T20 World Cup 2024: ಅಮೆರಿಕಕ್ಕೆ ಹಾರಲಿದೆ ಪ್ರಮುಖ 6 ಆಟಗಾರರ ಮೊದಲ ಬ್ಯಾಚ್
T20 World Cup 2024: ಪ್ರಸ್ತುತ ಭಾರತದಲ್ಲಿ ಐಪಿಎಲ್ ನಡೆಯುತ್ತಿರುವ ಕಾರಣ ಎಲ್ಲಾ ಆಟಗಾರರು ಒಮ್ಮೆಯೇ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಹೀಗಾಗಿ ಎರಡೆರಡು ಬ್ಯಾಚ್ಗಳಾಗಿ ಆಟಗಾರರು ಟಿ20 ವಿಶ್ವಕಪ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅದರಲ್ಲಿ ಮೊದಲ ಬ್ಯಾಚ್ನಲ್ಲಿ ಈ ಆರು ಆಟಗಾರರು ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ.

9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಜೂನ್ 1 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಈ ಟೂರ್ನಿಗೆ ಭಾರತ ತಂಡವನ್ನು (Team India) ಸಹ ಪ್ರಕಟಿಸಲಾಗಿದೆ. 15 ಆಟಗಾರರು ಭಾರತ ಮುಖ್ಯ ತಂಡದಲ್ಲಿ ಆಯ್ಕೆಯಾಗಿದ್ದರೆ, ನಾಲ್ವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡ ಜೂನ್ 5ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಭರ್ಜರಿ ಪಂದ್ಯ ನಡೆಯಲಿದೆ. ಪ್ರಸ್ತುತ ಭಾರತದಲ್ಲಿ ಐಪಿಎಲ್ (IPL 2024) ನಡೆಯುತ್ತಿರುವ ಕಾರಣ ಎಲ್ಲಾ ಆಟಗಾರರು ಒಮ್ಮೆಯೇ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಹೀಗಾಗಿ ಎರಡೆರಡು ಬ್ಯಾಚ್ಗಳಾಗಿ ಆಟಗಾರರು ಟಿ20 ವಿಶ್ವಕಪ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅದರಲ್ಲಿ ಮೊದಲ ಬ್ಯಾಚ್ನಲ್ಲಿ ಈ ಆರು ಆಟಗಾರರು ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ.
ಮೇಲೆ ಹೇಳಿದಂತೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಆಟಗಾರರು ಆಡುತ್ತಿದ್ದಾರೆ. ಹೀಗಾಗಿ ಪ್ಲೇಆಫ್‌ಗೆ ಪ್ರವೇಶಿಸುವ ತಂಡಗಳ ಆಟಗಾರರು ಆ ನಂತರ ಟಿ20 ವಿಶ್ವಕಪ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಪ್ಲೇಆಫ್ ರೇಸ್‌ನಿಂದ ಹೊರಗುಳಿಯುವ ತಂಡಗಳ ಆಟಗಾರರು ಮೊದಲ ಬ್ಯಾಚ್ನಲ್ಲಿ ಅಮೆರಿಕಕ್ಕೆ ಪ್ರಯಾಣಿಸಲಿದ್ದಾರೆ.
ಪ್ಲೇಆಫ್ನಿಂದ ಮುಂಬೈ- ಆರ್ಸಿಬಿ ಬಹುತೇಕ ಔಟ್
ಆದರೆ ಪ್ರಸ್ತುತ ಪಾಯಿಂಟ್ ಪಟ್ಟಿ ನೋಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿವೆ. ಉಭಯ ತಂಡಗಳು ತಲಾ 10 ಪಂದ್ಯಗಳನ್ನು ಆಡಿದ್ದು, ಕೇವಲ 3 ಪಂದ್ಯಗಳಲ್ಲಿ ಗೆದ್ದಿವೆ. ಇದರೊಂದಿಗೆ ತಲಾ 6 ಅಂಕಗಳನ್ನು ಹೊಂದಿವೆ. ಅಂತಹ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು ತಮ್ಮ ಉಳಿದ 4 ಪಂದ್ಯಗಳನ್ನು ಗೆದ್ದರೂ, ಕೇವಲ 14 ಅಂಕಗಳನ್ನು ಸಂಪಾದಿಸುತ್ತವೆ. ಆದರೆ ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ಹೋಗಲು ಕನಿಷ್ಠ 16 ಅಂಕಗಳಾದರೂ ಇರಬೇಕು.
ಇದರರ್ಥ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿವೆ. ಆದ್ದರಿಂದ ಈ ಎರಡು ತಂಡಗಳಿಂದ ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರು ಶೀಘ್ರದಲ್ಲೇ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಆಟಗಾರರಲ್ಲಿ ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಹಾಗೂ ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಸೇರಿದ್ದಾರೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಚಾಹಲ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Fri, 3 May 24
