Fact Check: ಆರ್ಸಿಬಿ ಗೆದ್ದ ಬಳಿಕ ಅನುಷ್ಕಾ ಶರ್ಮಾ ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ್ದು ನಿಜವೇ?
Virat Kohli Anushka Sharma: ಐಪಿಎಲ್ 2025ರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲುವಿ ಸಾಧಿಸಿದ ನಂತರ ಪೋಟೋ ಒಂದು ಭರ್ಜರಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಫೋಟೋದಲ್ಲಿ, ಕ್ರಿಕೆಟ್ ಗ್ರೌಂಡ್ನಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಯ ಪಾದ ಮುಟ್ಟಲು ಮುಂದಾಗುತ್ತರುವುದನ್ನು ಕಾಣಬಹುದು. ಕೊಹ್ಲಿ ಆರ್ಸಿಬಿ ಜೆರ್ಸಿಯಲ್ಲಿದ್ದರೆ ಅನುಷ್ಕಾ ಕೆಂಪು ಬಣ್ಣದ ಸೀರೆ ಉಟ್ಟಿದ್ದಾರೆ.

ಬೆಂಗಳೂರು (ಮಾ. 25): ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು ನಾಲ್ಕು ಪಂದ್ಯಗಳು ಮುಕ್ತಾಯಗೊಂಡಿವೆ. ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಟೀಮ್ ವಿರುದ್ಧ 7 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಐಪಿಎಲ್ 2025 ಟೂರ್ನಿಯಲ್ಲಿ ಆರ್ಸಿಬಿ ಭರ್ಜರಿ ಆಗಿ ಆರಂಭಿಸಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 36 ಎಸೆತಗಳಲ್ಲಿ 59 ರನ್ ಬಾರಿಸಿ ಅಜೇಯರಾಗಿ ಉಳಿದರು. ಆರ್ಸಿಬಿ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಪಂದ್ಯಕ್ಕೆ ಸಂಬಂಧ ಪಟ್ಟ ಪೋಟೋ ಒಂದು ಭರ್ಜರಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಫೋಟೋದಲ್ಲಿ, ಕ್ರಿಕೆಟ್ ಗ್ರೌಂಡ್ನಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಯ ಪಾದ ಮುಟ್ಟಲು ಮುಂದಾಗುತ್ತರುವುದನ್ನು ಕಾಣಬಹುದು. ಕೊಹ್ಲಿ ಆರ್ಸಿಬಿ ಜೆರ್ಸಿಯಲ್ಲಿದ್ದರೆ ಅನುಷ್ಕಾ ಕೆಂಪು ಬಣ್ಣದ ಸೀರೆ ಉಟ್ಟಿದ್ದಾರೆ. ಫೇಸ್ಬುಕ್ ಹಾಗೂ ಕೆಲ ಯೂಟ್ಯೂಬ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡು, ‘‘ಕೆಕೆಆರ್ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಯ ಪಾದಗಳನ್ನು ಮುಟ್ಟಿದ ಅನುಷ್ಕಾ ಶರ್ಮಾ’’ ಎಂದು ಬರೆದುಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಕೊಹ್ಲಿಯ ಪಾದ ಮುಟ್ಟಿದ್ದಾರೆ ಎಂಬ ಫೋಟೋದ ಸತ್ಯಾಂಶ ಏನು?:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದೊಂದು ಸುಳ್ಳು ವಿಚಾರ ಎಂಬುದು ತಿಳಿದುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ್ದಾರೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು, ಅಧಿಕೃತ ಹೇಳಿಕೆಗಳು ಅಥವಾ ಸಾಮಾಜಿಕ ಮಾಧ್ಯಮ ಹೇಳಿಕೆಗಳು ಕಂಡುಬಂದಿಲ್ಲ. ಈ ಸುದ್ದಿ ನಿಜವಾದದ್ದಾಗಿದ್ದರೆ, ಮುಖ್ಯವಾಹಿನಿಯ ಮಾಧ್ಯಮಗಳು ಅವುಗಳನ್ನು ವರದಿ ಮಾಡುತ್ತಿದ್ದವು. ಅಂತಹ ಯಾವುದೇ ವರದಿ ನಮಗೆ ಸಿಕ್ಕಿಲ್ಲ.
ಇದಲ್ಲದೆ, ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಸ್ವಾಭಾವಿಕ ಮುಖಭಾವಗಳು, ಅಸಮಂಜಸ ಬೆಳಕು, ಬ್ಯಾಕ್ಗ್ರೌಂಡ್ನಲ್ಲಿ ಕೂಡ ಮಸುಕು ಮತ್ತು ಮುಖಗಳು ವಿರೂಪವಾಗಿರುವಂತಹ ಹಲವಾರು ಸಂಗತಿಗಳು ನಮಗೆ ಕಂಡುಬಂತು. ಹೀಗಾಗಿ ಇವುಗಳನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ರಚಿಸಿರಬಹುದು ಎಂಬ ಅನುಮಾನ ಮೂಡಿತು.
Fact Check: ಚೆಪಾಕ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಜೊತೆ ಕಾಣಿಸಿಕೊಂಡ ಸೂಪರ್ ಸ್ಟಾರ್ ಮಹೇಶ್ ಬಾಬು?
ಮತ್ತಷ್ಟು ಪರಿಶೀಲಿಸಲು, ನಾವು ಚಿತ್ರಗಳನ್ನು AI ಪತ್ತೆ ಸಾಧನ – ಹೈವ್ ಮಾಡರೇಶನ್ ಮೂಲಕ ನಡೆಸಿದ್ದೇವೆ. ಈ ಫೋಟೋವನ್ನು ಡಿಜಿಟಲ್ ರೂಪದಲ್ಲಿ ರಚಿಸಲಾಗಿದೆಯೇ ಹೊರತು ನಿಜವಾದ ಛಾಯಾಚಿತ್ರಗಳಲ್ಲ ಎಂದು ಇದು ತಿಳಿಸಿದೆ. ಹಾಗೆಯೆ ನಂತರ ನಾವು wasitai.com ನಲ್ಲಿ ವೈರಲ್ ಫೋಟೋವನ್ನು ಅಪ್‌ಲೋಡ್ ಮಾಡಿ ಪರಿಶೀಲಿಸಿದೆವು. ಆ ಫಲಿತಾಂಶದಲ್ಲಿಯೂ ವೈರಲ್ ಚಿತ್ರವು AI ನಿಂದ ರಚಿತವಾಗಿದೆ ಎಂದು ಕಂಡುಬಂದಿದೆ.
ಹೀಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ ಗೆದ್ದ ಬಳಿಕ ಅನುಷ್ಕಾ ಶರ್ಮಾ ಕೊಹ್ಲಿಯ ಪಾದ ಮುಟ್ಟಿ ನಮಸ್ಕರಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಫೋಟೋಗಳು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟವು ಮತ್ತು ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಅಂತಹ ಯಾವುದೇ ಘಟನೆ ಆರ್ಸಿಬಿ-ಕೆಕೆಆರ್ ಪಂದ್ಯದಲ್ಲಿ ನಡೆದಿಲ್ಲ, ಅಲ್ಲದೆ ಐಪಿಎಲ್ 2025ರ ಮೊದಲ ಪಂದ್ಯ ವೀಕ್ಷಣೆಗೆ ಅನುಷ್ಕಾ ಶರ್ಮಾ ಅವರು ಬಂದೇ ಇಲ್ಲ ಎಂದು ವರದಿ ಆಗಿವೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025 ರಲ್ಲಿ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದು ಎರಡು ಅಂಕ ಸಂಪಾದಿಸಿದೆ. +2.137 ರನ್ ರೇಟ್ ಆಧಾರದ ಮೇಲೆ ಎರಡನೇ ಸ್ಥಾನದಲ್ಲಿದೆ. ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಮುಂಬರುವ ಪಂದ್ಯದಲ್ಲಿ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ