ಇನ್ನೂ ಸಹ 100% ಫಿಟ್ ಆಗಿಲ್ಲ: ಗಾಯದ ಬಗ್ಗೆ ಮಾಹಿತಿ ಹಂಚಿಕೊಂಡ ಕೊಹ್ಲಿ
Virat Kohli: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಫಿಟ್ನೆಸ್ ಸಮಸ್ಯೆಯ ಕಾರಣದಿಂದಾಗಿ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿಯಲಿಲ್ಲ. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅವರು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಕಣಕ್ಕಿಳಿದಿದ್ದರು. ಇದಾಗ್ಯೂ ಕಿಂಗ್ ಕೊಹ್ಲಿಯ ಬ್ಯಾಟಿಂಗ್ನಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ ಎಂಬುದು ವಿಶೇಷ.

ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಎಂದರೆ ಕೇವಲ ಒಬ್ಬ ಆಟಗಾರನಲ್ಲ, ಅದೊಂದು ಅದಮ್ಯ ಉತ್ಸಾಹದ ಜ್ವಾಲೆ. ಆದರೆ, ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ. ಅಂದರೆ ಫೀಲ್ಡಿಂಗ್ ಮಾಡದೇ ಬ್ಯಾಟಿಂಗ್‌ಗೆ ಮಾತ್ರ ಆಗಮಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಫಿಟ್ನೆಸ್ ಸಮಸ್ಯೆ.
ಈ ಫಿಟ್ನೆಸ್ ಸಮಸ್ಯೆಯ ನಡುವೆಯೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರಿಸಿದ್ದಾರೆ. ಕೇವಲ 34 ಎಸೆತಗಳನ್ನು ಎದುರಿಸಿದ ಕೊಹ್ಲಿ 49 ರನ್ ಬಾರಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಬಳಿಕ ಮಾತನಾಡಿದ ಕೊಹ್ಲಿ ದೈಹಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಆತಂಕಕಾರಿ ವಿಷಯವನ್ನು ಸ್ವತಃ ಕೊಹ್ಲಿ ಅವರೇ ಬಹಿರಂಗಪಡಿಸಿದ್ದಾರೆ.
“ನಾನು ಇನ್ನೂ 100% ಫಿಟ್ ಆಗಿಲ್ಲ”
ಪಂದ್ಯ ಮುಗಿದ ಬಳಿಕ ತಮ್ಮ ಫಿಟ್ನೆಸ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, “ನಾನಿನ್ನೂ ನೂರಕ್ಕೆ ನೂರರಷ್ಟು ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ, ಕಳೆದ 4-5 ದಿನಗಳಿಂದ ಆರೋಗ್ಯದ ಏರುಪೇರಿನಿಂದಾಗಿ ವೈದ್ಯಕೀಯ ತಪಾಸಣೆಯಲ್ಲಿದ್ದೆ. ಆದರೂ, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ನನಗೆ ತೃಪ್ತಿ ನೀಡಿದೆ,” ಎಂದು ಹೇಳಿದ್ದಾರೆ.
ಬದಲಾದ ಪಿಚ್!
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಪೂರಕವಾಗಿರುತ್ತದೆ. ಆದರೆ ಇಂದಿನ ಪಿಚ್ ಬಗ್ಗೆ ಮಾತನಾಡಿದ ಕೊಹ್ಲಿ, “ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲು ಇರುವುದರಿಂದ ಪಿಚ್ ಒಣಗಿದಂತಾಗಿತ್ತು. ಚೆಂಡು ನಿಧಾನವಾಗಿ ಬರುತ್ತಿತ್ತು. ಹಾಗಾಗಿ, ಆರಂಭದ 5-6 ಓವರ್‌ಗಳಲ್ಲೇ ಹೆಚ್ಚಿನ ರನ್ ಗಳಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದು ನಮ್ಮ ಯೋಜನೆಯಾಗಿತ್ತು. ಸಾಲ್ಟ್ ಜೊತೆಗೂಡಿ ಪವರ್‌ಪ್ಲೇನಲ್ಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಯಿತು,” ಎಂದಿದ್ದಾರೆ.
ಪಾಟಿದಾರ್ಗೆ ಬಹುಪರಾಕ್
ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ, “ರಜತ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಡುವ ರೀತಿ ಅದ್ಭುತವಾಗಿದೆ. ನಮ್ಮ ತಂಡದ ಮ್ಯಾನೇಜ್‌ಮೆಂಟ್, ಬ್ಯಾಟಿಂಗ್ ಕ್ರಮಾಂಕವನ್ನು ರೂಪಿಸಿರುವ ರೀತಿ ನಮಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದೆ. ನನ್ನ ನಂತರ ರಜತ್, ರೊಮಾರಿಯೋ ಮತ್ತು ಟಿಮ್ ಡೇವಿಡ್ ಅವರಂತಹ ಸ್ಫೋಟಕ ಆಟಗಾರರು ಇರುವುದು ನಮಗೆ ಭಯವಿಲ್ಲದೆ ಆಡಲು ಧೈರ್ಯ ನೀಡುತ್ತದೆ. ಐದು ವಿಕೆಟ್ ಬಿದ್ದರೂ ಈ ಆಟಗಾರರು ಕೇವಲ ನಾಲ್ಕು ಓವರ್‌ಗಳಲ್ಲಿ 50 ರನ್ ಸಿಡಿಸಬಲ್ಲರು. ಹೀಗಾಗಿ ನಾವು ಯಾವುದೇ ಒತ್ತಡದಿಂದ ಆಡಬೇಕಾದ ಪರಿಸ್ಥಿತಿ ತಂಡದಲ್ಲಿಲ್ಲ ಎಂದಿದ್ದಾರೆ.
ಮುಂದಿನ ಸವಾಲು
ಬದಲಾಗುತ್ತಿರುವ ಕ್ರಿಕೆಟ್ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, “ಪ್ರತಿ ಪಂದ್ಯವೂ 230-240 ರನ್ ಗಳಿಸುವ ಪಂದ್ಯವಾಗಿರುವುದಿಲ್ಲ. ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಒತ್ತಡ ಹೆಚ್ಚಾದಾಗ ಕೇವಲ ವೇಗದ ಆಟವಷ್ಟೇ ಅಲ್ಲದೆ, ಚಾಕಚಕ್ಯತೆಯೂ ಮುಖ್ಯವಾಗುತ್ತದೆ.
ಪರಿಸ್ಥಿತಿಗೆ ತಕ್ಕಂತೆ ಯಾರು ಹೊಂದಿಕೊಂಡು ಆಡುತ್ತಾರೋ ಅವರು ಸುದೀರ್ಘ ಕಾಲ ಪಂದ್ಯಾವಳಿಯಲ್ಲಿ ಉಳಿಯುತ್ತಾರೆ. ನಾನು ಕೂಡ ಆಧುನಿಕ ಕ್ರಿಕೆಟ್‌ನ ಬೇಡಿಕೆಗೆ ತಕ್ಕಂತೆ ನನ್ನ ಆಟವನ್ನು ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ದಾಖಲೆಯಲ್ಲ… ಕಿಂಗ್ ಕೊಹ್ಲಿ ಆರ್ಭಟಕ್ಕೆ ವಿಶ್ವ ದಾಖಲೆಯೇ ಧೂಳೀಪಟ
ತಂಡಕ್ಕೆ ಸ್ಫೂರ್ತಿಯಾದ ಕೊಹ್ಲಿ
ಮೊಣಕಾಲು ನೋವು ಮತ್ತು ಜ್ವರದಂತಹ ಸಮಸ್ಯೆಯಿದ್ದರೂ ತಂಡಕ್ಕಾಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಅವರ ಬದ್ಧತೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ತಾನು ಕೇವಲ “10 ಪ್ರತಿಶತದಷ್ಟು ರಿದಮ್‌ನಲ್ಲಿದ್ದೇನೆ” ಎಂದು ಅವರು ಹೇಳಿದ್ದರೂ, ಆ 10 ಪ್ರತಿಶತವೇ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದಂತು ಸುಳ್ಳಲ್ಲ.




