ಮೈದಾನದಲ್ಲೇ ಗುರ್ನೂರ್-ಟಿಕ್ನರ್ ವಾರ್! ಮರು ಎಸೆತದಲ್ಲೇ ಕಿವೀಸ್ ಬ್ಯಾಟರ್ ಔಟ್; ವಿಡಿಯೋ
ಆಕ್ಲೆಂಡ್‌ನಲ್ಲಿ ನಡೆದ ಭಾರತ vs ನ್ಯೂಜಿಲೆಂಡ್ ಮೊದಲ ODIನಲ್ಲಿ ಟೀಂ ಇಂಡಿಯಾ ಸುಲಭ ಗೆಲುವು ಸಾಧಿಸಿತು. ಬೌಲರ್‌ಗಳು ಪ್ರಮುಖ ಪಾತ್ರ ವಹಿಸಿದರು. ಬ್ಲೇರ್ ಟಿಕ್ನರ್ ಕೊನೆಯ ವಿಕೆಟ್‌ಗೆ 34 ರನ್ ಗಳಿಸಿ ತಂಡಕ್ಕೆ ನೆರವಾದರು. ಆದರೆ ಗುರ್ನೂರ್ ಬ್ರಾರ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ, ಬ್ರಾರ್ ಮುಂದಿನ ಎಸೆತದಲ್ಲೇ ಟಿಕ್ನರ್ ವಿಕೆಟ್ ಕಬಳಿಸಿ ಭಾರತದ ಗೆಲುವಿಗೆ ಕಾರಣರಾದರು.

ಆಕ್ಲೆಂಡ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿದೆ. ತಂಡದ ಈ ಗೆಲುವಿನಲ್ಲಿ ಬೌಲರ್‌ಗಳು ಪ್ರಮುಖ ಪಾತ್ರವಹಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಭಾರತದ ಬೌಲರ್‌ಗಳು ಕೇವಲ 185 ರನ್‌ಗಳಿಗೆ ಆಲೌಟ್ ಮಾಡಿದರು. ಕಿವೀಸ್ ಪಡೆ 150 ರನ್‌ಗಳ ಗಡಿ ದಾಟುವುದು ಕಷ್ಟಕರವಾಗಿತ್ತು. ಆದರೆ 11ನೇ ಕ್ರಮಾಂಕದಲ್ಲಿ ಬಂದ ಬ್ಲೇರ್ ಟಿಕ್ನರ್ 34 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ನೆರವಾದರು. ಇದೇ ವೇಳೆ ಬ್ಲೇರ್ ಟಿಕ್ನರ್ ಮತ್ತು ಭಾರತದ ಯುವ ವೇಗಿ ಗುರ್ನೂರ್ ಬ್ರಾರ್ ನಡುವೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಯಿತು. ಆದರೆ ಈ ಚಕಮಕಿ ನಡೆದ ಮುಂದಿನ ಎಸೆತದಲ್ಲೇ ಬ್ರಾರ್, ಬ್ಲೇರ್ ಟಿಕ್ನರ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಬ್ಲೇರ್ ಟಿಕ್ನರ್ ಸ್ಫೋಟಕ ಬ್ಯಾಟಿಂಗ್
ಒಂದು ಹಂತದಲ್ಲಿ ನ್ಯೂಜಿಲೆಂಡ್ ತಂಡ 146 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ ಕೊನೆಯ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬ್ಲೇರ್ ಟಿಕ್ನರ್ ಮತ್ತು ಜಾಕೋಬ್ ಡಫಿ ಭಾರತೀಯ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು. ವಿಶೇಷವಾಗಿ 11ನೇ ಕ್ರಮಾಂಕದ ಬ್ಯಾಟರ್ ಬ್ಲೇರ್ ಟಿಕ್ನರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಜಾಕೋಬ್ ಡಫಿ ಜೊತೆಗೂಡಿ ಕೊನೆಯ ವಿಕೆಟ್‌ಗೆ ಮಹತ್ವದ ಜೊತೆಯಾಟವಾಡಿದ ಅವರು, ಅರ್ಷದೀಪ್ ಸಿಂಗ್ ಅವರ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿ ಒಟ್ಟು 23 ರನ್ ಕಲೆಹಾಕಿದರು. ಆದರೆ ಗುರ್ನೂರ್ ಬ್ರಾರ್ ಬೌಲಿಂಗ್‌ಗೆ ಬಂದಾಗ ಟಿಕ್ನರ್ ಅವರೊಂದಿಗೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಯಿತು.
ಗುರ್ನೂರ್-ಟಿಕ್ನರ್ ನಡುವೆ ಮಾತಿನ ಚಕಮಕಿ
ನ್ಯೂಜಿಲೆಂಡ್ ಇನ್ನಿಂಗ್ಸ್‌ನ 41ನೇ ಓವರ್‌ನಲ್ಲಿ ಗುರ್ನೂರ್ ಬ್ರಾರ್ ಮತ್ತು ಬ್ಲೇರ್ ಟಿಕ್ನರ್ ನಡುವೆ ಸಣ್ಣ ವಾಗ್ವಾದ ನಡೆಯಿತು. ಗುರ್ನೂರ್ ಎಸೆದ ಈ ಓವರ್‌ನ ಮೊದಲ ಎಸೆತವನ್ನು ಟಿಕ್ನರ್ ಸರಿಯಾಗಿ ಆಡಲು ಬೀಸಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಭಾರತೀಯ ವೇಗಿ ಟಿಕ್ನರ್‌ಗೆ ಮಾತಿನ ಮೂಲಕ ತಿರುಗೇಟು ನೀಡಿದರು. ಇದಕ್ಕೆ ಟಿಕ್ನರ್ ಕೂಡ ಪ್ರತಿಕ್ರಿಯೆ ನೀಡಿದರು. ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಆದರೆ ಈ ವಾಗ್ವಾದಕ್ಕೆ ಗುರ್ನೂರ್ ಬ್ರಾರ್ ಚೆಂಡಿನ ಮೂಲಕವೇ ಉತ್ತರ ನೀಡಿದರು. ಮುಂದಿನ ಎಸೆತದಲ್ಲೇ ಟಿಕ್ನರ್ ಅವರ ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್‌ಗೆ ತೆರೆ ಎಳೆದರು.
@mufaddal_vohra Gurnoor Barar won 😀🤸✌️
#INDvsNZ #TeamIndia #GurnoorBrar @cricketaakash @Vikra https://t.co/a4ShNZhDK7
— V9दGodaraकणाऊ (@VinodGodara_) November 4, 2026
ಕೊನೆಯ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ
ನ್ಯೂಜಿಲೆಂಡ್ ಪರ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬ್ಲೇರ್ ಟಿಕ್ನರ್ ಕೇವಲ 23 ಎಸೆತಗಳಲ್ಲಿ 34 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಸಿಕ್ಸರ್‌ಗಳು ಕೂಡ ಸೇರಿದ್ದವು. ಮತ್ತೊಂದೆಡೆ ಜಾಕೋಬ್ ಡಫಿ ಕೂಡ ಅವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಕೊನೆಯ ವಿಕೆಟ್‌ಗೆ ಅಮೂಲ್ಯ 39 ರನ್‌ಗಳ ಜೊತೆಯಾಟವಾಡಿತು. ಪರಿಣಾಮವಾಗಿ 146 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ತಂಡದ ಮೊತ್ತ 185 ರನ್‌ಗಳಿಗೆ ಏರಿತು. ಅಂತಿಮವಾಗಿ ಗುರ್ನೂರ್ ಬ್ರಾರ್ ಟಿಕ್ನರ್ ಅವರ ವಿಕೆಟ್ ಪಡೆಯುವ ಮೂಲಕ ಈ ಜೊತೆಯಾಟಕ್ಕೆ ಅಂತ್ಯ ಹಾಡಿದರು.




