಡಿದ್ದ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್, ಮಹೇಂದ್ರ ಸಿಂಗ್ ಧೋನಿ ತಂಡದಿಂದ ರಿಟೈನ್ ಆಗಲು ಬಯಸುತ್ತಿಲ್ಲ ಎಂದು ತಿಳಿಸಿದ್ದರು. ಅವರನ್ನು ಉಳಿಸಿಕೊಂಡರೆ ತಂಡವು ದೊಡ್ಡ ಪಾವತಿಸಬೇಕಾಗುತ್ತದೆ. ಹೀಗಾಗಿ ಅವರ ಸ್ಥಾನದಲ್ಲಿ ಉತ್ತಮ ಆಟಗಾರರನ್ನು ಉಳಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದ್ದರು. ಇದಾಗ್ಯೂ ಸಿಎಸ್ಕೆ ಧೋನಿಯನ್ನು ಮನವೊಲಿಸಿದರೆ ಅವರು ತಂಡದಲ್ಲಿ ರಿಟೈನ್ ಆಗಲಿದ್ದಾರೆ. ಇಲ್ಲದಿದ್ದರೆ ಹರಾಜಿನಲ್ಲಿ ಕಾಣಿಸಿಕೊಂಡು ಮತ್ತೆ ಸಿಎಸ್ಕೆ ತಂಡಕ್ಕೆ ಹಿಂತಿರುಗಲಿದ್ದಾರೆ.
ಒಟ್ಟಿನಲ್ಲಿ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ಸಿಎಸ್ಕೆ ತಂಡದಿಂದ ಹೊರಬೀಳುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಇದುವರೆಗೆ ಐಪಿಎಲ್ನಲ್ಲಿ 205 ಪಂದ್ಯಗಳನ್ನಾಡಿರುವ ರೈನಾ 5528 ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 39 ಅರ್ಧಶತಕಗಳು ಸೇರಿವೆ. ಆದರೆ ಕಳೆದ ಸೀಸನ್ ಐಪಿಎಲ್ನಲ್ಲಿ ರೈನಾ ಫಾರ್ಮ್ನಲ್ಲಿರಲಿಲ್ಲ. ಹೀಗಾಗಿ ಅವರನ್ನು ಕೆಲ ಪಂದ್ಯಗಳಿಂದ ಹೊರಗಿಡಲಾಗಿತ್ತು. ಇದಾಗ್ಯೂ ಮುಂದಿನ ಸೀಸನ್ ವೇಳೆಗೆ ರೈನಾ ಕಂಬ್ಯಾಕ್ ಮಾಡುವ ಸಾಧ್ಯತೆಯಿದ್ದು, ಹೀಗಾಗಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೂ ಕೆಲ ಫ್ರಾಂಚೈಸಿಗಳು ರೈನಾ ಅವರ ಖರೀದಿಗೆ ಮುಂದಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
ಇದನ್ನೂ ಓದಿ: ಟಿ20 ಕ್ರಿಕೆಟ್ಗೆ ಮತ್ತೊಂದು ಲೀಗ್: ಹೊಸ ತಂಡ ಖರೀದಿಸಿದ ಮುಂಬೈ ಇಂಡಿಯನ್ಸ್
ಇದನ್ನೂ ಓದಿ: ಹಲಾಲ್ ಮಾಂಸ ಅಥವಾ ಹಲಾಲ್ ಕಟ್ ಎಂದರೇನು?
ಇದನ್ನೂ ಓದಿ: IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಜೆರ್ಸಿ ಫೋಟೋ ವೈರಲ್
(csk to release suresh raina ahead of ipl 2022)