7 ಸಿಕ್ಸ್, 10 ಫೋರ್: ತೂಫಾನ್ ಸೆಂಚುರಿ ಸಿಡಿಸಿ ದಾಖಲೆ ಬರೆದ ಹಸನ್ ನವಾಝ್
New Zealand vs Pakistan: ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ಪರ ಹಸನ್ ನವಾಝ್ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 45 ಎಸೆತಗಳನ್ನು ಎದುರಿಸಿದ ಹಸನ್ 7 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 105 ರನ್ ಬಾರಿಸಿದ್ದಾರೆ. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಪಾಕ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

New Zealand vs Pakistan: ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ದಾಂಡಿಗ ಹಸನ್ ನವಾಝ್ (Hasan Nawaz). ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಕಿವೀಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ಕ್ ಚಾಪ್ಮನ್ 44 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 94 ರನ್ ಸಿಡಿಸಿದ್ದರು. ಇನ್ನು ಮೈಕಲ್ ಬ್ರೇಸ್‌ವೆಲ್ 18 ಎಸೆತಗಳಲ್ಲಿ 31 ರನ್ ಚಚ್ಚಿದರು. ಈ ಮೂಲಕ ನ್ಯೂಝಿಲೆಂಡ್ ತಂಡ 19.5 ಓವರ್ಗಳಲ್ಲಿ 204 ರನ್ಗಳಿಸಿ ಆಲೌಟ್ ಆಯಿತು.
ಭರ್ಜರಿ ಚೇಸಿಂಗ್:
205 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಆರಂಭಿಕರಾದ ಹಸನ್ ನವಾಝ್ ಹಾಗೂ ಹ್ಯಾರಿಸ್ ಸ್ಪೋಟಕ ಆರಂಭ ಒದಗಿಸಿದ್ದರು. ಪವರ್ಪ್ಲೇನಲ್ಲೇ 74 ರನ್ ಕಲೆಹಾಕಿದ ಬಳಿಕ ಹ್ಯಾರಿಸ್ (41) ಔಟಾದರು.
ಇದಾಗ್ಯೂ ಮತ್ತೊಂದೆಡೆ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಹಸನ್ ನವಾಝ್ ಕಿವೀಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ 44 ಎಸೆತಗಳಲ್ಲಿ ಶತಕ ಮೂಡಿಬಂತು. ಈ ಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 16 ಓವರ್ಗಳಲ್ಲಿ 207 ರನ್ಗಳಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ದಾಖಲೆಯ ಶತಕ:
- ಪಾಕಿಸ್ತಾನ್ ಪರ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ದಾಖಲೆ ಇದೀಗ ಹಸನ್ ನವಾಝ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಬಾಬರ್ ಆಝಂ ಹೆಸರಿನಲ್ಲಿತ್ತು.
- ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂ 2021 ರಲ್ಲಿ ಸೌತ್ ಆಫ್ರಿಕಾ ವಿರುದ್ಧ 49 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.
- ಇದೀಗ ಕೇವಲ 44 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಹಸನ್ ನವಾಝ್ ಪಾಕಿಸ್ತಾನ್ ಪರ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
- ಈ ಮೂಲಕ ಟಿ20ಐ ಕ್ರಿಕೆಟ್ ಇತಿಹಾಸದಲ್ಲೇ ಪಾಕಿಸ್ತಾನ್ ಪರ 45 ಕ್ಕಿಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಿಮ್ ಸೀಫರ್ಟ್ , ಫಿನ್ ಅಲೆನ್ , ಮಾರ್ಕ್ ಚಾಪ್ಮನ್ , ಡ್ಯಾರಿಲ್ ಮಿಚೆಲ್ , ಜೇಮ್ಸ್ ನೀಶಮ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಕೈಲ್ ಜೇಮಿಸನ್ , ಜೇಕಬ್ ಡಫಿ , ಇಶ್ ಸೋಧಿ , ಬೆನ್ ಸಿಯರ್ಸ್.
ಇದನ್ನೂ ಓದಿ: IPL 2025: ಐಪಿಎಲ್ನಲ್ಲಿ 10 ನಿಮಯಗಳು ಬದಲಾವಣೆ
ಪಾಕಿಸ್ತಾನ್ ಪ್ಲೇಯಿಂಗ್ 11: ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್) , ಹಸನ್ ನವಾಝ್ , ಸಲ್ಮಾನ್ ಅಘಾ (ನಾಯಕ) , ಇರ್ಫಾನ್ ಖಾನ್ , ಖುಶ್ದಿಲ್ ಶಾ , ಶಾದಾಬ್ ಖಾನ್ , ಅಬ್ದುಲ್ ಸಮದ್ , ಶಾಹೀನ್ ಅಫ್ರಿದಿ , ಅಬ್ಬಾಸ್ ಅಫ್ರಿದಿ , ಅಬ್ರಾರ್ ಅಹ್ಮದ್ , ಹಾರಿಸ್ ರೌಫ್.